ಇಸ್ಲಾಮಾಬಾದ್
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳನ್ನು ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ತಿರಸ್ಕರಿಸಿರುವುದನ್ನು ಪಾಕಿಸ್ತಾನ ಸೇನೆ ಮಂಗಳವಾರ ಬೆಂಬಲಿಸಿದೆ.ಕಾಶ್ಮೀರ ಜನರ ಬೆಂಬಲವಾಗಿ ಯಾವುದೇ ಹಂತಕ್ಕೆ ಹೋಗಲು ತಾನು ಸಿದ್ಧ ಎಂದು ಪಾಕ್ ಸೇನೆ ಹೇಳಿದೆ.
‘ಕಾಶ್ಮೀರಕ್ಕೆ ಸಂಬಂಧಿಸಿ ಭಾರತದ ನಿರ್ಧಾರಗಳನ್ನು ಸರ್ಕಾರ ತಿರಸ್ಕರಿಸುವುದನ್ನು ಸೇನೆ ಸಂಪೂರ್ಣವಾಗಿ ಬೆಂಬಲಿಸಿದೆ ಎಂದು ರಾವಲ್ಪಿಂಡಿಯಲ್ಲಿ ನಡೆದ ಕೋರ್ ಕಮಾಂಡರ್ಸ್ ಸಭೆಯ ನಂತರ ಸಾರ್ವಜನಿಕ ಸಂಪರ್ಕಗಳ ಅಂತರ ಸೇವೆ (ಐಎಸ್‌ಪಿಆರ್) ಮಹಾನಿರ್ದೇಶಕ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದಾರೆ.
‘ಪಾಕಿಸ್ತಾನ ಸೇನೆ ಕಾಶ್ಮೀರ ಜನರ ಹೋರಾಟದಲ್ಲಿ ಕೊನೆಯವರೆಗೂ ದೃಢವಾಗಿ ನಿಲ್ಲುತ್ತದೆ. ಈ ನಿಟ್ಟಿನಲ್ಲಿ ನಮ್ಮ ಬದ್ಧತೆಗಳನ್ನು ಈಡೇರಿಸಲು ಯಾವುದೇ ಹಂತಕ್ಕೆ ಹೋಗುತ್ತೇವೆ.’ ಎಂದು ಸೇನಾ ಮುಖ್ಯಸ್ಥ ಜನರಲ್ ಕ್ವಮರ್ ಜಾವೇದ್ ಬಜ್ವಾ ಅವರನ್ನು ಉಲ್ಲೇಖಿಸಿ ಗಫೂರ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಭಾರತ ಸರ್ಕಾರದ ಕ್ರಮವನ್ನು ಪಾಕಿಸ್ತಾನ ಸೋಮವಾರ ಖಂಡಿಸಿತ್ತು. ಭಾರತ ಕೈಗೊಂಡಿರುವ ನಿರ್ಧಾರಗಳು ಕಾನೂನು ಬಾಹಿರವಾಗಿದ್ದು, ಇವನ್ನು ಎದುರಿಸಲು ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ಬಳಸಿಕೊಳ್ಳುವುದಾಗಿ ಸೇನೆ ಹೇಳಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








