ಬಗೆದಷ್ಟು ಕೂತೂಹಲ ಹಾಗಲವಾಡಿ ಕೆರೆ : ಐತಿಹಾಸಿಕ ಹನುಮನ ವಿಗ್ರಹ ಪತ್ತೆ

ಎಂ.ಎನ್.ಕೋಟೆ :

      ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಕೆರೆಯಲ್ಲಿ ಮಣ್ಣು ತೆಗೆಯುವಾಗ ಆಂಜನೇಯಸ್ವಾಮಿ ವಿಗ್ರಹ ಪತ್ತೆಯಾಗಿದೆ. ಈ ವಿಗ್ರಹವು ಸುಮಾರು ಇನ್ನೂರು ವರ್ಷಗಳಷ್ಟು ಕಾಲದ ಹಳೆಯ ವಿಗ್ರಹವಾಗಿದ್ದು 15ನೇ ಶತಮಾನ ಹಾಗಲವಾಡಿ ಪಾಳೇಗಾರ ರಾಮಪ್ಪ ನಾಯಕನ ಕಾಲದ್ದಾಗಿರಬಹುದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ಸಂಶೋಧಕ ಅಮ್ಮನಘಟ್ಟ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.

      ವಿಗ್ರಹವು ಸುಮಾರು 3 ಅಡಿ ಎತ್ತರ, 2 ಅಡಿ ಅಗಲವಿದೆ. ಶಿಲ್ಪ ರಚನೆಯಗೆ ಬಣ್ಣದ ಬಳಪ್ಪದ ಕಲ್ಲು ಬಳಸಲಾಗಿದೆ. ಮೈಸೂರಿನಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ದೇಶನಾಲಯಕ್ಕೆ ಈ ಕುರಿತು ಮಾಹಿತಿ ನೀಡಲಾಗಿದೆ. ವಿಗ್ರಹವು ಆಕರ್ಷಣೆಯಾಗಿದ್ದು ಅಲ್ಲಲ್ಲಿ ಚಕ್ಕೆಗಳು ಎದ್ದು ಭಿನ್ನವಾಗಿದೆ.

       ವಿಗ್ರಹದ ಆಂಜನೇಯನು ದಕ್ಷಿಣಕ್ಕೆ ಮುಖ ಮಾಡಿದ್ದು, ಎಡಗಾಲನ್ನು ಮುಂದಕ್ಕೆ ಇಟ್ಟು ಬಲಗಾಲನ್ನು ಹಿಂದಕ್ಕೆ ಇಟ್ಟು, ಭದ್ರವಾಗಿ ಪೀಠವಾದ ಮೇಲೆ ಊರಿದ್ದಾನೆ. ಬಲಗೈ ಮೇಲೆತ್ತಿ ಎಡಗೈನಲ್ಲಿ ಸೌಗಂಧಿಕ ಪುಷ್ಪ ಹಿಡಿದಿದ್ದು ಕೊರಳಿನಲ್ಲಿ ಕಂಠಿಹಾರ ಧರಿಸಿದ್ದಾನೆ. ಪಾಳೇಗಾರರ ಕಾಲದಲ್ಲಿ ರಾಜಧಾನಿಯಾಗಿದ್ದ ಹಾಗಲವಾಡಿಯಲ್ಲಿ ಕೋಟೆ-ಕೊತ್ತಲಗಳು, ದೇವಾಲಯಗಳು, ಕಲ್ಯಾಣಿ ಹಾಗೂ ಶಾಸನಗಳಿವೆ. ಈ ಹಿಂದೆ ಕೆರೆಯಲ್ಲಿ ಸಿಕ್ಕಿದ್ದ ಹೊಯ್ಸಳರ ಕಾಲದ ಜನಾರ್ಧನ ಮೂರ್ತಿಯನ್ನು ಸಂರಕ್ಷಿಸಲಾಗಿದ್ದು ಈಗ ಸಿಕ್ಕಿರುವ ಹನುಮನಮೂರ್ತಿಯನ್ನು ಸಂರಕ್ಷಿಸಬೇಕಿದೆ. ಕೆರೆಯಲ್ಲಿ ಮಣ್ಣು ತೆಗೆಯುತ್ತಿದ್ದು ಇನ್ನೂ ಹೆಚ್ಚು ವಿಗ್ರಹಗಳು ಪತ್ತೆಯಾಗುವ ಸಾಧ್ಯತೆಗಳಿವೆ ಹಾಗಾಗಿ ಪುರತಾತ್ವ ಇಲಾಖೆ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಅಮ್ಮನಘಟ್ಟ ಶ್ರೀನಿವಾಸ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap