ತುರುವೇಕೆರೆ
ವರ್ಷವೆಲ್ಲಾ ರೈತ ಕಷ್ಟಪಟ್ಟು ಬೆಳೆದ ಬಾಳೆಕಾಯಿ ಕೊರೋನಾ ಬಂದ್‍ನಿಂದಾಗಿ ಗೊನೆಯ ಮೇಲೆಯೆ ಹಣ್ಣಾಗಿ ಹಾಳಾಗುತ್ತಿದ್ದು, ರೈತ ತಲೆ ಮೇಲೆ ಕೈಹೊತ್ತು ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿ, ಮುಂದೇಗೆ ಎಂಬುವಂತ ಪ್ರಶ್ನೆ ಆತನನ್ನು ಕಾಡತೊಡಗಿದೆ.
ಬಾಳೆಹಣ್ಣು ಸರ್ವವಿಧದಲ್ಲೂ ಬಳಸಲೆ ಬೇಕಾದ ಹಣ್ಣಾಗಿದೆ. ಪ್ರತಿಯೊಂದು ಸಂದÀರ್ಭದಲ್ಲೂ ಬಾಳೆ ಹಣ್ಣಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಪ್ರತಿ ಹಬ್ಬ, ಹುಣ್ಣಿಮೆ, ಹರಿದಿನಗಳಲ್ಲಿ ಪೂಜೆ ಪುರಸ್ಕಾರಗಳಿಗೆ ಈ ಹಣ್ಣು ಸಾಂಪ್ರದಾಯಿಕವಾಗಿ ಬಳಕೆಯಲ್ಲಿರುವ ವಸ್ತು. ಮನುಷ್ಯ ಹುಟ್ಟಿದಂದಿನಿಂದ ಹಿಡಿದು ಆತನ ಅಂತ್ಯಕ್ರಿಯೆ ವರೆಗೂ ಬಾಳೆಹಣ್ಣು ಪೂಜ್ಯಸ್ಥಾನದಲ್ಲಿದೆ. ಮನುಷ್ಯನ ಆರೋಗ್ಯ ದೃಷ್ಟಿಯಿಂದಲೂ ಇದನ್ನು ಎಲ್ಲರೂ ಪ್ರತಿದಿನ ಬಳಸುತ್ತಾರೆ.
ಪ್ರಯೋಜನಗಳು:
ನೀರೊಂದಿದ್ದರೆ ಎಂತಹ ಪ್ರದೇಶಗಳಲ್ಲಾದರೂ ಸಮೃದ್ದವಾಗಿ ಬೆಳೆಯುವ ಬಾಳೆಯಿಂದ ಅನೇಕ ಪ್ರಯೋಜನಗಳುಂಟು. ಮದುವೆ, ಜಾತ್ರೆ, ಹಬ್ಬ-ಹರಿದಿನ ಸೇರಿದಂತೆ ಯಾವುದೇ ಶುಭ ಸಂದರ್ಭದಲ್ಲಿ ಬಾಳೆ ಕಂದನ್ನು ಅಲಂಕಾರಕ್ಕಾಗಿ ಉಪಯೋಗಿಸುತ್ತಾರೆ. ಬಾಳೆಕಂದಿನ ಒಳಗಿನ ಕಾಂಡವನ್ನು ಔಷಧಿ ರೂಪದಲ್ಲಿಯೂ, ಸಾಂಬಾರಿಗೂ, ಬಾಳೆಕಾಯನ್ನು ಅಡುಗೆ ಸಾಂಬಾರಿಗೂ, ಪಲ್ಯಕ್ಕೂ ಉಪಯೋಗಿಸುತ್ತಾರೆ.
ಮಲೆನಾಡಿನ ಪ್ರದೇಶಗಳಲ್ಲಿ ಪೂರಾ ಹಣ್ಣಾದ ಬಾಳೆಹಣ್ಣಿನಿಂದ ವೈನ್ ತಯಾರು ಮಾಡಿ ಉಪಯೋಗಿಸುತ್ತಾರೆ. ಕಾಂಡದ ಒಣಗಿದ ಪದರಗಳನ್ನು ಉಪಯೋಗಿಸಿ ಹಗ್ಗಗಳನ್ನು ತಯಾರು ಮಾಡಬಹುದಾಗಿದೆ.
