ಬೆಂಗಳೂರು
ಬ್ರಿಟಿಷರ ಬಂದೂಕಿಗೆ ಅಹಿಂಸೆ, ಸತ್ಯ ಎನ್ನುವ ಅಸ್ತ್ರಗಳನ್ನು ಬಳಸಿ, ಬ್ರಿಟಿಷರನ್ನು ಭಾರತದಿಂದ ಓಡಿಸಿ, ಗಾಂಧೀಜಿ ಯಶಸ್ವಿಯಾಗಿದ್ದರು. ಅಹಿಂಸೆ ಮತ್ತು ಸತ್ಯದ ಅಸ್ತ್ರಗಳನ್ನು ಬಳಸಲು ಗಾಂಧೀಜಿ ಅವರ ಮನಸ್ಸು ಬಹಳ ಶಕ್ತಿಯುತವಾಗಿತ್ತು ಎಂದು ರಾಜ್ಯಪಾಲ ವಜುಬಾಯಿ ವಾಲಾ ಅವರು ಹೇಳಿದರು.
ನಗರದ ಪಿಇಎಸ್ ವಿಶ್ವವಿದ್ಯಾನಿಲಯ ಆವರಣದಲ್ಲಿ ಬುಧವಾರ ಮಹಾತ್ಮ ಗಾಂಧೀಜಿ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿ ತನ್ನ ಏಳಿಗೆಗಾಗಿ ದುಡಿಯುವವನು ಮನುಷ್ಯನಾಗುತ್ತಾನೆ, ಅನ್ಯರ ಅಭಿವೃದ್ಧಿಗೆ ದುಡಿಯುವವನು ಮಾನವ ಶ್ರೇಷ್ಠನಾಗುತ್ತಾನೆ” ಅಂತಹ ಸಾಲಿನಲ್ಲಿದ್ದವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂದು ಬಣ್ಣಿಸಿದರು.
ಅನ್ಯಾಯದ ವಿರುದ್ಧ ಹೋರಾಡುವುದು ನಿಜವಾದ ಪುರುಷ ಧರ್ಮ. ಶಕ್ತಿಯುತವಾದ ಮನಸ್ಸುಳ್ಳವರು ಅನ್ಯಾಯಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿರುತ್ತಾರೆ. ಅಂತಹ ದೃಢವಾದ ಹಾಗೂ ಶಕ್ತಿಯುತವಾದ ಮನಸ್ಸು ಗಾಂಧೀಜಿಯವರಿಗಿತ್ತು ಎಂದರು.ಚಿಕ್ಕವಯಸ್ಸಿನಲ್ಲಿಯೇ ವಿವಾಹವಾದ ಗಾಂಧೀಜಿ ಅವರು, ಲಂಡನ್‌ನಲ್ಲಿ ಬ್ಯಾರಿಸ್ಟರ್ (ಕಾನೂನು) ಪದವಿ ಪಡೆದ ಕೆಲವೇ ಭಾರತೀಯರಲ್ಲಿ ಒಬ್ಬರಾಗಿದ್ದರು.
ಅವರು ತಮ್ಮ ಬ್ಯಾರಿಸ್ಟರ್ ಪದವಿಯನ್ನು ಹಣ ಗಳಿಸಲು ಬಳಸಿಕೊಳ್ಳದೆ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಬಳಸಿದರು ಹಾಗೂ ದೇಶದ ಆಂತರಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲೂ ಮತ್ತು ದೇಶದಲ್ಲಿದ್ದ ಅಸಮಾನತೆ ನಿವಾರಣೆ ಮಾಡುವಲ್ಲೂ ಹೆಚ್ಚು ಶ್ರಮಿಸಿದ ಏಕೈಕ ವ್ಯಕ್ತಿ ಎಂದರೆ, ಮಹಾತ್ಮ ಗಾಂಧೀಜಿ ಎಂದು ತಿಳಿಸಿದರು.ಮಗುವಿಗೆ ಚಿಕ್ಕವಯಸ್ಸಿನಿಂದಲೇ ಸಂಸ್ಕಾರ ಕಲಿಸುವ ಅಗತ್ಯವಿದೆ. ಅಂತಹ ಸಂಸ್ಕಾರವನ್ನು ಗಾಂಧೀಜಿ ಅವರ ತಾಯಿ ಪುತಲೀಬಾಯಿ ಅವರಿಗೆ ನೀಡಿದ್ದರು.
ಮಾಂಸಹಾರ, ಮದ್ಯ ಸೇವನೆ ವರ್ಧಿಸುವುದು ಹಾಗೂ ಬ್ರಹ್ಮಚಾರಿತ್ವ ಕಾಪಾಡಿಕೊಳ್ಳಲು ಮಗನಿಗೆ ಸಲಹೆ ನೀಡಿದ್ದರು ಹಾಗೂ ಇದರಿಂದ ಏನನ್ನಾದರೂ ಸಾಧಿಸಬಹುದಾದಂತಹ ಮನಃಸ್ಥಿತಿಯನ್ನು ಪಡೆದುಕೊಳ್ಳಬಹುದೆಂದು ಗಾಂಧೀಜಿ ಅವರಿಗೆ ಕಲಿಸಿಕೊಟ್ಟಿದ್ದರು ಸರ್ದಾರ್ ವಲ್ಲಭ ಬಾಯಿ ಪಟೇಲ್, ಗಾಂಧೀಜಿಯಂತಹ ಮಹಾಚೇತನಗಳು ಭಾರತದ ಮಣ್ಣಿನಲ್ಲಿ ಜನಿಸಿದ್ದು, ನಮ್ಮ ಪುಣ್ಯ ಎಂದರು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ ನೆರೆಪೀಡಿತ ಪ್ರದೇಶಗಳಲ್ಲಿನ ಹತ್ತು ಶಾಲೆಗಳನ್ನು ಪಿಇಎಸ್ ವಿವಿ ದತ್ತು ಪಡೆದುಕೊಳ್ಳುವ ಮೂಲಕ ಪುನಶ್ಚೇತನಕ್ಕೆ ಮುಂದಾಗಿದೆ. ಪಿಇಎಸ್ ವಿವಿ ಆವರಣದಲ್ಲಿ ಗಾಂಧಿ ಪುತ್ಥಳಿ ಅನಾವರಣಗೊಳಿಸುವ ಮೂಲಕ ವಿದ್ಯಾರ್ಥಿಗಳು ಪ್ರತಿದಿನ ಗಾಂಧೀಜಿ ಅವರ ವಿಚಾರಧಾರೆಗಳನ್ನು ಸ್ಮರಿಸಲು ಸಹಕಾರಿಯಾಗಿದೆ. ಶಿಕ್ಷಣದ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡುತ್ತಿರುವ ಪಿಇಎಸ್ ವಿವಿಗೆ ಧನ್ಯವಾದಗಳು ಎಂದು ಹೇಳಿದರು.ವೇದಿಕೆಯಲ್ಲಿ ಪಿಇಎಸ್ ವಿವಿಯ ಕುಲಾಧಿಪತಿ ಡಾ. ಎಂ.ಆರ್. ದೊರೆಸ್ವಾಮಿ, ಸಮಕುಲಾಧಿಪತಿ ಪ್ರೊ.ಡಿ. ಜವಹರ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








