ನಗರದಲ್ಲಿ ಪಾಲಿಕೆಯ 242 ಬೋರ್ ಗಳು ಸ್ಥಗಿತ

ತುಮಕೂರು

      ತುಮಕೂರು ನಗರದಲ್ಲಿ ತುಮಕೂರು ಮಹಾನಗರ ಪಾಲಿಕೆ ಸುಪರ್ದಿನಲ್ಲಿರುವ 242 ಕೊಳವೆ ಬಾವಿಗಳು ಈ ಬೇಸಿಗೆ ಕಾಲದಲ್ಲಿ ಅಂತರ್ಜಲದ ಅಭಾವದಿಂದ ಬತ್ತಿಹೋಗಿವೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

     ನಗರದಲ್ಲಿರುವ ಜಲಮೂಲಗಳಾದ ಕೆರೆ-ಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಇದರಿಂದ ಸಹಜವಾಗಿಯೇ ಅಂತರ್ಜಲದ ಮಟ್ಟ ಇಳಿಮುಖವಾಗುತ್ತಿದೆ. ಅದರ ದುಷ್ಪರಿಣಾಮವೆಂಬಂತೆ ಕೊಳವೆ ಬಾವಿಗಳು ನೀರಿಲ್ಲದೆ ಸ್ಥಗಿತವಾಗುವಂತಹ ಪರಿಸ್ಥಿತಿ ತಲೆಯೆತ್ತುತ್ತಿದೆ. ಈ ವರ್ಷದ ಜನವರಿಯಿಂದ ಈವರೆಗಿನ ಆರು ತಿಂಗಳ ಅವಧಿಯಲ್ಲಿ 242 ಕೊಳವೆ ಬಾವಿಗಳು ನೀರಿಲ್ಲದೆ ಖಾಲಿ ಆಗಿವೆಯೆಂಬುದು ಆತಂಕಕ್ಕೆಡೆ ಮಾಡುತ್ತಿದೆ.

      ನಗರದಲ್ಲಿ ತುಮಕೂರು ಮಹಾನಗರ ಪಾಲಿಕೆಗೆ ಸೇರಿರುವ ಒಟ್ಟು 680 ಕೊಳವೆ ಬಾವಿಗಳಿವೆ. ಇವುಗಳಿಂದ ನಗರದ ವಿವಿಧ ಭಾಗಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಆದರೆ ಪ್ರಸ್ತುತ ಈ ಪೈಕಿ 242 ಕೊಳವೆ ಬಾವಿಗಳು ಅಂತರ್ಜಲದ ಅಭಾವದಿಂದ ಬತ್ತಿಹೋಗಿವೆ. ಈಗ ಕೇವಲ 438 ಕೊಳವೆ ಬಾವಿಗಳು ಮಾತ್ರ ಕಾರ್ಯಾಚರಣೆಯಲ್ಲಿವೆ. ಇವುಗಳಿಂದ ಲಭಿಸುತ್ತಿರುವ ನೀರನ್ನು ನಗರದ ನಾಗರಿಕರಿಗೆ ಹೇಮಾವತಿ ಮತ್ತು ಮೈದಾಳ ಕೆರೆ ನೀರಿಗೆ ಪರ್ಯಾಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪಾಲಿಕೆಯ ಅಂಕಿಅಂಶಗಳು ಹೇಳುತ್ತಿವೆ.

