ಮುಂದಿನ 5 ವರ್ಷವೂ ನಾನೇ ಸಿಎಂ : ಸಿದ್ದರಾಮಯ್ಯ

ಬೆಂಗಳೂರು

     ಮುಂದಿನ ಐದು ವರ್ಷಗಳ ಕಾಲ ನಾನೇ ಸಿಎಂ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದಿಲ್ಲಿ ಡಿಸಿಎಂ ಡಿಕೆಶಿಗೆ ತಿರುಗೇಟು ಹೊಡೆದಿದ್ದಾರೆ. ಹೊಸಪೇಟೆಯಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು,ಯಾರೇನೇ ಹೇಳಲಿ,ಮುಂದಿನ ಐದು ವರ್ಷಗಳ ನಮ್ಮದೇ ಸರ್ಕಾರ ಇರುತ್ತದೆ,ನಾನೇ ಐದು ವರ್ಷಗಳ ಕಾಲ ಸಿಎಂ ಆಗಿರುತ್ತೇನೆ ಎಂದರು.

    ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಚರ್ಚೆ ಮಾಡುತ್ತಿರುವವರಿಗೆ ಕೆಲಸವಿಲ್ಲ ಎಂದ ಅವರು,ನಮ್ಮದೇ ಸರ್ಕಾರ ನಾನೇ ಸಿಎಂ ಎಂದ ಮೇಲೆ ಅದರ ಬಗ್ಗೆ ಮಾತು ಬೇಕಿಲ್ಲ ಎಂದರು. ಹೀಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ನಾನೇ ಐದು ವರ್ಷಗಳ ಕಾಲ ಇರುತ್ತೇನೆ ಎನ್ನುವ ಮೂಲಕ ಸಿದ್ಧರಾಮಯ್ಯ ಅವರು ಡಿಸಿಎಂ ಡಿಕೆಶಿಗೆ ಟಾಂಗ್ ಕೊಟ್ಟಿರುವುದು ಸ್ಪಷ್ಟವಾಗಿದೆ.

    ಅಂದ ಹಾಗೆ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಮುಖ್ಯಮಂತ್ರಿ ಹುದ್ದೆಯ ಅವಧಿ ಹಂಚಿಕೆಯಾಗಿದೆ,ಆಗಿಲ್ಲ ಎಂಬ ಕುರಿತು ಸಿದ್ಧರಾಮಯ್ಯ ಅವರ ಸಂಪುಟದ ಸಚಿವರ ನಡುವೆ ಕಚ್ಚಾಟ ನಡೆಯುತ್ತಿತ್ತು.

    ಸಹಕಾರ ಸಚಿವ ಕೆ.ಎನ್.ರಾಜಣ್ಣ,ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಹಲವರು,ಮುಖ್ಯಮಂತ್ರಿ ಹುದ್ದೆಯಲ್ಲಿ ಐದು ವರ್ಷಗಳ ಕಾಲ ಸಿದ್ಧರಾಮಯ್ಯ ಅವರೇ ಮುಂದುವರಿಯುತ್ತಾರೆ ಎಂದರೆ,ಉಪಮುಖ್ಯಮAತ್ರಿ ಡಿ.ಕೆ.ಶಿ ಬಣ,ಮುಖ್ಯಮಂತ್ರಿ ಹುದ್ದೆಯಲ್ಲಿ ಸಿದ್ಧರಾಮಯ್ಯ ಎರಡೂವರೆ ವರ್ಷ,ಡಿಕೆಶಿ ಎರಡೂವರೆ ವರ್ಷ ಇರಲಿದ್ದಾರೆ ಎಂದು ಹೇಳುತ್ತಿತ್ತು.

    ಈ ಮಧ್ಯೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂಬ ಹೇಳಿಕೆ ಬಲವಾಗುತ್ತಿದ್ದಂತೆಯೇ ಉಪಮುಖ್ಯಮಂತ್ರಿ ಡಿಕೆಶಿ ಪಕ್ಷದ ವರಿಷ್ಟರಿಗೆ ದೂರು ನೀಡುತ್ತಿದ್ದರಲ್ಲದೆ,ಅಧಿಕಾರ ಹಂಚಿಕೆಯ ಕುರಿತು ಮಾತನಾಡದಂತೆ ಕಟ್ಟಪ್ಪಣೆ ವಿಧಿಸುವಂತೆ ಆಗ್ರಹಿಸುತ್ತಿದ್ದರು.

    ಇದೇ ಕಾರಣಕ್ಕಾಗಿ ಹೈಕಮಾಂಡ್ ವರಿಷ್ಟರಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ,ಅಧಿಕಾರ ಹಂಚಿಕೆಯ ಕುರಿತು ದಿಲ್ಲಿಯಲ್ಲಿ ನಡೆದ ಮಾತುಕತೆಯ ವಿವರ ಯಾರಿಗೂ ಗೊತ್ತಿಲ್ಲ.ಹೀಗಾಗಿ ಮೌನವಾಗಿರಿ ಎಂದು ಸಿದ್ಧರಾಮಯ್ಯ ಬಣದ ಸಚಿವರಿಗೆ ಎಚ್ಚರಿಕೆ ನೀಡುತ್ತಿದ್ದರು.

    ಇದೇ ರೀತಿ ಎರಡು ದಿನಗಳ ಹಿಂದೆ ತೆಲಂಗಾಣಕ್ಕೆ ಬಂದಿದ್ದ ಕೆ.ಸಿ.ವೇಣುಗೋಪಾಲ್,ರಣದೀಪ್ ಸಿಂಗ್ ಸುರ್ಜೇವಾಲ ಕರ್ನಾಟಕಕ್ಕೆ ಬಂದು,ಅಧಿಕಾರ ಹಂಚಿಕೆಯ ಬಗ್ಗೆ ಯಾರೂ ಮಾತನಾಡಬಾರದು ಎಂದು ಕಟ್ಟಪ್ಪಣೆ ವಿಧಿಸಿದ್ದರು.

    ಆದರೆ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾತಿಗೆ ಸಿದ್ದರಾಮಯ್ಯ ಅವರೇ ಹರಳೆಣ್ಣೆ ತಿಕ್ಕಿದ್ದು,ಮುಂದಿನ ಐದು ವರ್ಷಗಳ ಕಾಲ ನಾನೇ ಸಿಎಂ ಎನ್ನುವ ಮೂಲಕ ಅಧಿಕಾರ ಹಂಚಿಕೆಯ ಆಟಕ್ಕೆ ನಿರ್ಣಾಯಕ ತಿರುವು ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap