ಲಖನೌ :
ಬಾವಿಗೆ ಬಿದ್ದ ಕರುವನ್ನು ರಕ್ಷಿಸಲು ಹೀಗಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಪ್ರದೇಶದ ಗೋಂಡಾದ ಕೊಟ್ವಾಲಿ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮೃತರನ್ನು ಮಹಾರಾಜ್ ಗಂಜ್ ಪ್ರದೇಶದ ವೈಭವ್ (18), ದಿನೇಶ್ ಅಕಾ ಚೋಟು (30), ರವಿಶಂಕರ್ ಅಕಾ ರಿಂಕು (36) ಮತ್ತು ವಿಷ್ಣು ದಯಾಳ್ (35) ಹಾಗೂ ಭಾಡು ತರ್ಹಾರ್ ಪ್ರದೇಶದ ಮನ್ನು ಸೈನಿ (35) ಎಂದು ಗುರುತಿಸಲಾಗಿದೆ.
ಪಾಳು ಬಿದ್ದಿದ್ದ ಬಾವಿಯಲ್ಲಿ ಕರು ಬಿದ್ದಿರುವುದನ್ನು ನೋಡಿ ವಿಷ್ಣು ಕರುವನ್ನು ರಕ್ಷಿಸಲು ಇಳಿದಿದ್ದಾನೆ. ಆತನಿಂದ ಆಗದಾಗ, ಆತನ ಸಹಾಯಕ್ಕೆ ವೈಭವ್ ಕೂಡ ಬಾವಿಗೆ ಇಳಿದಿದ್ದಾನೆ. ಅವರ ಸಹಾಯಕ್ಕೆ ದಿನೇಶ್ ಮತ್ತು ರವಿಶಂಕರ್ ಬಾವಿಗೆ ಇಳಿದಿದ್ದಾರೆ.
ಕರುವನ್ನು ರಕ್ಷಿಸಲಾಯಿತು. ಆದರೆ, ನಾಲ್ವರು ಬಾವಿಯೊಳಗೆ ಸಿಕ್ಕಿಹಾಕಿಕೊಂಡರು. ಅವರ ಕೂಗು ಕೇಳಿ, ದಾರಿಯಲ್ಲಿ ಹೋಗುತ್ತಿದ್ದ ಸೈನಿ ಬಾವಿಗೆ ಇಳಿದಿದ್ದಾರೆ.
ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಎರಡು ಗಂಟೆಗಳ ಕಾರ್ಯಾಚರಣೆ ನಂತರ ಐವರ ಶವಗಳನ್ನು ಹೊರಗೆ ತೆಗೆಯಲು ಸಾಧ್ಯವಾಯಿತು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ದುರ್ಘಟನೆ ನಡುವೆಯೂ ಕರುವನ್ನು ಜೀವಂತವಾಗಿ ಹೊರ ತರಲಾಗಿದೆ ಎಂದು ಜಿಲ್ಲಾಧಿಕಾರಿ ನಿತಿನ್ ಬನ್ಸಾಲ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