ಹೇಮಾವತಿ ನೀರು : ಜುಲೈ ಕೊನೆವರೆಗೆ ಮಾತ್ರ

      ತುಮಕೂರು ನಗರಕ್ಕೆ ಹೇಮಾವತಿ ನೀರೇ ಏಕೈಕ ಹಾಗೂ ಪ್ರಮುಖ ಕುಡಿಯುವ ನೀರಿನ ಆಸರೆಯಾಗಿದೆ. ತುಮಕೂರು ತಾಲ್ಲೂಕು ಬುಗುಡನಹಳ್ಳಿಯಲ್ಲಿರುವ “ಹೇಮಾವತಿ ಜಲಸಂಗ್ರಹಾಗಾರ”ದಲ್ಲಿ ಹೇಮಾವತಿ ನೀರಿನ ಪ್ರಮಾಣ ಈಗ ಅತ್ಯಲ್ಪವಾಗಿದೆ. ಅಲ್ಲಿ ಕೇವಲ 30 ಎಂ.ಸಿ.ಟಿ.ಯಷ್ಟು ಮಾತ್ರ ನೀರು ಲಭ್ಯವಿದೆ. ಇದನ್ನು ಈಗಿನಂತೆಯೇ ಬಳಕೆ ಮಾಡಿದರೆ ಜುಲೈ ತಿಂಗಳಿನ ಕೊನೆಯವರೆಗೆ ಈ ನೀರನ್ನು ಬಳಸಬಹುದಾಗಿದೆ.

       ಬುಗುಡನಹಳ್ಳಿ ಜಲಸಂಗ್ರಹಾಗಾರದಿಂದ ತುಮಕೂರು ನಗರಕ್ಕೆ ಪ್ರತಿನಿತ್ಯ 25 ಎಂ.ಎಲ್.ಡಿ.ಯಷ್ಟು ನೀರನ್ನು ಸರಬರಾಜು ಮಾಡಿಕೊಳ್ಳಲಾಗುತ್ತಿದೆ. ವಾಸ್ತವವಾಗಿ ತುಮಕೂರು ನಗರಕ್ಕೆ ಪ್ರತಿನಿತ್ಯ 57 ಎಂ.ಎಲ್.ಡಿ.ಯಷ್ಟು ನೀರಿನ ಅಗತ್ಯತೆ ಹಾಗೂ ಬೇಡಿಕೆ ಇದೆ. ಆದರೆ ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಬೇಡಿಕೆಯಷ್ಟು ನೀರನ್ನು ಅಲ್ಲಿಂದ ಬಿಡುಗಡೆ ಮಾಡುತ್ತಿಲ್ಲ.

     ಲಭ್ಯವಿರುವ ನೀರನ್ನು ಗರಿಷ್ಟ ದಿನಗಳ ಕಾಲ ಅಲ್ಪಸ್ವಲ್ಪ ಪ್ರಮಾಣದಲ್ಲಾದರೂ ಬಳಸಿಕೊಳ್ಳ ಬಹುದೆಂಬ ಮುಂದಾಲೋಚನೆಯಿಂದ ತುಮಕೂರು ಮಹಾನಗರ ಪಾಲಿಕೆಯು ಜಲಸಂಗ್ರಹಾಗಾರದ ನೀರನ್ನು ಲೆಕ್ಕಾಚಾರದಿಂದಲೇ ಬಳಸಿಕೊಳ್ಳುತ್ತಿದೆ. ಹೇಮಾವತಿ ನೀರು ಪ್ರಸ್ತುತ ನಾಲ್ಕೆ`ದು ದಿನಗಳಿಗೊಮ್ಮೆ ನಗರದಲ್ಲಿ ವಿವಿಧ ವಾರ್ಡ್‍ಗಳಿಗೆ ಸರಬರಾಜಾಗುತ್ತಿದೆ.

      ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ದಿನೇ ದಿನೇ ನೀರು ಬರಿದಾಗುತ್ತಿದೆ. ತಳ ಮುಟ್ಟಿರುವ ನೀರನ್ನು ಸಣ್ಣ ಕಾಲುವೆ ಮೂಲಕ ಪಂಪ್‍ಹೌಸ್‍ವರೆಗೂ ಹರಿಯುವಂತೆ ಮಾಡಿ, ಅಲ್ಲಿಂದ ಪಂಪ್ ಮಾಡುವಂತಹ ಸನ್ನಿವೇಶವಿದೆ.

