ಎರಡು ದಿನಗಳ ಕಾಲ ಸಂವಿಧಾನದ ಆಶಯಗಳ ಚರ್ಚೆ : ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು

     ಮೀಸಲಾತಿ,ಪೌರತ್ವ ಸೇರಿದಂತೆ ಸಂವಿಧಾನದ ಹಲವು ಆಶಯಗಳಿಗೆ ದೇಶಾದ್ಯಂತ ವಿರೋಧದ ಧ್ವನಿಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಮಾರ್ಚ್ 2 ಹಾಗೂ 3 ರಂದು ವಿಧಾನಸಭೆಯಲ್ಲಿ ಸಂವಿಧಾನದ ಬಗ್ಗೆಯೇ ಚರ್ಚೆ ನಡೆಸುವ ಅಚ್ಚರಿಯ ನಿಲುವಿಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬಂದಿದ್ದಾರೆ.

     ಎರಡು ದಿನಗಳ ಕಾಲ ಸಂವಿಧಾನದ ಆಶಯಗಳ ಬಗ್ಗೆಯೇ ವಿಧಾನಮಂಡಲದಲ್ಲಿ ವಿಶೇಷ ಚರ್ಚೆ ನಡೆಸಲು ಕಾಲಾವಕಾಶ ನಿಗದಿ ಮಾಡಿರುವುದಾಗಿ ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಸ್ವತ: ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದರು.ಸಂವಿಧಾನ ಜಾರಿಗೆ ಬಂದು 70 ವರ್ಷಗಳಾದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲದ ವಿಶೇಷ ಚರ್ಚೆಯನ್ನು ನಡೆಸಲು ನಿರ್ಧರಿಸಲಾಗಿದ್ದು ಸಂವಿಧಾನದ ಆಶಯಗಳ ಕುರಿತು ಸದನ ಕೂಲಂಕುಶ ಚರ್ಚೆ ನಡೆಸಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

      ರಾಷ್ಟ್ರೀಯ ಪೌರತ್ವ ಕಾಯ್ದೆ ವಿವಾದ,ಮೀಸಲಾತಿ ವಿವಾದ ಸೇರಿದಂತೆ ಹಲವು ಅಂಶಗಳ ಬಗ್ಗೆ ಬಿಜೆಪಿಯೇ ವಿರೋಧ ವ್ಯಕ್ತಪಡಿಸುತ್ತಿದೆ.ಈ ಸಂದರ್ಭದಲ್ಲಿ ಸಂವಿಧಾನದ ಬಗ್ಗೆ ಚರ್ಚೆ ನಡೆಸುವುದು ಎಂದರೆ ಹೊಸ ವಿವಾದಕ್ಕೆ ದಾರಿಮಾಡಿಕೊಟ್ಟಂತಲ್ಲವೇ?ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಹಾಗಾಗುವುದಿಲ್ಲ ಎಂದು ಹೇಳಿದರು.

     ಸಂವಿಧಾನದ ಆಶಯಗಳೇನು?ಎಂಬ ಬಗ್ಗೆ ಕೂಲಂಕುಶ ಚರ್ಚೆ ನಡೆಯುವ ಅಗತ್ಯವಿದೆ.ಸಂವಿಧಾನದಲ್ಲಿನ ಯಾವುದೋ ಅಂಶಗಳನ್ನು ತಿದ್ದುಪಡಿ ಮಾಡಲು ಶಿಫಾರಸು ಮಾಡುವ ವೇದಿಕೆ ಇದಾಗುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ವಿಧಾನಸಭೆಯ ಸದಸ್ಯರು ಸಂವಿಧಾನದ ಆಶಯಗಳ ಕುರಿತು ಅರಿತುಕೊಂಡಿದ್ದಾರೆ.ಆದರೆ ಈ ಚರ್ಚೆಯ ಸಂದರ್ಭಕ್ಕೆ ಪೂರಕವಾಗಿ ವಿಶೇಷ ಅಧ್ಯಯನ ನಡೆಸಿ ಬರಬೇಕು.ಹಾಗೂ ಸಂವಿಧಾನದ ಆಶಯಗಳ ಬಗ್ಗೆ ಸವಿವರವಾಗಿ ಮಾತನಾಡಬೇಕು ಎಂದು ವಿವರಿಸಿದರು.

      ಸಂವಿಧಾನದ ಬಗ್ಗೆ ಚರ್ಚಿಸುವುದು ವಿವಾದಕ್ಕಾಗಿ ಅಲ್ಲ,ಆದರೆ ಸಂವಿಧಾನ ಜಾರಿಯಾಗಿ ಎಪ್ಪತ್ತು ವರ್ಷಗಳು ಕಳೆದ ಮೇಲೂ ಅದರ ಆಶಯಗಳ ಬಗ್ಗೆ ವಿವರವಾಗಿ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದರು.

     ಫೆಬ್ರವರಿ ಹದಿನೇಳರಿಂದ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದ್ದು ಅಂದು ರಾಜ್ಯಪಾಲ ವಾಜೂಭಾಯಿ ವಾಲಾ ಅವರು ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿವರಿಸಿದರು.ಫೆಬ್ರವರಿ ಹದಿನೇಳರಿಂದ ಮಾರ್ಚ್ ಮೂವತ್ತೊಂದರವರೆಗೆ ಅಧಿವೇಶನ ನಡೆಯಲಿದ್ದು ಮಾರ್ಚ್ ಐದರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು 2020-2021 ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ ಎಂದರು.

    ಈ ಬಾರಿ ವಿಧಾನಸಭೆಯಲ್ಲಿ ಆರು ವಿಧೇಯಕಗಳು ಮಂಡನೆಯಾಗಲಿವೆ ಎಂದ ಅವರು,ನಗರ ಪಾಲಿಕೆಗಳ ತಿದ್ದುಪಡಿ ಕಾಯ್ದೆ,ಲೋಕಾಯುಕ ತಿದ್ದುಪಡಿ ಕಾಯ್ದೆ,ನಾವಿನ್ಯತೆ ಪ್ರಾಧಿಕಾರ ತಿದ್ದುಪಡಿ ಕಾಯ್ದೆ ಸೇರಿದಂತೆ ಹಲವು ಪ್ರಮುಖ ತಿದ್ದುಪಡಿ ಕಾಯ್ದೆಗಳು ಮಂಡನೆಯಾಗಲಿವೆ ಎಂದು ವಿವರ ನೀಡಿದರು.

    ಅದೇ ರೀತಿ ಪರಿಶಿಷ್ಟ ಜಾತಿ,ವರ್ಗಗಳ ಉದ್ಯೋಗ ನೇಮಕಾತಿ,ಮೀಸಲಾತಿ ತಿದ್ದುಪಡಿ ಕಾಯ್ದೆಯನ್ನು ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗಿದ್ದು ಅದು ಈ ಬಾರಿ ಅಂಗೀಕೃತವಾಗಬೇಕಾಗಿದೆ ಎಂದು ಹೇಳಿದರು.ಶಾಸನ ರಚನೆ ಮಾಡುವುದೇ ವಿಧಾನಸಭೆಯ ಪರಮ ಕರ್ತವ್ಯವಾದುದರಿಂದ ಚರ್ಚೆಗಳಿಲ್ಲದೆ ಇಂದು ಅಂಗೀಕಾರವಾಗಬಾರದು.ಹೀಗಾಗಿ ಸದನದ ಸದಸ್ಯರು ಈ ತಿದ್ದುಪಡಿ ವಿಧೇಯಕಗಳ ಬಗ್ಗೆ ಕೂಲಂಕುಶ ಅಧ್ಯಯನ ನಡೆಸಿ ಬರಬೇಕು.ಚರ್ಚಿಸಬೇಕು ಎಂದು ಹೇಳಿದರು.

    ಚರ್ಚೆ ಇಲ್ಲದೆ ಶಾಸನಗಳು ಅಂಗೀಕಾರವಾಗಲು ಬಿಡುವುದಿಲ್ಲ ಎಂಬ ಸಂದೇಶ ನಿಮ್ಮಿಂದ ಸರ್ಕಾರಕ್ಕೆ ರವಾನೆಯಾಗಲಿದೆಯೇ?ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಹಾಗೆ ನೇರವಾಗಿ ಸರ್ಕಾರಕ್ಕೆ ಹೇಳಲು ಸಾಧ್ಯವಿಲ್ಲ.ಆದರೆ ಚರ್ಚೆಯೇ ಇಲ್ಲದೆ ಶಾಸನಗಳಿಗೆ ಒಪ್ಪಿಗೆ ದೊರೆಯುವುದು ಸರಿಯಲ್ಲ ಎಂದರು.

    ನಾನು ನನ್ನ ಮಾತನ್ನು ಸ್ಪಷ್ಟವಾಗಿ ಹೇಳಿದ್ದೇನೆ.ಶಾಸನ ರಚಿಸುವುದೇ ಶಾಸನ ಸಭೆಯ ಕರ್ತವ್ಯವಾಗಿರುವುದರಿಂದ ಅದು ಆ ಕುರಿತು ವಿವರವಾಗಿ ಚರ್ಚಿಸಬೇಕು ಎಂದು ಅವರು ನುಡಿದರು.ವಿಧಾನಮಂಡಲ ಅಧಿವೇಶನ ಈ ಬಾರಿ ಇಪ್ಪತ್ತೈದು ದಿನಗಳ ಕಾಲ ನಡೆಯಲಿದೆ.ಹೀಗಾಗಿ ಸದಸ್ಯರು ಈ ಅವಕಾಶವನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಅವರು ಕೋರಿದರು.

 

Recent Articles

spot_img

Related Stories

Share via
Copy link
Powered by Social Snap