ಯುದ್ಧ ಬೇಕು…!

0
86

ಯುದ್ಧ ಬೇಕು…!

ಬೆಂಗದಿರ ಕಡುತಾಪಕ್ಕೂ
ಅಂಜದೆ, ಹೊಲ ಹಸನು ಮಾಡಿ
ಮುಂಗಾರು ಮಳೆಗಾಗಿ
ಮುಗಿಲು ದಿಟ್ಟಿಸುತ್ತಿರುವ 
ಅನ್ನದಾತರಿಗಲ್ಲ.

ಚೊಚ್ಚಲ ಹೆರಿಗೆಗೆ
ಮಗಳನು ಆಸ್ಪತ್ರೆಗೆ ಸೇರಿಸಿ
ಸುಸೂತ್ರ ಹೆರಿಗೆಗಾಗಿ
ಹೊರಗಡೆ ದೇವರನ್ನು
ಪ್ರಾರ್ಥಿಸುತ್ತಿರುವ ಕುಟುಂಬಕ್ಕಲ್ಲ.

ದೂರದ ನಗರಕ್ಕೆ, ಮಕ್ಕಳನ್ನು
ವಿದ್ಯಾಭ್ಯಾಸಕ್ಕೆ ಕಳಿಸಿ ಹಣ ಹೊಂದಿಸಲು
ಹಗಲಿರುಳು ಬಿಡುವಿಲ್ಲದೆ
ದುಡಿಯುತ್ತಿರುವ ಹೆತ್ತವರಿಗಲ್ಲ.

ಬಾಳ ಯಾನವನ್ನು 
ಯಶಸ್ವಿಯಾಗಿ ಮುಗಿಸಿ
ಮುಕ್ತಿ ಹೊಂದಬೇಕೆಂದು
ಜೀವನದ ಮುಸ್ಸಂಜೆ
ಕಳೆಯುತ್ತಿರುವ ಮನಸ್ಸುಗಳಿಗಲ್ಲ.

ಸ್ವಚ್ಚಂದವಾಗಿ ಆಡುತ್ತ,

ನಾವೆಲ್ಲರೂ ಒಂದೇ ಎಂಬ ಭಾವದಿ

ಬದುಕನ್ನು ಸ್ವಾಗತಿಸುತ್ತಿರುವ ಮುಗ್ಧಮಕ್ಕಳಿಗಲ್ಲ.

ವಿಧಿಗೆ ಸವಾಲಾಗಿ,

ಏಳುಬೀಳುಗಳನು ಮೆಟ್ಟಿ

ಬದುಕು ಕಟ್ಟಿಕೊಳ್ಳುತ್ತಿರುವ

ಸವ್ಯಸಾಚಿ ಮನಸುಗಳಿಗಲ್ಲ.

ಮನೆಯಮೇಲೆ ಮನೆ ಕಟ್ಟಿ
ಮೂಲೆಗೊಂದೊಂದು ಕಾರು
ನಿಲ್ಲಿಸಿಕೊಂಡು ಸಾವಿಲ್ಲವೆಂಬ
ಭ್ರಮೆಯ ಆಗರ್ಭ ಸಿರಿವಂತರಿಗಲ್ಲ.

ದಟ್ಟದಾರಿದ್ರ್ಯದ ನಡುವೆಯು
ದಿಟ್ಟವಾಗಿ ಬದುಕು
ಸಾಗಿಸುತ್ತಿರುವ 
ಸ್ವಾಭಿಮಾನಿ ಮನಸುಗಳಿಗಲ್ಲ.

ಆರತಿ ಬೆಳಗಿ ವೀರತಿಲಕವನಿಟ್ಟು
ಗೆದ್ದುಬಾ ಎಂದು ಹರಸಿ
ಕಳಿಸುವ ಸೈನಿಕರ
ಕುಟುಂಬಗಳಿಗಲ್ಲ.

ಕಟ್ಟಕಡೆಯದಾಗಿ…
ಎರಡೂ ಗಡಿಯನ್ನು
ಹಗಲಿರುಳು ಕಾಯುತ್ತಾ
ದೇಶವನ್ನೂ ಮತ್ತು ಹೆತ್ತವರನ್ನು ಪೊರೆಯುತ್ತಿರುವ
ವೀರ ಸೈನಿಕರಿಗಲ್ಲ.

ಬೇಕಿದೆ ಯುದ್ಧ, ಬೇಕಾಗಿದೆ ಯುದ್ಧ
ಬೇಕೆ ಬೇಕು ಯುದ್ಧ…!

ಯಾರಿಗೆ…!

‘ಮಗು ಚಿವುಟಿ ತೊಟ್ಟಿಲು
ತೂಗುವ’, ಚುನಾವಣಾ ಕಾಲಕ್ಕೆ ಬಹುವೇಷದಾರಿಗಳಾಗಿ
ವರ್ತಿಸಿ ಮತಗಿಟ್ಟಿಸುವ ಐನಾತಿ  ರಾಜಕಾರಣಿಗಳಿಗೆ…!

ಉಸಿರುಗಟ್ಟಿ ಬೊಬ್ಬಿಡುತ್ತಾ

ದೇಶದ ಯುವ ಮನಸ್ಸುಗಳಲ್ಲಿ

ದ್ವೇಷದ ಕಿಚ್ಚನ್ನು ಹಚ್ಚುತ್ತಿರುವ ಸುದ್ಧಿ ವಾಹಿನಿಗಳಿಗೆ…!

ದೇಶ ಧರ್ಮ, ದೇಶ ಧರ್ಮ ಎನ್ನುತ್ತಾ, ರಣಹೇಡಿಗಳಂತೆ
ಅಡಗಿ ಕುಳಿತ ಧರ್ಮಾಂಧರಿಗೆ…!

– ರುದ್ರಸ್ವಾಮಿ ಹರ್ತಿಕೋಟೆ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here