ಬೆಂಗಳೂರು:
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಗೆ ಕಾರಣಗಳನ್ನು ತಿಳಿಯಲು ಕಾಂಗ್ರೆಸ್ ಕೇಂದ್ರ ನಾಯಕರು ಗುರುವಾರ ರಾಜ್ಯದ ಕಾಂಗ್ರೆಸ್ ನಾಯಕರೊಂದಿಗೆ ಸರಣಿ ಸಭೆ ನಡೆಸಿದರು.
ಸಭೆ ಕುರಿತು ಮಾತನಾಡಿದ ಡಿಕೆ.ಶಿವಕುಮಾರ್ ಅವರು, ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ 1 ಕ್ಷೇತ್ರದಲ್ಲಿ ಮಾತ್ರ ಗೆದ್ದಿತ್ತು. ಈ ಬಾರಿ ಆ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಆದರೆ, ನಮ್ಮ ನಿರೀಕ್ಷೆಯಂತೆ 14-15 ಸ್ಥಾನಗಳು ಬಂದಿಲ್ಲ ಲೋಕಸಭೆ ಚುನಾವಣೆಯ ತಪ್ಪುಗಳನ್ನು ಕಾಂಗ್ರೆಸ್ ಮೌಲ್ಯಮಾಪನ ಮಾಡಿ ಸರಿಪಡಿಸಿಕೊಳ್ಳಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಎದುರಿಸಲು ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.
ಎಐಸಿಸಿ ಸತ್ಯಶೋಧನಾ ಸಮಿತಿಯ ಸಮ್ಮುಖದಲ್ಲಿ ಪಕ್ಷದ ಕಾರ್ಯವೈಖರಿ ಮೌಲ್ಯಮಾಪನ ನಡೆಯುತ್ತಿದೆ. ಈ ಪ್ರಕ್ರಿಯೆ ದೇಶಾದ್ಯಂತ ನಡೆಯುತ್ತಿದೆ. ರಾಜ್ಯದ ನಾಲ್ಕು ಭೌಗೋಳಿಕ ಪ್ರದೇಶಗಳಿಗೆ ನಮ್ಮ ವರದಿಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಚರ್ಚಿಸಿ ಲೋಪದೋಷಗಳನ್ನು ಪತ್ತೆ ಮಾಡುತ್ತೇವೆಂದು ತಿಳಿಸಿದರು.
ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಿದ ಸೂಕ್ಷ್ಮ ಅಂಶಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಲಾಭವಿದೆ ಎಂದು ತಿಳಿದಿದ್ದೆವು, ಮುಂದಿನ ಚುನಾವಣೆಯಲ್ಲಿ ಅವರ ವಿರುದ್ಧ ಹೋರಾಡಲು ನಾವು ಸಿದ್ಧರಾಗಬೇಕು.
ಸತ್ಯಶೋಧನಾ ಸಮಿತಿಯು ಶುಕ್ರವಾರ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಗಳು ಮತ್ತು ಇತರ ಮುಖಂಡರೊಂದಿಗೂ ಸಭೆ ನಡೆಸುತ್ತಿದೆ. ಸಮಿತಿಯು ತನ್ನ ವರದಿಯನ್ನು ಎಐಸಿಸಿಗೆ ನೀಡಲಿದೆ ಎಂದು ತಿಳಿಸಿದರು.