ಅರೆಕಾಲಿಕ ಬೆಳೆ:
ತಾಲ್ಲೂಕಿನಲ್ಲಿ ಹೆಚ್ಚಾಗಿ ಮಳೆ ಆಶ್ರಿತ ಪ್ರದೇಶದಲ್ಲಿ ಸುಮಾರು ರೈತರು ಬಿಳಿ ಪುಟ್ಟಬಾಳೆಯನ್ನು ಯಥೇಚ್ಛವಾಗಿ ಬೆಳೆದಿದ್ದಾರೆ. ತೆಂಗು, ಅಡಕೆ ದೀರ್ಘಕಾಲಿಕ ಬೆಳೆಯಾದರೆ, ದಿನನಿತ್ಯದ ಖರ್ಚಿಗೆ ರೈತ ಅರೆಕಾಲಿಕವಾಗಿ ಬಾಳೆಯನ್ನು ಅವಲಂಬಿಸಿದ್ದಾನೆ. ತಾಲ್ಲೂಕಿನಲ್ಲಿ ಈ ಬಾರಿ ರೈತರು ಹೆಚ್ಚು ಉತ್ತೇಜಿತಗೊಂಡು ಬಾಳೆ ಬೆಳೆಗೆ ಸನ್ನದ್ದರಾದರು. ಬೆಳೆದ ಬಾಳೆ ತೋಟಗಳಲ್ಲೀಗ ಗೊನೆ ಬಲಿತು ಇನ್ನೇನು ಬೆಳೆ ಕೊಯ್ಲು ಮಾಡಿ ರೈತನ ಕೈಗೆ ಲಕ್ಷ್ಮೀ ಬರಬೇಕು ಎನ್ನುವಷ್ಟರಲ್ಲಿ ಮಾರ್ಚ್ ತಿಂಗಳಲ್ಲಿ ಬಂದೆರಗಿದ ಕೊರೋನಾ ಎಂಬ ಬಿರುಗಾಳಿಗೆ ಸಿಲುಕಿ ಬಾಳೆ ಇದೀಗ ನೆಲಕಚ್ಚುವಂತಾಗಿದೆ.
ಕಳೆದ ವರ್ಷ ಹಬ್ಬಗಳು ಸರದಿಯೋಪಾದಿಯಲ್ಲಿ ಬರುತ್ತಿದ್ದುದರಿಂದ ಬೆಂಗಳೂರು-ಮೈಸೂರು ಸೇರಿದಂತೆ ಇತರೆಡೆಗಳಿಂದ ಬಾಳೆಕಾಯಿ ಕೊಳ್ಳುವ ವರ್ತಕರು ತುರುವೇಕೆರೆಗೆ ಲಗ್ಗೆಯಿಟ್ಟು ಪೈಪೋಟಿ ಮೇಲೆ ಬೆಲೆ ಕೊಟ್ಟು ಬಾಳೆಕಾಯಿ ಕೊಳ್ಳುತ್ತಿದ್ದರು. ಪಟ್ಟಣದ ಗಡಿಯಂಚಿನಲ್ಲಿಯೆ ಖರೀದಿದಾರರು ರಸ್ತೆಬದಿಗಳಲ್ಲೆ ಠಿಕಾಣಿ ಹೂಡಿ ರೈತರನ್ನು ಅಡ್ಡಗಟ್ಟಿ ಚೌಕಾಶಿಯೋಪಾದಿಯಲ್ಲಿ ನಾ ಮುಂದು ತಾ ಮುಂದು ಎಂಬಂತೆ ವ್ಯಾಪಾರ ಕುದುರಿಸಿ ಕೊಳ್ಳುತ್ತಿದ್ದರು. ಒಂದು ವೇಳೆ ಹೊರಗಿನ ವರ್ತಕರು ಬಾರದಿದ್ದ ಪಕ್ಷದಲ್ಲಿ ಸ್ಥಳೀಯ ವರ್ತಕರು ಕೇಳಿದಷ್ಟು ಬೆಲೆಗೆ ರೈತ ಬಾಳೆಕಾಯಿ ಕೊಡಬೇಕಿತ್ತು.
ಬಾಳೆಗೆ ಕೊರೋನಾ ಛಾಯೆ:
ಈ ಬಾರಿ ಎಲ್ಲಾ ಕಡೆ ಜಾತ್ರೆಗಳು ಪ್ರಾರಂಭವಾಗಿ ಬಾಳೆಕಾಯಿಗೆ ಒಳ್ಳೆ ಬೆಲೆ ಬರಬಹುದೆಂಬ ಲೆಕ್ಕಾಚಾರದಲ್ಲಿದ್ದ ರೈತನಿಗೆ ಒಮ್ಮೆಲೆ ಕೊರೋನಾ ಛಾಯೆಯ ಮುಸುಕು ಆವರಿಸಿದೆ. ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಜಾತ್ರೆ-ಹರಿದಿನಗಳು ರದ್ದಾಗಿ ಆತನಲ್ಲಿದ್ದ ಆಶಾಭಾವನೆ ಇದೀಗ ಬತ್ತಿ ಹೋಗಿದೆ. ಬಾಳೆಕಾಯನ್ನು ಕೊಯ್ಲು ಮಾಡದೆ ಜಮೀನಿನಲ್ಲೇ ಬಾಳೆ ಗೊನೆಯ ಮೇಲೆ ಹಣ್ಣಾಗಿ ಕೊಳೆಯುತ್ತಿದ್ದು, ಅಲ್ಪಸ್ವಲ್ಪ ಹಕ್ಕಿ ಪಕ್ಷಿಗಳ ಪಾಲಾಗುತ್ತಿದೆ. ಕೆ.ಜಿ.ಗೆ ಕೇವಲ 10 ರೂ.ಗಳಿಗೆ ಕೊಡುತ್ತೇನೆಂದರೂ ಕೊಳ್ಳುವವರಿಲ್ಲ.
ಎಕರೆಗಟ್ಟಲೆ ಬೆಳೆದ ಬಾಳೆಯನ್ನು ಮಾರಲು ಮಾರುಕಟ್ಟೆಗೆ ತರಲಾರದೆ ತೊಳಲಾಡುತ್ತಿದ್ದಾನೆ. ಬಾಳೆಕಾಯಿ ಕಾಯಿ-ಕೊಬ್ಬರಿಯಂತೆ ಕೂಡಿಡುವ ವಸ್ತುವೂ ಅಲ್ಲ. ಚಿಲ್ಲರೆಯಾಗಿ ಮಾರೋಣವೆಂದರೂ ಮನೆಯಿಂದ ಈಚೆ ಬರುವಂತಿಲ್ಲ. ಗೊನೆಯೆಲ್ಲಾ ಹಾಳಾದ ಮೇಲೆ ಕೊಳ್ಳುವವರಿದ್ದರೇನು ಪ್ರಯೋಜನ? “ಊರೆಲ್ಲಾ ಹೋದಮೇಲೆ ಊರ ಬಾಗಿಲು ಮುಚ್ಚಿದರು” ಅನ್ನೋ ಗಾದೆಯಂತೆ ಬೆಳೆಯೆ ಹಾಳಾಗಿ ಮಣ್ಣು ಪಾಲಾದ ಮೇಲೆ ಬಂದರೆಷ್ಟು? ಬಿಟ್ಟರೆಷ್ಟು ಎಂಬುದು ರೈತನ ಪ್ರಶ್ನೆಯಾಗಿದೆ.
ಇದೇ ಏಪ್ರಿಲ್ 14 ಕೊರೋನಾ ಬಂದ್‍ಗೆ ಅಂತಿಮ ಗಡುವಾಗಿದ್ದು, ಅದರ ನಿರೀಕ್ಷೆಯಲ್ಲಿರುವ ರೈತ, ತದನಂತರ ವಾದರೂ ಅಳಿದುಳಿದ ಬಾಳೆ ಬೆಳೆಯನ್ನು ಮಾರಬಹುದೆಂಬ ಆಶಾಭಾವನೆಯಲ್ಲಿ ರೈತ ತೊಳಲಾಡುತ್ತಿರುವುದು ವಿಪರ್ಯಾಸವೆ ಸಸರಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
