ಕೆರೆಗಳನ್ನು ತುಂಬಿಸಲು ಕ್ರಮ : ಸಂಸದ

0
6

ಹೊನ್ನಾಳಿ:

     ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಂಸದ ಜಿ.ಎಂ. ಸಿದ್ಧೇಶ್ವರ್ ಭರವಸೆ ನೀಡಿದರು.

     ಇಲ್ಲಿನ ಹಿರೇಕಲ್ಮಠದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

      ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಇದರಿಂದ ಕೊಳವೆ ಬಾವಿಗಳು ಮರುಪೂರಣಗೊಳ್ಳುತ್ತವೆ. ಆದ್ದರಿಂದ, ಶೀಘ್ರದಲ್ಲಿಯೇ ಕೆರೆಗಳನ್ನು ತುಂಬಿಸಲು ಕ್ರಮ ಜರುಗಿಸುವುದಾಗಿ ತಿಳಿಸಿದರು.

      ಕರ್ನಾಟಕದಲ್ಲಿ ಕೆಲವು ಕಡೆ ಅತಿವೃಷ್ಟಿ, ಇನ್ನು ಕೆಲವು ಕಡೆ ಅನಾವೃಷ್ಟಿಯಾಗಿ ರೈತನ ಬದುಕು ಸಂಕಷ್ಟದಲ್ಲಿದೆ. ದಾವಣಗೆರೆ ಜಿಲ್ಲಾದ್ಯಂತ ಬರದ ಛಾಯೆ ಆವರಿಸಿದೆ. ಹಾಗಾಗಿ, ತಕ್ಷಣ ರಾಜ್ಯ ಸರಕಾರ ದಾವಣಗೆರೆ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ ವ್ಯಾಪಕ ಪರಿಹಾರ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

      ಇದೇ ತಿಂಗಳು 12ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕಂದಾಯ-ಕೃಷಿ ಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲೆಯ ಮಳೆ, ಬೆಳೆ ಬಗ್ಗೆ ವಿವರಿಸಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಗೊಳಿಸಿ ಸರಕಾರದಿಂದ ಖರೀದಿಸಲು ತಕ್ಷಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

       ಹಿರೇಕಲ್ಮಠದಲ್ಲಿ ಪ್ರತಿ ವರ್ಷ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಧಾರ್ಮಿಕ, ಸಾಂಸ್ಕತಿಕ, ಸಾಮಾಜಿಕ ಕಳಕಳಿಯನ್ನು ಬಿತ್ತಲು ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.

    “ಹಿರೇಕಲ್ಮಠದ ವೈಭವ” ಸಿಡಿ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಎಂ.ಪಿ. ರೇಣುಕಾಚಾರ್ಯ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ದೇವಿ ಕಾಲ ಕಾಲಕ್ಕೆ ಮಳೆ ಬೆಳೆ ಕೊಟ್ಟು ರೈತರನ್ನು ಕಾಪಾಡಲಿ ಎಂದು ಬೇಡಿಕೊಂಡರು.

      ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ತಾವು ಕೈ ಹಾಕಿದ್ದು, ಮುಂದಿನ ದಿನಗಳಲ್ಲಿ ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

      ಭಾರತದಲ್ಲಿ ವರ್ಷವಿಡೀ ಧಾರ್ಮಿಕ, ಸಾಂಸ್ಕತಿಕ, ಸಾಮಾಜಿಕ ಕಾರ್ಯಕ್ರಮಗಳು ಏಕೆ ನಡೆಯುತ್ತವೆ ಎಂದು ಕೆಲವರು ಪ್ರಶ್ನಿಸುತ್ತಾರೆ. ಮನುಷ್ಯರು ದಾರಿ ತಪ್ಪಿ ನಡೆಯಬಾರದು ಎನ್ನುವುದು ಇದಕ್ಕೆ ಉತ್ತರವಾಗುತ್ತದೆ ಎಂದ ಅವರು, ದೇಶದ ಎಲ್ಲಾ ಆಚರಣೆಗಳಿಗೂ ಸಮರ್ಪಕವಾದ ವೈಜ್ಞಾನಿಕ ಕಾರಣವಿದೆ ಎಂದು ಹೇಳಿದರು

    ಹೊಟ್ಯಾಪುರ ಹಿರೇಮಠದ ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

    ಎಸ್‍ಜೆವಿಪಿ ಕಾಲೇಜು ಪ್ರಾಂಶುಪಾಲ ಡಾ.ಎಚ್. ಜಯಪ್ಪ ಉಪನ್ಯಾಸ ನೀಡಿದರು. ನಿವೃತ್ತ ಮುಖ್ಯ ಶಿಕ್ಷಕ ಜಿ.ಎಂ. ಹಿರೇಮಠ್ ಶ್ರೀದೇವಿ ಪುರಾಣ ಪ್ರವಚನ ನಡೆಸಿಕೊಟ್ಟರು.ಪಟ್ಟಣದ ಗಣ್ಯರಾದ ಕೆ.ಜಿ. ವೀರಭದ್ರಪ್ಪ, ಎಚ್.ಎಂ. ಗಂಗಾಧರಯಯ್ಯ, ಎಚ್.ಎ. ಉಮಾಪತಿ, ಎಚ್.ಬಿ. ಶಿವಯೋಗಿ ಅವರಿಗೆ ಗುರುರಕ್ಷೆ ನೀಡಲಾಯಿತು.

     ಚನ್ನಪ್ಪ ಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರುಮಠ, ನಿರ್ದೇಶಕ ಕೋರಿ ಮಲ್ಲಿಕಾರ್ಜುನಪ್ಪ, ನಿವೃತ್ತ ಮುಖ್ಯ ಶಿಕ್ಷಕ ಎಂಪಿಎಂ ವಿಜಯಾನಂದಸ್ವಾಮಿ ಇತರರು ಉಪಸ್ಥಿತರಿದ್ದರು. ಎಸ್‍ಜೆವಿಪಿ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನಡಸಿಕೊಟ್ಟರು. ಚನ್ನಗಿರಿ ತಾಲೂಕು ಕಂಚುಗಾರನಹಳ್ಳಿ ಸರಕಾರಿ ಪ್ರೌಢಶಾಲೆಯ ಕಲಾ ಶಿಕ್ಷಕ ಅಶೋಕ್ ಕ್ಯಾತಣ್ಣನವರ್ ರಚಿಸಿದ ಚುಕ್ಕಿ ಚಿತ್ರಗಳ ಕಲಾ ಪ್ರದರ್ಶನ ಜನ-ಮನ ಸೂರೆಗೊಂಡಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here