ಹುಳಿಯಾರು
ಹೋಬಳಿ ವ್ಯಾಪ್ತಿಯ ಗಾಣಧಾಳು ಸಮೀಪದ ಸೋಮನಹಳ್ಳಿಯಲ್ಲಿ ಎಸ್.ಸಿ.ನಾಗರತ್ನ ಅವರಿಗೆ ಸೇರಿದ ಬಾಳೆ ತೋಟಕ್ಕೆ ಬೆಂಕಿ ತಗುಲಿ ಸುಮಾರು 5 ಸಾವಿರ ವಿವಿಧ ಜಾತಿಯ ಗಿಡಗಳು ಸುಟ್ಟು ಭಸ್ಮವಾಗಿವೆ.ನಾಗರತ್ನ ಬೆಂಗಳೂರು ವಾಸಿಯಾಗಿದ್ದು, ಗಾಣಧಾಳು ಬಳಿ ಜಮೀನು ಕೊಂಡು ಕೃಷಿ ಮಾಡುತ್ತಿದ್ದರು. ಸುಮಾರು 15 ಎಕರೆ ಜಮೀನಿನಲ್ಲಿ ಮಾವು, ನಿಂಬೆ, ಹೆಬ್ಬೇವು, ಬಾಳೆ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ಬೆಳೆದಿದ್ದರು. ಮಾವು, ನಿಂಬೆ 10 ವರ್ಷದ ಗಿಡಗಳು, ಹೆಬ್ಬೇವು 2 ವರ್ಷದ ಗಿಡಳಾಗಿವೆ. ಬಾಳೆ ಗೊನೆ ಹೊಡೆದು ಕೆಲ ಬಾರಿ ಮಾರಾಟ ಸಹ ಮಾಡಿದ್ದರು.
ಬೆಂಕಿಯ ಕೆನ್ನಾಲಿಗೆಗೆ ಫಸಲು ಭರಿತ 3200 ಬಾಳೆಗಿಡಗಳು, 100 ಮಾವು, 100 ನಿಂಬೆ, 100 ಹೆಬ್ಬೇವು ಸೇರಿದಂತೆ ವಿವಿಧ ಜಾತಿಯ ಗಿಡಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.ತೋಟದ ಮಧ್ಯೆ ಇಟ್ಟಿದ್ದ ವಿದ್ಯುತ್ ಪರಿವರ್ತಕ ಶಾರ್ಟ್ ಸರ್ಕಿಟ್‍ನಿಂದ ಬೆಂಕಿ ತಗುಲಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
