ನಮ್ಮನ್ನು ಊರುಗಳಿಗೆ ಕಳಿಸಿ, ಇಲ್ಲವೆ ಹೋಗಲು ಬಿಡಿ

ಹಾಸ್ಟೆಲ್‍ನಲ್ಲಿ ಆಶ್ರಯ ಪಡೆದಿರುವ ವಲಸೆ ಕಾರ್ಮಿಕರ ಆಕ್ರೋಶ

ತುಮಕೂರು

       ನಗರದ ಹನುಮಂತಪುರದ ಎಸ್ಸಿ, ಎಸ್ಟಿ ಹಾಸ್ಟೆಲ್‍ನಲ್ಲಿ ಕಳೆದ 22 ದಿನಗಳಿಂದ ಆಶ್ರಯ ಪಡೆದಿದ್ದ ವಿವಿಧ ಜಿಲ್ಲೆಗಳ ಕಟ್ಟಡ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಬೇಕು, ನಮ್ಮನ್ನು ಕಳಿಸಿ ಎಂದು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ನೀವು ಕಳಿಸದಿದ್ದರೆ ನಾವೇ ಹೋಗುತ್ತೇವೆ ಎಂದು ಹಾಸ್ಟೆಲ್‍ನ ಗೇಟು ದಾಟಿ ರಸ್ತೆಗೆ ಬಂದರು. ತಹಶೀಲ್ದಾರ್ ಮೋಹನ್‍ಕುಮಾರ್ ಹಾಗೂ ಪೊಲೀಸರು ಅವರ ಮನವೊಲಿಸಿ ವಾಪಸ್ ಹಾಸೆಲ್‍ಗೆ ಕಳಿಸಿದರು.

       ಕೂಲಿ ಅರಸಿ ಬೆಂಗಳೂರಿಗೆ ಬಂದಿದ್ದ ಈ ಕಾರ್ಮಿಕರು ಲಾಕ್‍ಡೌನ್ ಘೋಷಣೆಯಾದ ನಂತರ ಕೂಲಿ ಇಲ್ಲದೆ ತಮ್ಮ ಊರುಗಳತ್ತ ಹೊರಟಿದ್ದರು. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಹಾಗೂ ಆಂಧ್ರ ಮೂಲದವರಾದ 316 ಕಾರ್ಮಿಕರನ್ನು ಕೊರೊನಾ ಸೋಂಕು ಹರಡುವ ಭೀತಿಯಿಂದ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಇವರನ್ನು ತಡೆದು ನಗರದ ಎರಡು ಹಾಸ್ಟೆಲ್‍ನಲ್ಲಿ ಆಶ್ರಯ ನೀಡಿತ್ತು. ಇವರಲ್ಲಿ 192 ಪುರುಷರು, 106 ಮಹಿಳೆಯರು ಹಾಗೂ 18 ಮಕ್ಕಳು ಇದ್ದಾರೆ. ಈ ಕಾರ್ಮಿಕರು ಗುಲ್ಬರ್ಗಾ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯಪುರ, ಕೊಪ್ಪಳ ಜಿಲ್ಲೆಗೆ ಸೇರಿದವರಾಗಿದ್ದಾರೆ. ಇವರಲ್ಲಿ 43 ಜನ ಆಂಧ್ರದ ಅನಂತಪುರಂ ಹಾಗೂ ಮಂತ್ರಾಲಯ ಪ್ರದೇಶದವರಾಗಿದ್ದಾರೆ.

