ಹೊನ್ನಾಳಿ:
ವ್ಯಾಸ ಮಹರ್ಷಿ ಪ್ರತಿಷ್ಠಾಪಿತ ತಾಲೂಕಿನ ಕುಂದೂರು ಶ್ರೀ ಆಂಜನೇಯ ಸ್ವಾಮಿ ಮುಳ್ಳೋತ್ಸವ ಭಾನುವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಭಾನುವಾರ ಮಧ್ಯಾಹ್ನ 3ರಿಂದ ಸಂಜೆ 6.30ರವರೆಗೆ ಶ್ರೀಸ್ವಾಮಿಯ ವಿಶಿಷ್ಟವಾದ ಮುಳ್ಳೋತ್ಸವ ನಡೆಯಿತು. ದೇವಾಲಯದ ಪಕ್ಕದ ಅಗಸೆ ಬಾಗಿಲಿಗೆ ಹೊಂದಿಕೊಂಡಂತೆ ಎತ್ತರದ ಕಾರೆ ಮುಳ್ಳಿನ ಗದ್ದುಗೆ ಸಿದ್ಧಪಡಿಸಲಾಗಿತ್ತು.
ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಆರಂಭದಲ್ಲಿ ದಾಸಪ್ಪನವರು ಮುಳ್ಳುಗದ್ದುಗೆ ಏರುವ ಮೂಲಕ ವಿದ್ಯುಕ್ತವಾಗಿ ಈ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಧಾರ್ಮಿಕ ವಿಧಿ-ವಿಧಾನದಿಂದ ದೇವರ ಪಲ್ಲಕ್ಕಿ ಏರಿದ ನಂತರ ಕಾರ್ಣಿಕ ನುಡಿಯುವ ದಾಸಪ್ಪನ ದೇವವಾಣಿ ಮೊಳಗಿತು.
ಕಾರ್ಣಿಕ ನುಡಿ ಇಂತಿದೆ:
“ಅಂಗೈ ಗಿಣಿ ಹಾರೀತು,
ಮುತ್ತಿನ ರಾಶಿ ಸುರಿದೀತು,
ಸಂಪು, ಪರಾಕ್”
ಬಡವ-ಬಲ್ಲಿದ, ಜಾತಿ-ಮತ ಭೇದವಿಲ್ಲದೆ, ಹರಕೆ ಹೊತ್ತ ಸಮಸ್ತ ಭಕ್ತಾದಿಗಳು ಸಾಮೂಹಿಕವಾಗಿ ಗದ್ದುಗೆ ಏರಿ ಮುಳ್ಳು ತುಳಿಯುವ ದೃಶ್ಯ ಭಯಾನಕವಾಗಿದ್ದರೂ ಭಕ್ತಿಯ ಪರಾಕಾಷ್ಟೆಯಿಂದ ಇವೆಲ್ಲವೂ ಗೌಣವಾಗುತ್ತವೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಮುಳ್ಳೋತ್ಸವದಲ್ಲಿ ಪಾಲ್ಗೊಂಡು ತಮ್ಮ ಹರಕೆ, ಕಾಣಿಕೆ ಸಮರ್ಪಿಸಿ ಪುನೀತರಾದರು.
ಮುಳ್ಳೋತ್ಸವದ ಮೊದಲು ಜವುಳ, ಬಾಯಿ ಬೀಗ, ಮುದ್ರಾಧಾರಣೆ ಮುಂತಾದ ಭಕ್ತರ ಹರಕೆ-ಸೇವೆಗಳು ನಡೆದವು. ಏ.1 ಮತ್ತು 2ರಂದು ಬಯಲು ಜಂಗೀ ಕುಸ್ತಿ ಪಂದ್ಯಗಳು ನಡೆಯಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
