ಕೊರಟಗೆರೆ :
ಗೌರಿಗಣೇಶ ಹಬ್ಬ ಮುಗಿಸಿಕೊಂಡು ಗೊರವನಹಳ್ಳಿ ಮಹಾಲಕ್ಷ್ಮೀ ದರ್ಶನಕ್ಕೆ ಬಂದ ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರು ಮತ್ತು ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಕೊರಟಗೆರೆ ತಾಲ್ಲೂಕು ಕಸಬಾ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಮಾದವಾರ ಗ್ರಾಮದ ರಸ್ತೆಯಲ್ಲಿ ಜಲ್ಲಿ ತುಂಬಿದ ಟ್ರ್ಯಾಕ್ಟರ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಆಗ ಕಾರಿನಲ್ಲಿದ್ದ ಎಂ.ಗೊಲ್ಲಹಳ್ಳಿಯ ಹನುಮಕ್ಕ ಮೃತಪಟ್ಟರೆ, ದೊಡ್ಡಮಾಲೂರಿನ ಮಮತಾ ಮತ್ತು ಉಮೇಶನಿಗೆ ತೀವ್ರ ತರಹದ ಗಾಯಗಳಾಗಿವೆ.
ಕೊರಟಗೆರೆ ಕಡೆಯಿಂದ ಗೊರವನಹಳ್ಳಿ ಕಡೆಗೆ ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಗೊರವನಹಳ್ಳಿಯಿಂದ ಮಹಾಲಕ್ಷ್ಮೀ ದರ್ಶನ ಮುಗಿಸಿ ಕೊಂಡು ಹಂಚಿಹಳ್ಳಿ ಗ್ರಾಮಕ್ಕೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.
ಟ್ರ್ಯಾಕ್ಟರ್ ಮತ್ತು ಕಾರು ಅಪಘಾತ ಆದ ತಕ್ಷಣ ಸ್ಥಳೀಯರ ಸಹಕಾರದಿಂದ ಕಾರಿನಲ್ಲಿದ್ದ ಕೊರಟಗೆರೆ ತಾಲ್ಲೂಕು ಎಂ.ಗೊಲ್ಲಹಳ್ಳಿ ಗ್ರಾಮದ ಹನುಮಕ್ಕ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮಧುಗಿರಿ ತಾಲ್ಲೂಕು ದೊಡ್ಡಮಾಲೂರು ಗ್ರಾಮದ ಮಮತಾ ಮತ್ತು ಉಮೇಶನಿಗೆ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.
ಅಪಘಾತ ಆದ ಸ್ಥಳಕ್ಕೆ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ, ಪಿಎಸೈ ನಾಗರಾಜು ಮತ್ತು ಎಎಸೈ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
