ಇಂದು ಕಾರ್ಮಿಕ ನ್ಯಾಯಾಲಯದಲ್ಲಿ ವಿಚಾರಣೆ

ಹರಿಹರ:

ಸಮಾಪನಾ ಪ್ರಕ್ರಿಯೆಯಲ್ಲಿರುವ ಇಲ್ಲಿನ ದಿ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆ ಕಾರ್ಮಿಕರಿಗೆ ಗ್ರಾಚ್ಯುಟಿ (ಉಪಧನ) ನೀಡುವ ಪ್ರಕರಣದ ಕುರಿತು ಮಹತ್ವದ ವಿಚಾರಣೆ ದಾವಣಗೆರೆಯ ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ಉಪಧನ ಪಾವತಿ ನಿಯಂತ್ರಣ ಪ್ರಾಧಿಕಾರಿಯವರ ನ್ಯಾಯಾಲಯದಲ್ಲಿ ಸೋಮವಾರ ನಡೆಯಲಿದೆ.

        ವಿಚಾರಣೆಗೆ ಹಾಜರಾಗಲು ಸಂಬಂಧಿತ ಅರ್ಜಿದಾರ ಕಾರ್ಮಿಕರಿಗೆ ಹಾಗೂ ದಿ ಬೋರ್ಡ್ ಆಫ್ ಟ್ರಸ್ಟಿ ಹಾಗೂ ಕಾರ್ಯದರ್ಶಿ ಕಿರ್ಲೋಸ್ಕರ್ ಲಿ. ಎಂಪ್ಲಾಯೀಸ್ ಗ್ರಾಚ್ಯುಟಿ ಫಂಡ್ ಟ್ರಸ್ಟ್‌ನ ಟ್ರಸ್ಟಿಗಳಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಕಾರ್ಖಾನೆ ಬಾಗಿಲು ಮುಚ್ಚಿ 21 ವರ್ಷಗಳಾಗಿವೆ. ಉಪಧನ ಪಾವತಿ ಕಾಯ್ದೆ-1972 ರಂತೆ ಹಾಗೂ ಕರ್ನಾಟಕ ಪೇಮೆಂಟ್ ಆಫ್ ಗ್ರಾಚುವಿಟಿ ರೂಲ್-1973 ಪ್ರಕಾರ ಕಾರ್ಮಿಕ ನಿವೃತ್ತಿ ಹೊಂದಿದ್ದರೆ ಅಥವಾ ಕಾರ್ಮಿಕ ಸೇವಾವಧಿಯಲ್ಲಿ ಮೃತಪಟ್ಟರೆ ಅಥವಾ ಕಾರ್ಖಾನೆ ಬಾಗಿಲು ಮುಚ್ಚಿದರೆ ಒಂದು ತಿಂಗಳೊಳಗೆ ಗ್ರಾಚ್ಯುಟಿ ವಿತರಣೆ ಮಾಡಬೇಕು. ಆದರೆ ಇಲ್ಲಿ ಕಾರ್ಖಾನೆ ಬಾಗಿಲು ಮುಚ್ಚಿ 21 ವರ್ಷಗಳಾದರೂ ಕಾರ್ಮಿಕರ ಕೈಗೆ ಗ್ರಾಚ್ಯುಟಿ ತಲುಪಿಲ್ಲ.

ಟ್ರಸ್ಟಿಗಳಿಗೆ ಆತ್ಮೀಯರಾದ 67 ಕಾರ್ಮಿಕರಿಗೆ ಪೂರ್ಣ ಮೊತ್ತದ ಗ್ರಾಚ್ಯುಟಿಯನ್ನು 2013ರಲ್ಲಿ ಟ್ರಸ್ಟ್ ವಿತರಣೆ ಮಾಡಿತ್ತು. ಉಳಿದ 1700 ಕಾರ್ಮಿಕರಿಗೆ ಸಿಕ್ಕಿರಲಿಲ್ಲ.

2014ರ ಏಪ್ರಿಲ್ 1ರಂದು ಈ ಕಾರ್ಖಾನೆ ಸಮಾಪನಾಧಿಕಾಯವರ (ಒಎಲ್) ಅಧೀನಕ್ಕೆ ಬಂತು. ಆಗ ಕಾರ್ಮಿಕರು ಒಎಲ್ ಅವರನ್ನು ಭೇಟಿ ಮಾಡಿದ್ದರು. ‘ಗ್ರಾಚ್ಯುಟಿ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಕಾರ್ಖಾನೆಯ ಗ್ರಾಚ್ಯುಟಿ ಟ್ರಸ್ಟ್‌ನಿಂದ ಪಡೆಯಿರಿ’ ಎಂದು 69 ಅರ್ಜಿ ನಮೂನೆಯನ್ನು ಕಾರ್ಮಿಕರಿಗೆ ವಿತರಿಸಿದ್ದರು.

ಗ್ರಾಚ್ಯುಟಿ ನೀಡುವಂತೆ ದಾವಣಗೆರೆ ಸಹಾಯಕ ಕಾರ್ಮಿಕ ಆಯುಕ್ತರ (ಎಎಲ್‍ಸಿ) ನ್ಯಾಯಾಲಯ 2014ರಲ್ಲಿ ಟ್ರಸ್ಟ್‌ಗೆ ಆದೇಶ ಮಾಡಿತ್ತು. ಇನ್ನೂ ಯಾಕೆ ನೀಡಿಲ್ಲ ಎಂದು 2016ರಲ್ಲಿ ಶೋಕಾಸ್‌ ನೋಟಿಸ್‌ ನೀಡಿತ್ತು.

ಅದೂ ಪ್ರಯೋಜನವಾಗದೇ ಇದ್ದಾಗ 2018ರಲ್ಲಿ ಆಗಿನ ಹೆಚ್ಚುವರಿ ಜಿಲ್ಲಾಧಿಕಾರಿಯವರು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಟ್ರಸ್ಟ್‌ನಿಂದ ಕಾರ್ಮಿಕರ ಗ್ರಾಚ್ಯುಟಿ ವಸೂಲಾತಿ ಮಾಡಲು ಸೂಚಿಸಿದ್ದರು. ಸರ್ಟಿಫಿಕೇಟ್ ಆಫ್ ರಿಕವರಿ ಆಫ್ ಗ್ರಾಚುವಿಟಿ ಬಿಡುಗಡೆ ಮಾಡಲಾಗಿತ್ತು.

ಈ ಸರ್ಟಿಫಿಕೇಟ್ ಅನ್ವಯ ಗ್ರಾಚುವಿಟಿ ಬಾಕಿಯನ್ನು ಭೂ ಕಂದಾಯ ಬಾಕಿಯೆಂದು ಪರಿವರ್ತನೆ ಮಾಡಿ ವಸೂಲು ಮಾಡಲು ಹರಿಹರ ತಹಶೀಲ್ದಾರ್‌ಗೆ ಸೂಚಿಸಲಾಗಿತ್ತು.

ಇಲ್ಲಿರುವ 203 ಎಕರೆ ಜಮೀನಿನಲ್ಲಿ ಯಾವ ಜಮೀನು ಮಾರಾಟವಾಗಿದೆ, ಯಾವುದು ಉಳಿದಿದೆ ಎಂಬ ಕುರಿತು ಮಾಹಿತಿ ತಿಳಿಯದೇ ಇರುವುದುರಿಂದ ಆಸ್ತಿ ಹರಾಜು ಮಾಡಲು ಆಗುತ್ತಿಲ್ಲ ಎಂದು ತಹಶೀಲ್ದಾರ್‌ ಅವರು 2019ರ ಡಿ.17ರಂದು ಜಿಲ್ಲಾಧಿಕಾರಿಗೆ ಉತ್ತರ ಬರೆದು ಸುಮ್ಮನಾಗಿದ್ದರು.

ಜಿಲ್ಲಾಧಿಕಾರಿ ಮತ್ತೆ ಜಿಲ್ಲಾ ಕಾರ್ಮಿಕ ಇಲಾಖೆಗೆ ಈ ಗೊಂದಲದ ಬಗ್ಗೆ ಬರೆದಿದ್ದರು. ಹೀಗೆ ಪತ್ರಗಳು ವಿನಿಮಯವಾದವೇ ಹೊರತು ಕಾರ್ಮಿಕರಿಗೆ ನ್ಯಾಯ ಸಿಗಲಿಲ್ಲ. ಇದೀಗ ಸೋಮವಾರ ಜಿಲ್ಲಾ ಕಾರ್ಮಿಕ ಅಧಿಕಾರಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಗೆ ಬಂದಿದೆ. ಕಾರ್ಮಿಕರಲ್ಲಿ ಮತ್ತೆ ಆಶಾ ಭಾವನೆ ಮೂಡಿದೆ.

 ‘ಉಪಧನ ಕೊಡಿಸಿ’

ಉಪಧನ ಕಾಯ್ದೆಯ ನಿಯಮದಡಿ ಟ್ರಸ್ಟ್‌ ಆಸ್ತಿ ಮಾತ್ರವಲ್ಲ, ಟ್ರಸ್ಟಿಗಳ ವೈಯಕ್ತಿಕ ಆಸ್ತಿಗಳನ್ನು ಕೂಡ ಜಪ್ತು ಮಾಡಿ ಹರಾಜು ಹಾಕಿ ಕಾರ್ಮಿಕರ ಬಾಕಿ ನೀಡಲು ಅವಕಾಶ ಇದೆ. ನೊಂದಿರುವ ಕಾರ್ಮಿಕರಿಗೆ ಉಪಧನ ಕೊಡಿಸುವ ಜವಾಬ್ದಾರಿ ಕಾರ್ಮಿಕ ಮತ್ತು ಕಂದಾಯ ಇಲಾಖೆಯ ಮೇಲಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap