ಚಿತ್ರದುರ್ಗ:
ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕಾಗಿರುವುದರಿಂದ ಬೂತ್ ಮಟ್ಟದ ಪ್ರಮುಖ ಕಾರ್ಯಕರ್ತರ ಸಭೆ ನಡೆಸಿದ್ದು, ಮಾ.6 ರಿಂದ 9 ರವರೆಗೆ ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಶಕ್ತಿ ಕೇಂದ್ರದಲ್ಲಿ ಸಭೆ ನಡೆಸಿ ಲೋಕಸಭಾ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲಾಗುವುದು ಎಂದು ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ತಿಳಿಸಿದರು.
ಬಿಜೆಪಿ.ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಾ.11 ರಂದು ಚಿತ್ರದುರ್ಗದಲ್ಲಿ ವಿಜಯ ಸಂಕಲ್ಪ ಯಾತ್ರೆ ಬೃಹತ್ ಸಮಾವೇಶ ನಡೆಸಲಾಗುವುದು. ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ.ಯ ಅನೇಕ ಮುಖಂಡರುಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಬಿಜೆಪಿ.ಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಹೊಳಲ್ಕೆರೆಯಲ್ಲಿ ಹೇಳಿರುವುದನ್ನು ಅತೀವವಾಗಿ ಖಂಡಿಸಿದ ಕೆ.ಎಸ್.ನವೀನ್ ಕಾಂಗ್ರೆಸ್ ಸಾಧನೆಯನ್ನು ಮುಂದಿಟ್ಟುಕೊಂಡು ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಮತದಾರರ ಬಳಿ ಹೋಗುತ್ತೇವೆಂದು ಹೊಸದುರ್ಗದಲ್ಲಿ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ರಾಹುಲ್‍ಗಾಂಧಿಯನ್ನು ನೋಡಿ ಮತ ಹಾಕಿ ಎಂದು ಕಾರ್ಯಕರ್ತರಲ್ಲಿ ಗೋಗರೆಯುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಪಕ್ಷಕ್ಕೆ ನಡುಕ ಉಂಟಾಗಿದೆ ಎಂದು ವ್ಯಂಗ್ಯವಾಡಿದರು.
ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ವಿಳಂಭವಾಗುತ್ತಿರುವುದೇಕೆ, ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಇನ್ನು ಜಾರಿಯಾಗಿಲ್ಲ. ತುಂಗಭದ್ರಾ ಹಿನ್ನೀರಿನಿಂದ ಚಳ್ಳಕೆರೆ, ಮೊಳಕಾಲ್ಮುರು, ಪಾವಗಡಕ್ಕೆ ಏಕೆ ನೀರಿಲ್ಲ. ರಾಜ್ಯದಲ್ಲಿ ಬಿಜೆಪಿ.ಅಧಿಕಾರದಲ್ಲಿದ್ದಾಗ ಚಿತ್ರದುರ್ಗಕ್ಕೆ ಮಂಜೂರು ಮಾಡಿದ್ದ ಮೆಡಿಕಲ್ ಕಾಲೇಜು ಇನ್ನು ಆರಂಭಗೊಂಡಿಲ್ಲ. ಮಧ್ಯಕರ್ನಾಟಕದ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ನಿರ್ಲಕ್ಷೆ ಮಾಡುತ್ತಿರುವುದು ಏಕೆ ಈ ಐದು ಪ್ರಶ್ನೆಗಳಿಗೆ ಮೊದಲು ಕಾಂಗ್ರೆಸ್ ಮತ್ತು ಜೆಡಿಎಸ್.ನವರು ಉತ್ತರಿಸಲಿ ಎಂದು ಕೆ.ಎಸ್.ನವೀನ್ ಸವಾಲು ಹಾಕಿದರು.
ಕೇಂದ್ರದಲ್ಲಿ ನಾಲ್ಕುವರೆ ವರ್ಷಗಳ ಕಾಲ ಪ್ರಧಾನಿ ನರೇಂದ್ರಮೋದಿರವರ ಸಾಧನೆ, ಕಾಂಗ್ರೆಸ್ ಹಾಗೂ ಜೆಡಿಎಸ್.ನ ಭ್ರಷ್ಟಾಚಾರವನ್ನು ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಸಂಚರಿಸಿ ಪ್ರತಿ ಮನೆ ಮನೆಗೆ ಕರಪತ್ರಗಳನ್ನು ಹಂಚಲಾಗುವುದು. ಚಳ್ಳಕೆರೆ ಟೋಲ್‍ಗೇಟ್‍ನಲ್ಲಿ ಬಸ್‍ನಿಲ್ದಾಣ ಉದ್ಘಾಟಿಸಿದ ಸಂಸದ ಬಿ.ಎನ್.ಚಂದ್ರಪ್ಪನವರು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ. ಗಂಗಸಮುದ್ರವನ್ನು ಸಂಸದರ ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಅಲ್ಲಿ ಯಾವ ಉದ್ದಾರವೂ ಆಗಿಲ್ಲ. ಮಾಜಿ ಸಚಿವ ಹೆಚ್.ಆಂಜನೇಯರವರ ಸಾಧನೆ ಏನು ಎಂದು ಖಾರವಾಗಿ ಪ್ರಶ್ನಿಸಿದರು.
ಚಳ್ಳಕೆರೆ ತಾಲೂಕು ಪರಶುರಾಂಪುರ ಹೋಬಳಿಯ ಕಾಮಸಮುದ್ರದಲ್ಲಿ ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ಸ್ವ ಇಚ್ಚೆಯಿಂದ ಮೋದಿರವರ ಟೀಶರ್ಟ್ ಹಾಕಿಕೊಂಡು ಜಾತ್ರೆಯೊಂದರಲ್ಲಿ ಕಾಣಿಸಿಕೊಂಡಾಗ ಪೊಲೀಸರು ಬಲವಂತಾವಾಗಿ ಟೀಶರ್ಟ್‍ಗಳನ್ನು ಬಿಚ್ಚಿಸಲು ಹೊರಟಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್.ನವರು ಪೊಲೀಸರನ್ನು ಬಳಸಿಕೊಂಡು ದೌರ್ಜನ್ಯ, ದಬಾವಣೆ ನಡೆಸಿದರೆ ಸಹಿಸುವುದಿಲ್ಲ. ಪೊಲೀಸರ ಈ ಕ್ರಮವನ್ನು ಅತ್ಯುಗ್ರವಾಗಿ ಖಂಡಿಸುತ್ತೇವೆ. ಇದೇ ರೀತಿ ದಬ್ಬಾಳಿಕೆ ಮುಂದುವರೆದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ 144 ವಿವಿಧ ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಶ್ರಮ್‍ಯೋಗಿ ಮಾನ್-ಧನ್ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ದೇಶದ 40 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರಿಗೆ ಪ್ರಯೋಜನವಾಗಲಿದೆ.
ಇದೊಂದು ಕೇಂದ್ರ ಸರ್ಕಾರದ ಅತ್ಯುತ್ತಮ ಯೋಜನೆಯಾಗಿದ್ದು, ಆಟೋ ಮತ್ತು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು, ಗೃಹ ಕಾರ್ಮಿಕರು, ಮೀನುಗಾರರು, ಕುಂಬಾರರು, ಚಮ್ಮಾರರು, ಕ್ಷೌರಿಕರು, ಕಸಾಯಿಖಾನೆಯವರು, ಮನೆಗಳಲ್ಲಿ ಬೀಡಿ ಕಟ್ಟುವವರು, ಶಿಲ್ಪಿಕಾರರು, ಚಿತ್ರ ಬಿಡಿಸುವವರು, ಬಿದಿರಿನ ವಸ್ತುಗಳನ್ನು ತಯಾರಿಸುವವರು ಹೀಗೆ 144 ಬಗೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಈ ಯೋಜನೆ ವರದಾನವಾಗಲಿದೆ ಎಂದು ಪ್ರಧಾನಿ ಮೋದಿರವರ ಜನಪರ ಯೋಜನೆಯನ್ನು ಶ್ಲಾಘಿಸಿದರು.
ಓ.ಬಿ.ಸಿ. ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್, ಸಹಪ್ರಭಾರಿ, ಜಿ.ಎಂ.ಸುರೇಶ್, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿ ಶಿವಯೋಗಿಸ್ವಾಮಿ, ಮಾಜಿ ಶಾಸಕರುಗಳಾದ ಪಿ.ರಮೇಶ್, ಆರ್.ರಾಮಯ್ಯ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿದ್ದೇಶ್‍ಯಾದವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ರತ್ನಮ್ಮ, ದಗ್ಗೆಶಿವಪ್ರಕಾಶ್, ನಾಗರಾಜ್‍ಬೇದ್ರೆ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.