ಬೆಂಗಳೂರು
ದೀರ್ಘಾವಧಿ ಮೂತ್ರಪಿಂಡ ಕಾಯಿಲೆಯು ಭಾರತದಲ್ಲಿ ಕಳವಳಕಾರೀ ಆರೋಗ್ಯ ಸಮಸ್ಯೆಯಾಗಿದ್ದು, ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಜೀವನ ಶೈಲಿಯಿಂದಾಗಿ ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಹೆಚ್ಚುತ್ತಿರುವ ಈ ಸಮಸ್ಯೆಯ ಕುರಿತು ಜಾಗೃತಿ ಮೂಡಿಸಲು ಎಸ್‌ಎಸ್ ಸ್ಪರ್ಶ್ ಆಸ್ಪತ್ರೆ, ರಾಜರಾಜೇಶ್ವರಿ ನಗರ (ಮೈಸೂರು ರಸ್ತೆ) ವಿಶ್ವ ಕಿಡ್ನಿ ದಿನಾಚರಣೆ 2025ನ್ನು ಆಯೋಜಿಸಿತ್ತು. ಅಂಗಾಂಗ ಕಸಿ ಮಾಡಿಸಿಕೊಂಡವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಗಾಂಗ ಕಸಿ ಹೇಗೆ ವ್ಯಕ್ತಿಯೊಬ್ಬರಿಗೆ ಮರು ಜೀವ ಮತ್ತು ಜೀವನ ಕಲ್ಪಿಸಬಲ್ಲದು ಎಂಬುದರ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡು ಜಾಗೃತಿ ಮೂಡಿಸಿದರು.
ಅಂಗಾಂಗ ದಾನದ ಕುರಿತು ಮಾತನಾಡಿದ ಮುಖ್ಯ ಅತಿಥಿ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು “ ಅಂಗಾಂಗ ದಾನವು ಮಾನವೀಯತೆಯ ಪರಮೋಚ್ಛ ಕಾರ್ಯಗಳಲ್ಲಿ ಒಂದಾಗಿದೆ. ನಾವೆಲ್ಲರೂ ಈ ಶ್ರೇಷ್ಟ ಕಾರ್ಯವನ್ನು ಬೆಂಬಲಿಸಬೇಕು” ಎಂದ ಅವರು ಜೀವ ರಕ್ಷಕ ಅಂಗಾಂಗ ಕಸಿಗೆ ಅನುವು ಮಾಡಿಕೊಡುವ ಕರ್ನಾಟಕ ಅಂಗ ಮತ್ತು ಅಂಗಾಂಶಗಳ ಕಸಿ ಸಂಸ್ಥೆ (SOTTO Karnataka)ಯ ಪಾತ್ರವನ್ನು, ವೈದ್ಯರು, ದಾನಿಗಳನ್ನು ಶ್ಲಾಘಿಸಿದರು.
ಕಿಡ್ನಿ ಸಂಬಂಧಿ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವುದು, ಅಂಗಾಂಗ ದಾನ ಹಾಗೂ ವಿಶ್ವ ದರ್ಜೆಯ ಕಸಿ ಸೌಕರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಜನವರಿ 2024 ರಿಂದ ಫೆಬ್ರವರಿ 2025ರವರೆಗೆ ಸ್ಪರ್ಶ್ ಆರ್.ಆರ್.ನಗರ ಆಸ್ಪತ್ರೆಯಲ್ಲಿ 35 ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು ಇವುಗಳಲ್ಲಿ ಆರು ಮೃತ ವ್ಯಕ್ತಿಗಳ ಅಂಗಾಂಗ ದಾನವೂ ಸೇರಿದೆ.ಮೂತ್ರಪಿಂಡ ಕಸಿ ಮಾಡಿಸಿಕೊಂಡು ನೆಮ್ಮದಿಯ ಜೀವನ ಮುನ್ನಡೆಸುತ್ತಿರುವ 29 ಮಂದಿ, ಕಿಡ್ನಿ ಸಮಸ್ಯೆ ವಿರುದ್ಧ ನಡೆಸಿದ ಹೋರಾಟ, ಕಸಿ ಮಾಡಿಸಿಕೊಂಡ ಬಳಿಕದ ಜೀವನದ ಕುರಿತು ವಿವರಿಸಿದರು.
“ಮೂತ್ರ ಪಿಂಡ ಸಂಬಂಧಿತ ಹಲವು ಕಾಯಿಲೆಗಳು ಸುಧಾರಿತ ಹಂತ ತಲುಪುವವರೆಗೂ ನಿಧಾನವಾಗಿ ಮತ್ತು ಯಾವುದೇ ಬಾಹ್ಯ ರೋಗ ಲಕ್ಷಣಗಳಿಲ್ಲದೇ ಮೌನವಾಗಿಯೇ ವೃದ್ಧಿಯಾಗುತ್ತಿರುತ್ತವೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ಒಳಗೊಂಡಂತೆ ಅಪಾಯದಲ್ಲಿರುವ ವ್ಯಕ್ತಿಗಳಿಗೆ ಸೂಕ್ತ ಕಾಲಕ್ಕೆ ಚಿಕಿತ್ಸೆ ನೀಡುವುದರಿಂದ ಈ ಕಾಯಿಲೆಗಳ ಸಂಕೀರ್ಣತೆಯನ್ನು ತಪ್ಪಿಸಬಹುದಾಗಿದೆ. ಆರಂಭದಲ್ಲೇ ರೋಗ ನಿರ್ಣಯ ಮತ್ತು ಸುಧಾರಿತ ಚಿಕಿತ್ಸೆ ಅವಕಾಶಗಳು ರೋಗಿಗಳಿಗೆ ಗುಣಮುಖರಾಗುವ ನಿಟ್ಟಿನಲ್ಲಿ ಉತ್ತಮ ಫಲಿತಾಂಶವನ್ನು ಖಚಿತಪಡಿಸುತ್ತವೆ” ಎಂದು ನೆಫ್ರೋಲಜಿ ವಿಭಾಗದ ಹಿರಿಯ ತಜ್ಞ ಡಾ.ಹರ್ಷ ಕುಮಾರ್ ಹೇಳಿದರು.
ಹೆಚ್ಚುತ್ತಿರುವ ದೀರ್ಘಾವಧಿ ಮೂತ್ರಪಿಂಡ ಕಾಯಿಲೆಯ ಹೆಚ್ಚುತ್ತಿರುವ ಹೊರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕಿಡ್ನಿ ಆರೈಕೆ ಮತ್ತು ಅಂಗಾಂಗ ಕಸಿಯಲ್ಲಿ ಸ್ಪರ್ಶ್ ಬದ್ಧತೆಯನ್ನು ವಿಶ್ವ ಕಿಡ್ನಿ ದಿನಾಚರಣೆಯು ಮತ್ತೊಮ್ಮೆ ಬಲಪಡಿಸುವುದರ ಜೊತೆಗೆ ಮುಂಜಾಗ್ರತೆಯ ಆರೋಗ್ಯ ಆರೈಕೆ ಉಪಕ್ರಮಗಳ ಮಹತ್ವದ ಕುರಿತು ತಿಳಿಸಿಕೊಟ್ಟಿತು.
“ಮೂತ್ರಪಿಂಡದ ಯಶಸ್ವಿ ಕಸಿಯು ಜೀವನ ಗುಣಮಟ್ಟವನ್ನು ಸುಧಾರಿಸುವುದು ಮಾತ್ರವಲ್ಲ ಅಂತಿಮ ಹಂತದ ಕಿಡ್ನಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಜೀವಿತಾವಧಿಯನ್ನು ಕೂಡ ಹೆಚ್ಚು ಮಾಡುವುದು. ಅಂಗಾಂಗ ಕಸಿಯ ನಿಸ್ವಾರ್ಥ ಕಾರ್ಯವು ಹಲವರಿಗೆ ಜೀವದಾನ ನೀಡಬಲ್ಲದು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಂಗಾಂಗ ದಾನ ಮಾಡಲು ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಿದೆ” ಎಂದು ಎಸ್‌ಎಸ್ ಸ್ಪರ್ಶ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಹಿರಿಯ ಸಮಾಲೋಚಕ ಮತ್ತು ಅಂಗಾಂಗ ಕಸಿ ವೈದ್ಯ ಡಾ.ಸುನಿಲ್ ಆರ್ ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಅಂಗಾಂಗ ದಾನ ಮಾಡಿದವರನ್ನು ಗೌರವಪೂರ್ವಕವಾಗಿ ನಿ. ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಸನ್ಮಾನಿಸಿದರು. ಅಂಗಾಂಗ ದಾನಿಗಳು, ಕಿಡ್ನಿ ಕಸಿ ಮಾಡಿ ಮರುಜೀವ ಪಡೆದುಕೊಂಡವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಸಿ ಮಾಡಿಸಿಕೊಂಡ ಬಳಿಕವೂ ತಾಯಿಯಾಗುತ್ತಿರುವವರ ಅನುಭವ ಮನ ಮಿಡಿಯುವಂತಿತ್ತು.
