ಬ್ಯಾಡಗಿ:
ಆಡಳಿತ ಮಂಡಳಿಯ ಜೊತೆ ಸಿಬ್ಬಂದಿಗಳ ಪಾರದರ್ಶಕ ಮತ್ತು ಪ್ರಾಮಾಣಿಕ ಕಾರ್ಯವೈಖರಿಯಿಂದ ಮಾತ್ರ ಬ್ಯಾಂಕ್ ಆರ್ಥಿಕ ಪ್ರಗತಿ ಕಾಣಲು ಸಾಧ್ಯ, ಸಿಬ್ಬಂದಿಗಳ ಸೇವೆಯ ಫಲವಾಗಿ ಗಜಾನನ ಅರ್ಬನ್ ಬ್ಯಾಂಕ್ ಯಶಸ್ವಿ 100 ವಸಂತ ಪೂರೈಸಿದ್ದು, ಅವರಲ್ಲಿ ಇನ್ನಷ್ಟು ಆತ್ಮ ವಿಶ್ವಾಸ ಹೆಚ್ಚಲು ಕಾರಣವಾಗಿದೆ ಎಂದು ಅಧ್ಯಕ್ಷ ಸುರೇಶಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಶತಮಾನೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ ಗಜಾನನ ಅರ್ಬನ್ ಕೋ-ಆಪ್ ಬ್ಯಾಂಕ್ ಸಭಾ ಭವನದಲ್ಲಿ ಸಿಬ್ಬಂದಿಗಳಿಗಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಆರ್ಥಿಕ ಅಭ್ಯುದಯಕ್ಕೆ ಬ್ಯಾಂಕಿಂಗ್ ವ್ಯವಸ್ಥೆ ಅವಶ್ಯವೆಂಬುದಯ ಸಾರ್ವತ್ರಿಕ ಸತ್ಯ, ಆರ್ಥಿಕ ಸ್ವಾವಲಂಬಿಯಾಗಲು ಬ್ಯಾಂಕಿನ ಸೌಲಭ್ಯಗಳ ಸದ್ಭಳಕೆ ಮಾಡಿಕೊಳ್ಳಬೇಕಾಗುತ್ತದೆ, ರಾಷ್ಟ್ರೀಕೃತ ಬ್ಯಾಂಕ್‍ಗಳು ನಡೆಸುತ್ತಿರುವ ಪೈಪೋಟಿ ನಡುವೆ ಗಜಾನನ ಬ್ಯಾಂಕ್ 100 ವಸಂತಗಳನ್ನು ಪೂರೈಸಿದೆ ಹೀಗಾಗಿ ಸಿಬ್ಬಂದಿಗಳೇ ಬ್ಯಾಂಕಿಗೆ ಆಧಾರ ಸ್ಥಂಭವಾಗಿದ್ದಾರೆ ಎಂದರೇ ಅತಿಶಯೋಕ್ತಿಯಲ್ಲ ಎಂದರು.
ಆರ್ಥಿಕವಾಗಿ ಇನ್ನಷ್ಟು ಗಟ್ಟಿಗೊಳ್ಳುವ ವಿಶ್ವಾಸವಿದೆ:ಸಿಬ್ಬಂದಿ ಆತ್ಮ ವಿಶ್ವಾಸ ಕಳೆದುಕೊಂಡರೇ ಬ್ಯಾಂಕಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ, ಗಜಾನನ ಅರ್ಬನ್ ಬ್ಯಾಂಕ್ ಇಲ್ಲಿಯವರೆಗೂ ರೂ.50 ಕೋಟಿಗೂ ಅಧಿಕ ಸಾಲ ನೀಡಿದ್ದು, ಸಿಬ್ಬಂದಿ ಪ್ರಯತ್ನದಿಂದ ಇಂದಿಗೂ ಯಾವೊಬ್ಬ ಗ್ರಾಹಕನೂ ಖಟಬಾಕಿದಾರನಾದ ಉದಾಹರಣೆಗಳಿಲ್ಲ, ಬ್ಯಾಂಕ್‍ನ ಶ್ರೇಯೋಭಿವೃದ್ಧಿಗೆ ಆಡಳಿತ ಮಂಡಳಿ ಜೊತೆ ಸಿಬ್ಬಂದಿ ಕೈಜೋಡಿಸಿದ್ದು, ಅವರ ಪ್ರಯತ್ನದಿಂದ ನಮ್ಮ ಬ್ಯಾಂಕ್ ಆರ್ಥಿಕವಾಗಿ ಇನ್ನಷ್ಟು ಗಟ್ಟಿ ಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರಿಗೆ ನೆನಪಿನ ಕಾಣಿಕೆಗಳನ್ನು ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಿ.ಆರ್.ಪಾಟೀಲ, ನಿರ್ದೇಶಕರಾದ ಸತೀಶಗೌಡ ಪಾಟೀಲ, ಸುರೇಶ ಜೆ.ಪಾಟೀಲ, ಸಾವಿತ್ರಾ ಪಾಟೀಲ, ಗಂಗಾಂಬಿಕಾ ಪಾಟೀಲ, ಬಿ.ಡಿ,ಮಾಳೇನಹಳ್ಳಿ, ಶ್ರೀನಿವಾಸ ಬೆಟಗೇರಿ, ಮನೋಹರ ಅರ್ಕಾಚಾರಿ, ಮಂಜುನಾಥ ಗದಗಕರ, ಅಂಬಾಲಾಲ್ ಜೈನ್, ಎಫ್.ಎಂ.ಮುಳಗುಂದ, ಎಂ.ಕೆ.ವೀರನಗೌಡ್ರ, ವ್ಯವಸ್ಥಾಪಕ ರಾದ ಉಮಾ ಜಿ.ಕುಂದೂರ, ಪ್ರವೀಣ ಬಂಗೇರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.