ಹುಳಿಯಾರು:
ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವೈ.ಎಸ್.ಪಾಳ್ಯದ ನ್ಯಾಯಬೆಲೆ ಅಂಗಡಿಯಲ್ಲಿ ಕಲ್ಲು-ಮಣ್ಣು ಬೆರೆತ ರಾಗಿ ವಿತರಿಸಲಾಗುತ್ತಿದೆ ಎಂದು ಒಳಗೆರೆಹಳ್ಳಿ ಪಡಿತರದಾರರು ಆರೋಪಿಸಿದ್ದಾರೆ.
ಲಾಕ್ ಡೌನ್ ಸಂಕಷ್ಟಕ್ಕೆ ನೆರವಾಗುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಡಿತರ ಕಾರ್ಡುದಾರರ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ಮತ್ತು ರಾಗಿ ವಿತರಣೆ ಮಾಡುತ್ತಿದೆ. ಉತ್ತಮ ಗುಣಮಟ್ಟದ ಅಕ್ಕಿ ವಿತರಣೆ ಮಾಡುತ್ತಿದೆಯಾದರೂ ಕೋಳಿಗೆ ಹಾಕುವಂತಹ ಕಳಪೆ ಗುಣಮಟ್ಟದ ರಾಗಿ ವಿತರಿಸುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಕೆಲಸವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿರುವ ಬಹುತೇಕ ಪಡಿತರ ಕಾರ್ಡುದಾರು ಸರ್ಕಾರ ನೀಡುವ ಪಡಿತರ ಆಹಾರ ಧಾನ್ಯವನ್ನೇ ಅವಲಂಬಿಸಿದ್ದಾರೆ. ಸದ್ಯದ ಪರಿಸ್ಥಿತಿಗೆ ರೋಗ ನಿರೋಧಕ ಶಕ್ತಿ ಹೊಂದಿರುವ ರಾಗಿ ಹೆಚ್ಚು ಅವಶ್ಯಕವಾಗಿದೆ. ಇಂತಹ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ರಾಗಿ ವಿತರಣೆ ಮಾಡಿದ್ರೆ ಬಡವರು ರೋಗ ನಿರೋಧಕ ಶಕ್ತಿ ಪಡೆಯುವುದಾರರು ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ.
ಕೋಳಿಗೆ ಹಾಕುವ ಕಲ್ಲು ಮಣ್ಣು ಮಿಶ್ರಿತ ರಾಗಿಯನ್ನು ಬಡವರಿಗೆ ವಿತರಣೆ ಮಾಡಲಾಗುತ್ತಿದೆ. ಇಂತಹ ಕಳಪೆ ರಾಗಿ ನೀಡುವ ಬದಲಿಗೆ, ಗೋಧಿ ಇಲ್ಲವೆ, ಅಕ್ಕಿಯನ್ನು ಹೆಚ್ಚು ನೀಡುವುದು ಉತ್ತಮ ಎಂಬುದು ಪಡಿತರದಾರರ ಅಭಿಪ್ರಾಯವಾಗಿದೆ. ಇನ್ನಾದರೂ ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ.
ಮುಖ್ಯಾಂಶಗಳು :
ನ್ಯಾಫೆಡ್ ಮೂಲಕ ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀಧಿಸಿತ್ತು. ಖರೀಧಿಸಿದ ಈ ರಾಗಿಯನ್ನೇ ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಆದರೆ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸುತ್ತಿರುವ ರಾಗಿಯಲ್ಲಿ ಕಲ್ಲು, ಮಣ್ಣು, ಇತರ ಧಾನ್ಯಗಳು ಸೇರಿವೆ. ಹಾಗಾದರೆ ನ್ಯಾಫೆಡ್‍ನಲ್ಲಿ ಗುಣಮಟ್ಟದ ರಾಗಿ ಖರೀಧಿಸದೆ ಕಳಪೆ ರಾಗಿ ಖರೀಧಿಸಿದ್ದಾರೆ ಎಂದರ್ಥ. ಇಲ್ಲವೇ, ಸರ್ಕಾರ ಪಡಿತರದಾರರಿಗೆ ನೀಡುತ್ತಿರುವ ಗುಣಮಟ್ಟದ ರಾಗಿಯನ್ನು ಇನ್ಯಾರೂ ಬದಲಾವಣೆ ಮಾಡಿ ಕಾರ್ಡುದಾರರಿಗೆ ಕಳಪೆ ರಾಗಿ ನೀಡುತ್ತಿದ್ದಾರೆ ಎಂದರ್ಥ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಿ ತಪ್ಪು ಎಲ್ಲಾಗುತ್ತಿದೆ ಎಂಬುದನ್ನು ಪತ್ತೆ ಮಾಡಿ ಕ್ರಮಕ್ಕೆ ಮುಂದಾಗಬೇಕಿದೆ.
ವೈ.ಎಸ್.ಪಾಳ್ಯ ನ್ಯಾಯಬೆಲೆ ಅಂಗಡಿಯಲ್ಲಿ ನಮಗೆ 20 ಕೆ.ಜಿ ರಾಗಿ ಕೊಟ್ಟಿದ್ದು ರಾಗಿಗಿಂತ ಅದರಲ್ಲಿ ಮಣ್ಣು, ಮರಳು, ಕಲ್ಲು ಇತರೆ ಧಾನ್ಯಗಳು ಬೆರೆತಿವೆ. ರಾಗಿ ಕ್ಲೀನಿಂಗ್ ಮಿಲ್‍ನಲ್ಲಿ ಕ್ಲೀನ್ ಮಾಡಿಸಿದರೂ ಹೋಗದಷ್ಟು ಬೆರೆತಿವೆ. ಹಾಗಾಗಿ ಕೂಲಿನಾಲಿ ಮಾಡಿ ಜೀವನ ನಡೆಸುವ ನಮಗೆ ಈ ತಿಂಗಳು ಊಟಕ್ಕೆ ರಾಗಿ ಇಲ್ಲದಂತ್ತಾಗಿದೆ. ಆಹಾರಾಧಿಕಾರಿಗಳು ರಾಗಿ ಬದಲಾಯಿಸಿ ಕೊಟ್ಟು ಉಪಕಾರ ಮಾಡಬೇಕಿದೆ.
ರವಿ, ಕಾರ್ಡುದಾರ, ಒಳಗೆರೆಹಳ್ಳಿ
ನಾವು ರಾಗಿ ಖರೀಧಿಸಿ ತಂದು ಮಾರುವುದಿಲ್ಲ. ನ್ಯಾಯಬೆಲೆ ಅಂಗಡಿಯ ಮೂಲಕ ನ್ಯಾಫೆಡ್‍ನಲ್ಲಿ ಖರೀಧಿಸಿದ ರಾಗಿಯನ್ನೇ ವಿತರಿಸಲಾಗುತ್ತಿದೆ. ಅದೂ ಕೂಡ ಕಾರ್ಡುದಾರರ ಎದುರಿನಲ್ಲೇ ಚೀಲ ತೆರೆದು ನೆಲಕ್ಕೆ ಸುರಿಯದೆ ಕಾರ್ಡುದಾರರ ಚೀಲಕ್ಕೆ ಹಾಕಿ ತೂಕ ಮಾಡಿ ಕೊಡುತ್ತಿದ್ದೇವೆ. ಒಂದೊಂದು ಚೀಲಗಳಲ್ಲಿ ಮಣ್ಣು ಮಿಶ್ರಿತ ರಾಗಿ ಬರುವುದು ಸಾಮಾನ್ಯ. ಆದರೇನು ಮಾಡುವುದು ಬಂದ ರಾಗಿಯನ್ನೇ ಕೊಡಬೇಕಿದೆ.
ರಿಜಾಜ್, ನ್ಯಾಯಬೆಲೆ ಅಂಗಡಿ, ವೈ.ಎಸ್.ಪಾಳ್ಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