ಚಿತ್ರದುರ್ಗ:
ಯುದ್ಧಕ್ಕೆ ಹೋದಮೇಲೆ ತಾರ್ಕಿಕ ಅಂತ್ಯ ನೀಡಬೇಕಿತ್ತು. ಅದರ ಬದಲು ಅಮೆರಿಕ ಹೇಳಿದಾಕ್ಷಣ ಸಂಘರ್ಷವನ್ನು ನಿಲ್ಲಿಸಿದರೆ ಹೇಗೆ? ಈ ಕದನ ವಿರಾಮದಿಂದಾಗಿ ನಮ್ಮ ಎಲ್ಲಾ ಉದ್ದೇಶ ಈಡೇರಿದೆಯೇ ಎಂದು ಕೇಂದ್ರ ಸರ್ಕಾರಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯುದ್ಧಕ್ಕೆ ಹೋದಾಗ, ನಾವು ಯೋಜಿತ ರೀತಿಯಲ್ಲಿ ಹೋಗಿ ತಾರ್ಕಿಕ ಅಂತ್ಯಕ್ಕೆ ಬರಬೇಕು. ಯುದ್ಧದ ನಡುವೆ ನಾವು ಹಿಂದೆ ಸರಿದರೆ, ನಾವು ಕಳುಹಿಸುತ್ತಿರುವ ಸಂದೇಶವೇನು? ನಮ್ಮ ಉದ್ದೇಶ ಈಡೇರಿದೆಯೇ? ಉತ್ತರಿಸಲಾಗದ ಎಲ್ಲಾ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.
ಗಡಿಯಲ್ಲಿ ಸಂಘರ್ಷ ರದ್ದುಗೊಳಿಸಿದ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಸಾರ್ವಜನಿಕರು ಯುದ್ಧದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಒಮ್ಮೆ ನಾವು ಯುದ್ಧಕ್ಕೆ ಹೋದ ಬಳಿಕ ತಾರ್ಕಿಕ ಅಂತ್ಯ ಹಾಡಬೇಕು. ಮುಂದಿನ ಆಗುಹೋಗುಗಳ ಬಗ್ಗೆ ಲೆಕ್ಕ ಹಾಕಿ ಯುದ್ಧಕ್ಕೆ ಹೋಗಬೇಕಿತ್ತು. ಅದರ ಬದಲಾಗಿ ಅಮೆರಿಕ ಹೇಳಿದಾಕ್ಷಣ ನಾವು ಸಂಘರ್ಷವನ್ನು ನಿಲ್ಲಿಸಿದರೆ ಹೇಗೆ? ಈ ಕದನ ವಿರಾಮದಿಂದಾಗಿ ನಮ್ಮ ಎಲ್ಲಾ ಉದ್ದೇಶ ಈಡೇರಿದ್ಯಾ ಎಂಬುದು ನನ್ನ ಮೊದಲ ಪ್ರಶ್ನೆ. ಇಂತಹ ಪ್ರಶ್ನೆಗಳು ಭಾರತದ ಎಲ್ಲಾ ನಾಗರಿಕರ ಮನಸ್ಸಿನಲ್ಲಿಯೂ ಉದ್ಭವವಾಗಿವೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕು. ಜೊತೆಗೆ ಕಾಶ್ಮೀರ ನಮ್ಮ ಆಂತರಿಕ ವಿಷಯವೆಂದು ಪಾಕಿಸ್ತಾನವೇ ಒಪ್ಪಿಕೊಂಡಿದ್ದು, ಈ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ವಹಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಾವು ಇಷ್ಟು ದಿನ ತೆಗೆದುಕೊಂಡ ನಿಲುವು ಏನಾಯ್ತು? ನಮ್ಮ ಕಾಶ್ಮೀರದ ವಿಚಾರ ಭಾರತದ ಆಂತರಿಕ ವಿಷಯವೋ ಅಥವಾ ಅಂತಾರಾಷ್ಟ್ರೀಯ ವಿಷಯವೋ ಎಂಬ ಅನುಮಾನ ನಮಗೆ ಮೂಡಿದೆ. ಅಷ್ಟೇ ಅಲ್ಲದೇ ನಾವೇ ಎಲ್ಲೋ ಒಂದು ಕಡೆ ಕಾಶ್ಮೀರದ ವಿಚಾರವನ್ನು ಅಂತಾರಾಷ್ಟ್ರೀಯ ವಿಷಯ ಮಾಡುತ್ತಿದ್ದು, ಆಂತರಿಕ ವಿಚಾರವನ್ನು ಅಂತಾರಾಷ್ಟ್ರೀಯ ವಿಷಯ ಮಾಡುವ ಮೂಲಕ ಎಲ್ಲೆಂದರಲ್ಲಿ ಮಾತಾಡಲು ನಾವೇ ಅವಕಾಶ ಮಾಡಿಕೊಟ್ಟಂತಿದೆ ಎಂದು ಹೇಳಿದರು. ನಮ್ಮ ಕಾಶ್ಮೀರದ ಬಗ್ಗೆ ಯಾರು ಬೇಕಾದರೂ ಮಾತನಾಡುತ್ತಾ ಉಪದೇಶ ಕೊಡುವ ಅವಕಾಶ ನೀಡಿರುವುದರಿಂದಾಗಿ ನಮಗೆ ತೀವ್ರ ನಷ್ಟವೇ ಆಗಲಿದೆ. ಹೀಗಾಗಿ ಈ ಪಾಕಿಸ್ತಾನಕ್ಕೆ ಶಾಶ್ವತ ಪಾಠ ಕಲಿಸಬೇಕೆಂಬ ಸಂಕಲ್ಪದಿಂದ ಆರಂಭವಾದ ಕದನಕ್ಕೆ ವಿರಾಮ ಮಾಡುವಾಗ ನಮ್ಮ ಉದ್ದೇಶ ಈಡೇರಿದ್ಯಾ ಎಂಬುದನ್ನು ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ತಿಳಿಸಿದರು.
