ಹುಳಿಯಾರು :
ಭಾನುವಾರ ರಾತ್ರಿ ಹುಳಿಯಾರು ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದ್ದು ರಾಗಿ ಬಿತ್ತಿ ಮಳೆಗೆ ಎದುರು ನೋಡುತ್ತಿದ್ದ ರಾಗಿ ಬೆಳೆಗಾರರಿಗೆ ಹರ್ಷ ಮೂಡಿಸಿದೆ.
ಹಿಂಗಾರು ಬಿತ್ತನೆಗೆ ಉತ್ತಮ ಮಳೆಯಾಗದಿದ್ದರೂ ಕಳೆದ ಬಾರಿ ಸಮರದ್ಧವಾಗಿ ಬಂದಂತೆ ಈ ಬಾರಿಯೂ ಬರುತ್ತದೆಯೆನ್ನುವ ಆಶಾಭಾವನೆಯಿಂದ ಬಿದಿದ್ದ ಅಲ್ಪಮಳೆಯಲ್ಲೇ ಧೈರ್ಯ ಮಾಡಿ ರೈತರು ಒಂದು ತಿಂಗಳಿನಿಂದ ಬಿತ್ತನೆ ಚಟುವಟಿಕೆ ನಡೆಸುತ್ತಿದ್ದರು. ಆದರೆ ಪೂರ್ವ ಬಿತ್ತನೆಯಾಗಿದ್ದ ರಾಗಿ ಈಗಾಗಲೇ ಪೈರು ಬಂದಿದ್ದು ತೇವಾಂಶದ ಕೊರತೆ ಎದುರಿಸುತ್ತಿತ್ತು. ಹಾಗಾಗಿ ರೈತರು ಮಳೆಯ ನಿರೀಕ್ಷೆಯಲ್ಲಿ ದಿನದೂಡುತ್ತಿದ್ದರು.
ನಿತ್ಯವೂ ಮೋಡಕವಿದ ವಾತವರಣ ಇರುತ್ತದಾದರೂ ಮಳೆಬರುತ್ತಿರಲಿಲ್ಲ. ಅಪ್ಪಿತಪ್ಪಿ ಸೋನೆ ಮಳೆ ಬಂದರೂ ಕೆಲ ಭಾಗದಲ್ಲಿ ಮಾತ್ರ ಬರುತ್ತಿತ್ತು. ಹಾಗಾಗಿ ರಾಗಿ ಬಿತ್ತಿದವರಿಗೆ ಆತಂಕ ಮನೆ ಮಾಡಿತ್ತು. ಒಂದೇ ಒಂದು ಹದ ಮಳೆಬಂದರೂ ಸಾಕು ಬಿತ್ತಿದ್ದ ಬೀಜ ಮೇಲೇಳುತ್ತದೆ ಎಂದು ಮಳೆಗಾಗಿ ಪ್ರಾರ್ಥಿಸುತ್ತಿದ್ದರು.
ಇನ್ನೇನು ಮಳೆ ಹೋಗೆಬಿಡ್ತು ಎನ್ನುವಷ್ಟರಲ್ಲಿ ಮಗೆ ಮಳೆ ರೈತನ ಕೈ ಹಿಡಿದಿದೆ. ಹೋಬಳಿಯಾದ್ಯಂತ ಭಾನುವಾರ ರಾತ್ರಿ ಉತ್ತಮವಾಗಿ ಮಳೆ ಸುರಿದಿದ್ದು ರಾಗಿಗೆ ಮತ್ತೆ ಜೀವ ಕಳೆ ಬಂದಂತ್ತಾಗಿದೆ. ಈ ಮೂಲಕ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ಮಳೆ ವಿವರ:
ಹುಳಿಯಾರು 7.2 ಮಿಮೀ, ಶೆಟ್ಟಿಕೆರೆ 6.1 ಮಿಮೀ, ಬೋರನಕಣಿವೆ 30.5 ಮಿಮೀ, ಮತ್ತಿಘಟ್ಟ 4.6 ಮಿಮೀ, ದೊಡ್ಡಎಣ್ಣೇಗೆರೆ 4.4 ಮಿಮೀ, ಸಿಂಗದಹಳ್ಳಿ 6.5 ಮಿಮೀ ಮಳೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
