ಬೆಂಗಳೂರು
ಮೊಬೈಲ್ನಲ್ಲಿ ಜೂಡೋ ಗೇಮ್ ಆಡುವ ವಿಚಾರದಲ್ಲಿ ಉಂಟಾದ ಯುವಕರ ಜಗಳ ಓರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡುವುದರೊಂದಿಗೆ ಅಂತ್ಯ ವಾಗಿರುವ ದುರ್ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಮಾರಸ್ವಾಮಿ ಲೇಔಟ್ನ ಬೇಂದ್ರೆ ನಗರದ ಶೇಖ್ ಮಿಲನ್ (32)ಎಂದು ಕೊಲೆಯಾದ ಯುವಕನನ್ನು ಗುರುತಿಸಲಾಗಿದೆ.ಶೇಖ್ ಮಿಲನ್ನನ್ನು ಆತನ ಸ್ನೇಹಿತರಾದ ಷಾಹಿಬ್ ಮಹಮದ್ ಅಲಿ, ನಯಾಜ್ ಹಾಗೂ ಅಜು ಸೇರಿ ನಾಲ್ವರು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾರೆ.
ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದ ಶೇಖ್ ಮಿಲನ್ ಇಲಿಯಾಸ್ ನಗರದಲ್ಲಿ ಶುಕ್ರವಾರ ರಾತ್ರಿ 10.30ರ ವೇಳೆ
ಆರೋಪಿ ಷಾಹಿಬ್ನ ಮೊಬೈಲ್ನಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಡೋ ಗೇಮ್ ಆಡುತ್ತಿದ್ದರು. ಆಟದಲ್ಲಿ ಷಾಹಿಬ್ ಸೋತರೂ, ಶೇಖ್ ಮಿಲನ್ಗೆ ಹಣ ನೀಡಿರಲಿಲ್ಲ.
ಹಣ ನೀಡುವಂತೆ ಶೇಖ್ ಮಿಲನ್ ಕೇಳಿದಾಗ ಷಾಹಿಬ್ ಪ್ರತಿರೋಧ ತೋರಿ ಜಗಳಕ್ಕೆ ಇಳಿದಿದ್ದಾನೆ. ಆಕ್ರೋಶಗೊಂಡ ಶೇಖ್ ಮಿಲನ್, ಷಾಹಿಬ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಷಾಹಿಬ್, ಇತರರ ಜೊತೆ ಸೇರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಶೇಖ್ ಮಿಲನ್ನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ, ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿ, ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿಗಳಿಗೆ ಬಲೆಬೀಸಿದ್ದಾರೆ.