1971 ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಪಾಕಿಸ್ತಾನ ಭಾರತವನ್ನು ತೊಂದರೆಗೊಳಿಸಲು ಪ್ರಯತ್ನಿಸಿತು. ಈ ವೇಳೆ ಇಂದಿರಾ ಗಾಂಧಿ ಸುಮ್ಮನೆ ಕುಳಿತುಕೊಳ್ಳಲಿಲ್ಲ, ಬದಲಾಗಿ ಅವರ ವಿರುದ್ಧ ಸಂಪೂರ್ಣ ಯುದ್ಧಕ್ಕೆ ಮುಂದಾದರು. ಪಾಕಿಸ್ತಾನವನ್ನು ವಿಭಜಿಸಿ ಬಾಂಗ್ಲಾದೇಶ ಎಂಬ ಹೊಸ ದೇಶವನ್ನು ಸೃಷ್ಟಿಸಿದರು, ಜೊತೆಗೆ ಲಾಹೋರ್‌ನವರೆಗೆ ಆಳವಾಗಿ ಹೋಗಿ ಪಾಕಿಸ್ತಾನವನ್ನು ಸೋಲನ್ನು ಒಪ್ಪಿಕೊಳ್ಳುವಂತೆ ಮಾಡಿದರು.
ಪಾಕಿಸ್ತಾನದ ಸಾವಿರಾರು ಸೈನಿಕರು ಭಾರತದ ಮುಂದೆ ಶರಣಾದರು. ಇಂದಿರಾ ಗಾಂಧಿಯವರ ಬಲವಾದ ಮತ್ತು ದಿಟ್ಟ ನಾಯಕತ್ವದಿಂದಾಗಿ ಆ ದೇಶವು ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ನಾವು ಹಾಗೂ ಪಾಕಿಸ್ತಾನದವರು ಮಾತನಾಡಿಕೊಳ್ಳುವುದು ಒಂದು ಭಾಗವಾದರೆ, ಟ್ರಂಪ್ ಹೇಳಿದಾಕ್ಷಣ ನಾವು ಮಂಡಿ ಊರಿದಾಗ ನಮ್ಮ ಸಾರ್ವಭೌಮ ಏನಾಯ್ತು? ಒಂದು ವೇಳೆ ಅವರು ಹೇಳಿದ ಕೂಡಲೇ ನಾವು ಎಸ್ ಸಾರ್ ಅಂತ ಒಪ್ಪಿಕೊಂಡ್ರೆ ಹೇಗೆ? ಗುರಿ ಈಡೇರಿದ ನಂತರ ಕದನ ವಿರಾಮವನ್ನು ಒಪ್ಪಿಕೊಂಡಿದ್ದರೆ ನಮ್ಮ ಸಹಮತವಿತ್ತು. ಬದಲಾಗಿ ಪಾಕಿಸ್ತಾನ ಇನ್ನೊಮ್ಮೆ ನಮ್ಮ ವಿಚಾರದಲ್ಲಿ ಕೈ ಹಾಕದ ರೀತಿ ಬುದ್ಧಿ ಕಲಿಸದೇ, ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕ ಹೇಳಿದ ಕೂಡಲೇ ಒಪ್ಪಿಕೊಳ್ಳುವುದು ಎಷ್ಟು ಸರಿ ಎಂದು ಗುಡುಗಿದರು.