      ಇವರ ಊಟ, ವಸತಿಗೆ ತೊಂದರೆ ಆಗದಂತೆ ಜಿಲ್ಲಾಡಳಿತ ಅಗತ್ಯ ವ್ಯವಸ್ಥೆ ಮಾಡಿದೆ. ಪ್ರತಿ ದಿನ ವೈದ್ಯರ ತಂಡ ಬಂದು ಇವರ ಆರೋಗ್ಯ ತಪಾಸಣೆಮಾಡುತ್ತದೆ. ನಗರ ಪಾಲಿಕೆಯಿಂದ ಈ ಹಾಸ್ಟೆಲ್‍ಗಳಲ್ಲಿ ಶೌಚಾಲಯ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಹಾಸ್ಟೆಲ್‍ನ ಪಾಕಶಾಲೆಯಲ್ಲಿ ಊಟ, ತಿಂಡಿ ಸಿದ್ಧಪಡಿಸಿ ನೀಡಲಾಗುತ್ತಿದೆ. ಎಲ್ಲಾ ಕಾರ್ಮಿಕರಿಗೆ ಅಗತ್ಯ ತಟ್ಟೆ, ಲೋಟ, ಹಾಸಲು, ಹೊದಿಯಲು ವ್ಯವಸ್ಥೆ ಮಾಡಲಾಗಿದೆ. ಎಂದು ತಹಶೀಲ್ದಾರ್ ಮೋಹನ್ ಕುಮಾರ್ ಹೇಳಿದರು.
ಈ ವಲಸೆ ಕಾರ್ಮಿಕರಿಗೆ ಇಲ್ಲಿ ಉಳಿಯಲು ಇಷ್ಟವಿಲ್ಲ, ಇತ್ತ ಕೂಲಿಯೂ ಇಲ್ಲ, ಅತ್ತ ತಮ್ಮ ಊರುಗಳಿಗೂ ಹೋಗಲಾರದೆ ಅತಂತ್ರ ಸ್ಥಿತಿಯಲ್ಲಿ 22 ದಿನಗಳಿಂದ ಇಲ್ಲಿ ಉಳಿದಿದ್ದಾರೆ. ನಮ್ಮನ್ನು ಊರಿಗೆ ಕಳಿಸಿಕೊಡಿ ಎಂದು ಪ್ರತಿದಿನ ಅಧಿಕಾರಿಗಳಲ್ಲಿ ಗೋಗರೆಯುತ್ತಿದ್ದರು, ಸರ್ಕಾರದ ಆದೇಶ ಬಂದ ತಕ್ಷಣ ನಿಮ್ಮನ್ನು ಊರಿಗೆ ಕಳಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಲೇ ಬಂದಿದ್ದರು.

     ತಾಳ್ಮೆಗೆಟ್ಟವರಂತೆ ಬುಧವಾರ ಸಂಜೆ, ನಾವು ಹೇಗೋ ಊರು ತಲುಪುತ್ತೇವೆ ಎಂದು ಅಷ್ಟೂ ಜನ ಬ್ಯಾಗ್ ಸಿದ್ಧ ಮಾಡಿಕೊಂಡು ಹಾಸ್ಟೆಲ್ ಬಿಟ್ಟು ಹೊರಬಂದರು. ವಿಷಯ ತಿಳಿದು ತಹಶೀಲ್ದಾರ್ ಮೋಹನ್‍ಕುಮಾರ್ ಸ್ಥಳಕ್ಕೆ ಬಂದರು. ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳು ಕಾರ್ಮಿಕರ ಮನವೊಲಿಸಿ ವಾಪಾಸ್ ಕಳಿಸಿದರು.

     ಕಟ್ಟಡ ಕಾಮಗಾರಿಗೆ ಲಾಕ್‍ಡೌನ್‍ನಲ್ಲಿ ಸರ್ಕಾರ ವಿನಾಯಿತಿ ಕೊಡುವ ಸಾಧ್ಯತೆಗಳಿದ್ದು, ಇಲ್ಲಿನ ಕಾರ್ಮಿಕರೂ ಕಟ್ಟಡ ಕಾರ್ಮಿಕರೇ ಆಗಿರುವುದರಿಂದ ಸರ್ಕಾರದ ಆದೇಶ ದೊರೆತರೆ ನಾಳೆ ಇವರನ್ನು ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು, ಇದಕ್ಕಾಗಿ ಹತ್ತು ಬಸ್‍ಗಳು ಸಿದ್ಧವಾಗಿವೆ ಎಂದು ತಹಶೀಲ್ದಾರ್ ಮೋಹನ್‍ಕುಮಾರ್ ಹೇಳಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