ನವದೆಹಲಿ
ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ವಿವಾದ ಕುರಿತು ತನ್ನ ಪ್ರಕ್ರಿಯೆಯನ್ನು ಮುಂದುವರಿಸಿ ಜುಲೈ 31 ರಂದು ಹೊಸದಾಗಿ ಸ್ಥಿತಿಗತಿ ವರದಿ ಸಲ್ಲಿಸಲು ಮಧ್ಯಸ್ಥಿಕೆ ಸಮಿತಿಗೆ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್, ಆಗಸ್ಟ್ 2 ರಂದು ಭೂಮಿ ವಿವಾದ ಕುರಿತು ವಿಚಾರಣೆ ನಡೆಸುವುದಾಗಿ ಗುರುವಾರ ತಿಳಿಸಿದೆ.
ಮಧ್ಯಸ್ಥಿಕೆ ಸಮಿತಿ ಸಲ್ಲಿಸಲಿರುವ ಸ್ಥಿತಿಗತಿ ವರದಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸಾಂವಿಧಾನಿಕ ಪೀಠ ದಾಖಲೆಯನ್ನಾಗಿ ಪರಿಗಣಿಸಲಿದೆ. ಆಗಸ್ಟ್ 2 ರಂದು ವಿಚಾರಣೆ ದಿನ ಎಂದು ನಿಗದಿಪಡಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಜುಲೈ 31 ರಂದು ತಮ್ಮ ಸಂಧಾನ ಪ್ರಕ್ರಿಯೆಯ ಫಲಶೃತಿಯ ಮಾಹಿತಿ ಸಲ್ಲಿಸಲು ಮಧ್ಯಸ್ಥಿಕೆ ಮಂಡಳಿಗೆ ಕೋರಿರುವುದಾಗಿ ನ್ಯಾಯಾಲಯ ಹೇಳಿದೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಫ್ ಎಂ ಐ ಕಲೀಫುಲ್ಲಾ, ಆಧ್ಯಾತ್ಮಿಕ ನಾಯಕ ಶ್ರೀ ಶ್ರೀ ರವಿ ಶಂಕರ್ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಂಚು ಮಧ್ಯಸ್ಥಿಕೆ ಸಮಿತಿಯಲ್ಲಿದ್ದಾರೆ.
ಪ್ರಸ್ತು ತ ಸೂಚನೆಗಳ ಪ್ರಕಾರ ನ್ಯಾಯಾಲಯ ಈ ವಿಷಯದಲ್ಲಿ ಮತ್ತಷ್ಟು ಮುಂದುವರಿಯಲು ಅನುವು ಮಾಡಿಕೊಡುವಂತೆ ಮಧ್ಯಸ್ಥಿಕೆ ಮಂಡಳಿ ತನ್ನ ವರದಿಯನ್ನು 1.8.2019 ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮಧ್ಯಸ್ಥಿಕೆ ಸಮಿತಿಯನ್ನು ಕೋರುತ್ತೇವೆ ಎಂದು ನ್ಯಾಯಾಲಯ ತಿಳಿಸಿದೆ ಪ್ರಕರಣಗಳನ್ನು ಆಗಸ್ಟ್ 2 ರಿಂದ ವಿಚಾರಣೆ ನಡೆಸಿಲು ದಿನ ನಿಗದಿಪಡಿಸಿದ್ದೇವೆ. ಅಂದು ಮಧ್ಯಾಹ್ನ 2 ಗಂಟೆಗೆ ಪೀಠ ಸಮಾವೇಶಗೊಳ್ಳಲಿದೆ ಎಂದು ಹೇಳಿದೆ.
ನ್ಯಾಯಮೂರ್ತಿ ಎಸ್.ಎ, ಬೊಬ್ಡೆ, ಡಿ.ವೈ ಚಂದ್ರಚೂಡ್, ಆಶೋಕ್ ಭೂಷಣ್ ಹಾಗೂ ಎಸ್. ಅಬ್ದುಲ್ ನಜೀರ್ ಅವರನ್ನು ಸಂವಿಧಾನ ಪೀಠ ಒಳಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








