ಉದ್ದಿಮೆ ಪರವಾನಗಿ ಶುಲ್ಕ: 1.08 ಕೋಟಿ ಸಂಗ್ರಹ

0
21

ತುಮಕೂರು

        ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಕೈಗೊಂಡ ವಿಶೇಷ ಆಂದೋಲನದ ಫಲವಾಗಿ ಪ್ರಸ್ತುತ ಸಾಲಿನಲ್ಲಿ ಈವರೆಗೆ 1 ಕೋಟಿ 8 ಲಕ್ಷ ರೂ.ಗಳಿಗೂ ಮೀರಿ “ಉದ್ದಿಮೆ ಪರವಾನಗಿ” (ಟ್ರೇಡ್ ಲೈಸೆನ್ಸ್) ಶುಲ್ಕ ಸಂಗ್ರಹವಾಗಿದೆ.

        ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇದೇ ಮೊದಲಿಗೆ “ಉದ್ದಿಮೆ ಪರವಾನಗಿ” ಶುಲ್ಕ ಸಂಗ್ರಹವಾಗಿದೆ ಎಂದು ಪಾಲಿಕೆ ಮೂಲಗಳಿಂದ ತಿಳಿದುಬಂದಿದೆ.

10 ಸಾವಿರ ಮಳಿಗೆಗಳು

         ಈ ಹಿಂದಿನ ಸಮೀಕ್ಷೆ ಪ್ರಕಾರ ತುಮಕೂರು ನಗರದಲ್ಲಿ ಒಟ್ಟು 7,198 ಉದ್ದಿಮೆಗಳು (ಮಳಿಗೆಗಳು) ಇವೆ ಎಂದು ಲೆಕ್ಕ ಹಾಕಲಾಗಿತ್ತು. ಆದರೆ ಇತ್ತೀಚೆಗೆ ಪಾಲಿಕೆಯ ನೂತನ ಆಯುಕ್ತ ಟಿ. ಭೂಪಾಲನ್ ಅವರು ನೀಡಿದ ಸೂಚನೆ ಮೇರೆಗೆ ಪಾಲಿಕೆಯ ಹೆಲ್ತ್ ಇನ್ಸ್‍ಪೆಕ್ಟರ್‍ಗಳು ಹೊಸದಾಗಿ ವಾರ್ಡ್‍ವಾರು ಸಮೀಕ್ಷೆ ಮಾಡಿದ್ದು, ಅದರ ಪ್ರಕಾರ ನಗರಾದ್ಯಂತ ಉದ್ದಿಮೆಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಈಗ ಒಟ್ಟು ಸುಮಾರು 10,000 ಉದ್ದಿಮೆ (ಮಳಿಗೆ)ಗಳಿವೆ ಎಂದು ಗುರುತಿಸಲಾಗಿದೆ.

ಇದೇ ಮೊದಲ ಬಾರಿಗೆ ಇಷ್ಟೊಂದು ಸಂಗ್ರಹ

     “ಉದ್ದಿಮೆ ಪರವಾನಗಿ“ ಶುಲ್ಕದ ರೂಪದಲ್ಲಿ ಪ್ರಸ್ತುತ 2018-19 ನೇ ಸಾಲಿನಲ್ಲಿ ಒಟ್ಟು 1 ಕೋಟಿ 67 ಲಕ್ಷ ರೂ. ಸಂಗ್ರಹಿಸಬೇಕೆಂಬ ಬೇಡಿಕೆ (ಡಿಮ್ಯಾಂಡ್) ಇತ್ತು. ಈ ನಿಟ್ಟಿನಲ್ಲಿ ಈವರೆಗೆ 1 ಕೋಟಿ 8 ಲಕ್ಷ ರೂಗಳನ್ನು ಸಂಗ್ರಹಿಸಲಾಗಿದೆ. ಪಾಲಿಕೆಯ ಇತಿಹಾಸದಲ್ಲೇ ಇಷ್ಟೊಂದು ಮೊತ್ತ ಸಂಗ್ರಹವಾಗಿರುವುದು ಇದೇ ಮೊದಲು. ಈವರೆಗೆ “ಉದ್ದಿಮೆ ಪರವಾನಗಿ“ ಶುಲ್ಕದ ಸಂಗ್ರಹವು 35 ಲಕ್ಷ ರೂ.ಗಳನ್ನು ಮೀರಿರಲಿಲ್ಲ ಎಂದು ಹೇಳಲಾಗಿದೆ.

       ಭೂಪಾಲನ್ ಅವರು ಆಯುಕ್ತರಾಗಿ ಬಂದ ಬಳಿಕ ಪಾಲಿಕೆಯ ಸಂಪನ್ಮೂಲ ಕ್ರೋಡೀಕರಣಕ್ಕೆ ವಿಶೇಷ ಒತ್ತು ನೀಡಿ, “ಉದ್ದಿಮೆ ಪರವಾನಗಿ” ಶುಲ್ಕ ಸಂಗ್ರಹಕ್ಕೆ ಪಾಲಿಕೆಯ 11 ಹೆಲ್ತ್ ಇನ್ಸ್‍ಪೆಕ್ಟರ್‍ಗಳಿಗೆ ತಲಾ 8 ಲಕ್ಷ ರೂ.ಗಳ ಶುಲ್ಕ ಸಂಗ್ರಹದ ಗುರಿ ನಿಗದಿಪಡಿಸಿದರು. ಅದರ ಫಲವಾಗಿ ಕೇವಲ ಒಂದೂವರೆ ತಿಂಗಳ ಅಲ್ಪ ಅವಧಿಯಲ್ಲೇ ಸುಮಾರು 50 ಲಕ್ಷ ರೂ. “ಉದ್ದಿಮೆ ಪರವಾನಗಿ” ಶುಲ್ಕ ಸಂಗ್ರಹಗೊಂಡಿದೆ. ಈ ಸಾಲಿನಲ್ಲಿ ಈ ಹಿಂದೆ ಆಗಿದ್ದ ಹಾಗೂ ಭೂಪಾಲನ್ ಅವರು ಬಂದ ಬಳಿಕ ಆದ ಶುಲ್ಕ ಸಂಗ್ರಹದ ಒಟ್ಟು ಮೊತ್ತ 1 ಕೋಟಿ 8 ಲಕ್ಷ ರೂ. ಮೀರಿದೆ. ಇದರಲ್ಲಿ ಸಾರ್ವಜನಿಕರು ತಾವಾಗಿಯೇ ಬಂದು ಶುಲ್ಕ ಪಾವತಿಸಿರುವ ಮೊತ್ತ ಸುಮಾರು 45 ಲಕ್ಷ ರೂ. ಆಗಿದ್ದರೆ, ಹೆಲ್ತ್‍ಇನ್ಸ್‍ಪೆಕ್ಟರ್‍ಗಳು ಪ್ರತಿ ಮಳಿಗೆಗೂ ತೆರಳಿ ಸಂಗ್ರಹಿಸಿರುವ ಮೊತ್ತ 63 ಲಕ್ಷ ರೂ. ಆಗಿದೆ ಎಂದು ಲೆಕ್ಕ ಹಾಕಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here