ಬೆಂಗಳೂರು
ಪ್ರಸಕ್ತ ವರ್ಷ ಗಣಿಗಾರಿಕೆಯಿಂದ 3,500 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಇಲಾಖೆ ಸದ್ಯ ಗಣಿಗಾರಿಕೆಯಿಂದ 3,000 ಕೋಟಿ ರೂ. ರಾಜಸ್ವ ಸಂಗ್ರಹವಾಗುತ್ತಿದೆ. ಗಣಿ ಇಲಾಖೆಯಲ್ಲಿ ಸುಧಾರಣೆಗಳನ್ನು ತರಲು ಮತ್ತು ತೆರಿಗೆ ಕಟ್ಟದೆ ತಪ್ಪಿಸಿಕೊಳ್ಳುತ್ತಿರುವುದನ್ನು ತಡೆಯಲು ನಿರಂತರವಾಗಿ ಇಲಾಖೆ ಕಾರ್ಯದರ್ಶಿಗಳು, ನಿರ್ದೇಶಕರ ಸಭೆಗಳನ್ನು ನಡೆಸಲಾಗುತ್ತಿದೆ. ಸಭೆಗಳಲ್ಲಿ ನೀಡಲಾದ ಸಲಹೆಗಳ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕರಾವಳಿಯಲ್ಲಿ ಮರಳು ಗಣಿಗಾರಿಕೆಗೆ ಪ್ರತ್ಯೇಕ ನೀತಿ ರೂಪಿಸಲಾಗಿದೆ. ಈ ಕುರಿತಂತೆ ಅಲ್ಲಿನ ಜನರ ಜೊತೆ ಸಭೆಗಳನ್ನು ನಡೆಸಲಾಗಿದೆ. ಜನಪ್ರತಿನಿಧಿಗಳು ಗುಜರಾತ್ ಹೋಗಿ ಅಲ್ಲಿನ ನೀತಿಯನ್ನು ಪರಿಶೀಲಿಸಿದ್ದಾರೆ. ತಿಂಗಳಾತ್ಯದಲ್ಲಿ ಈ ಸಮಸ್ಯೆಗೆ ಬಗೆಹರಿಸುವ ನಿರೀಕ್ಷೆ ಇದೆ. ತಮಿಳುನಾಡಿನಿಂದ ಅಕ್ರಮವಾಗಿ ರಾಜ್ಯಕ್ಕೆ ಲಾರಿಗಳ ಮೂಲಕ ಗ್ರಾನೈಟ್ ಸಾಗಾಣಿಕೆ ಮಾಡುತ್ತಿದ್ದ 800 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾವ ನೂನ್ಯತೆಗಳಿವೆ ಎಂದು ಹೇಳದೆಯೇ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಶಾಂತಿಗೆ ಹೆಸರಾದ ಕರ್ನಾಟಕದ ಜನರು ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕು. ಗಲಭೆಗಳಿಗೆ ಅವಕಾಶ ನೀಡಬಾರದು. ಪ್ರತಿಪಕ್ಷಗಳ ಪ್ರಚೋದನಾತ್ಮಕ ಹೇಳಿಕೆಗಳಿಂದ ಶಾಂತಿಗೆ ಭಂಗವಾಗುತ್ತಿದೆ ಎಂದು ಅವರು ಆರೋಪಿಸಿದರು.
ಮಹದಾಯಿ ಕುರಿತಂತೆ ರಾಜ್ಯಕ್ಕೆ ಶೀಘ್ರದಲ್ಲೇ ಸಿಹಿಸುದ್ದಿ ದೊರೆಯಲಿದೆ ಎಂದು ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಮಹದಾಯಿ ಕುರಿತಂತೆ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಯೋಜನೆಗೆ 150 ಕೋಟಿ ರೂ. ಮೀಸಲಿರಿಸಿದ್ದರು ಎಂದು ಸಿ.ಸಿ.ಪಾಟೀಲ್ ತಿಳಿಸಿದರು.