ಕಲಬುರಗಿಯಲ್ಲಿ ಬಾಣಂತಿ ಸಾವು : ಕುಟುಂಬಸ್ಥರಿಂದ ಆಸ್ಪತ್ರೆ ಗಾಜು ಪುಡಿ ಪುಡಿ, ಪೀಠೋಪಕರಣ ಧ್ವಂಸ

ಕಲಬುರಗಿ: 

     ಜಿಲ್ಲೆಯಲ್ಲಿ ಬಾಣಂತಿ ಸಾವಿನ ಪ್ರಕರಣ ಮುಂದುವರಿದಿದೆ. ಕಲಬುರಗಿಯ  ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ತಾಯಿ ಹಾಗೂ ನವಜಾತ ಶಿಶು ಇಬ್ಬರೂ ಸಾವನ್ನಪ್ಪಿದ್ದಾರೆ. ಸಭಾ ಪರ್ವಿನ್ ಎನ್ನುವ ಬಾಣಂತಿ ಸಾವನ್ನಪ್ಪಿದ್ದು, ಆಕೆಯ ನವಜಾತ ಶಿಶು ಕೂಡ ಮೃತಪಟ್ಟಿದೆ. ಕಲಬುರಗಿ ನಗರದ ಎಂಎಸ್‌ಕೆ ಮಿಲ್ ಬಡಾವಣೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಭಾನುವಾರ ಸಂಜೆಯೇ ಹೆರಿಗೆಗಾಗಿ ಸಭಾ ಪರ್ವಿನ್ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಹೆರಿಗೆಗೂ ಮುನ್ನ ಗರ್ಭದಲ್ಲಿಯೇ ಮಗು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದರು. ಕಡೆಗೆ ಲೋ ಬಿಪಿಯಿಂದ ತಾಯಿಯೂ ಮೃತಪಟ್ಟಿದ್ದಾರೆ.

    ವೈದ್ಯರ ನಿರ್ಲಕ್ಷತನವೇ ತಾಯಿ ಹಾಗೂ ಮಗು ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದು, ಆಸ್ಪತ್ರೆ ಗಾಜು ಪುಡಿ ಪುಡಿ ಮಾಡಿ ಪೀಠೋಪಕರಣ ಧ್ವಂಸಗೊಳಿಸಿದ್ದಾರೆ. ಆರ್.ಜಿ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.