ಗೊರೂರು ಜಲಾಶಯ ಖಾಲಿ

      ಹಾಸನ ಜಿಲ್ಲೆ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ತುಮಕೂರಿಗೆ ಹೇಮಾವತಿ ನೀರು ನಾಲೆಯ ಮೂಲಕ ಹರಿದುಬರಬೇಕು. ಕಳೆದ ವರ್ಷ ಅಂದರೆ 2018 ರಲ್ಲಿ ಜುಲೈ 14 ರ ಹೊತ್ತಿಗೆಲ್ಲ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹೇಮಾವತಿ ನೀರು ಹರಿದು ಬಂದಿತ್ತು. ಜೂನ್ ಮಾಹೆಯಲ್ಲೇ ಹೇಮಾವತಿ ಜಲಾಶಯದಲ್ಲಿ ಅರ್ಧದಷ್ಟು ನೀರು ಸಂಗ್ರಹವಾಗಿತ್ತು. ಆದ ಕಾರಣ ನೀರನ್ನು ಆಗ ಸಕಾಲಕ್ಕೆ ಬಿಡುಗಡೆ ಮಾಡಲಾಗಿತ್ತು.

     ಆದರೆ ಈ ವರ್ಷ ಅಂದರೆ 2019 ರಲ್ಲಿ ಗೊರೂರು ಜಲಾಶಯದ ಪರಿಸ್ಥಿತಿ ನಿರಾಶಾದಾಯಕವಾಗಿದೆ. ಜೂನ್ ಮಾಸಾಂತ್ಯವಾಗುತ್ತಿದ್ದರೂ ಇನ್ನೂ ಗೊರೂರು ಜಲಾಶಯಕ್ಕೆ ಮಳೆ ನೀರು ಹರಿದುಬಂದಿಲ್ಲ. ಹೀಗಾಗಿ ಮೊದಲಿಗೆ ಈ ವರ್ಷ ಜಲಾಶಯಕ್ಕೆ ನೀರು ಬಂದು, ಅಲ್ಲಿಂದ ಯಾವಾಗ ನೀರನ್ನು ನಾಲೆಗೆ ಬಿಡುತ್ತಾರೆಂಬುದು ಸದ್ಯಕ್ಕಂತೂ ಅನಿಶ್ಚಿತವಾಗಿದೆ. ಈ ಅನಿಶ್ಚಿತ ಪರಿಸ್ಥಿತಿಯು ತುಮಕೂರು ನಗರದ ಪಾಲಿಗೆ ಆತಂಕಕಾರಿಯಾಗಿದೆ. ಏಕೆಂದರೆ “ಬುಗುಡನಹಳ್ಳಿಯ ಜಲಸಂಗ್ರಹಾಗಾರ ಸಂಪೂರ್ಣವಾಗಿ ಬರಿದಾದರೆ ಮುಂದೇನು?” ಎಂಬ ಆತಂಕದ ಪ್ರಶ್ನೆ ನಿಧಾನವಾಗಿ ತಲೆಯೆತ್ತತೊಡಗಿದೆ.

ಮೈದಾಳ ಕೆರೆ ನೀರು

     ಈ ಮಧ್ಯ ತುಮಕೂರು ತಾಲ್ಲೂಕು ಮೈದಾಳ ಗ್ರಾಮದಲ್ಲಿರುವ ಕೆರೆಯ ನೀರನ್ನು ಸಹ ತುಮಕೂರು ನಗರದ ವಿವಿಧ ಬಡಾವಣೆಗಳಿಗೆ ಪೂರೈಸಲಾಗುತ್ತಿದೆ. ಮೈದಾಳ ಕೆರೆಯಲ್ಲಿ ನೀರಿನ ಲಭ್ಯತೆ ಇದ್ದು, ಪ್ರತಿನಿತ್ಯ ಅಲ್ಲಿಂದ 6 ಎಂ.ಎಲ್.ಡಿ.ಯಷ್ಟು ನೀರನ್ನು ತುಮಕೂರು ನಗರದ ವಿದ್ಯಾನಗರ ವಾಟರ್‍ವಕ್ರ್ಸ್‍ಗೆ ಸರಬರಾಜು ಮಾಡಿಕೊಳ್ಳಲಾಗುತ್ತಿದೆ. ಅದನ್ನು ಶುದ್ಧೀಕರಿಸಿ ಬಳಿಕ ನಗರದ 21, 22, 23, 25, 26, 27, 34 ಮತ್ತು 35 ನೇ ವಾರ್ಡ್‍ಗಳ ವಿವಿಧ ಪ್ರದೇಶಗಳಿಗೆ ಪೂರೈಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap