ಚಿತ್ರದುರ್ಗ:
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಗೆ ಸಾಹಿತಿ ಡಾ.ಬಿ.ಎಲ್.ವೇಣು ಬರಹದ ಮೂಲಕ ಕಸುವು ತುಂಬಿದವರು ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ಸೃಷ್ಟಿಸಾಗರ ಪ್ರಕಾಶನ, ಮದಕರಿನಾಯಕ ಸಾಂಸ್ಕತಿಕ ಕೇಂದ್ರ, ಕೋಟೆ ವಾಯುವಿಹಾರಿಗಳ ಸಂಘದಿಂದ ಐತಿಹಾಸಿಕ ಚಿತ್ರದುರ್ಗ ಕೋಟೆಯಲ್ಲಿ ಸೋಮವಾರ ಆಚರಿಸಲಾದ ಸಾಹಿತಿ ಡಾ.ಬಿ.ಎಲ್.ವೇಣುರವರ 74 ನೇ ಹುಟ್ಟುಹಬ್ಬದಲ್ಲಿ ಭಾಗವಹಿಸಿ ಮಾತನಾಡಿದರು.
ಬಿ.ಎಲ್.ವೇಣುರವರ ಬರಹದಲ್ಲಿ ಸಾಮಾಜಿಕ, ಐತಿಹಾಸಿಕ, ವೈಚಾರಿಕ, ಸಮಕಾಲೀನ ಪ್ರಜ್ಞೆಯಿದೆ. ಅವರ ಕಥೆ, ಕಾದಂಬರಿಗಳು ಅಕಾಡೆಮಿಕ್ ವಲಯದಲ್ಲಿ ಚರ್ಚೆಯಾಗುತ್ತಿದೆ. ಕನ್ನಡ ಭಾಷೆಗೆ ಸತ್ವ, ಶಕ್ತಿ, ಅರ್ಥ ತುಂಬಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಗುಣಗಾನ ಮಾಡಿದರು.
ಇವರ ಎರಡು ಕಾದಂಬರಿ ಸಿನಿಮಾ ಆಗುತ್ತಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ಡಾ.ಬಿ.ಎಲ್.ವೇಣುರವರು ಎಂದೋ ಅಧ್ಯಕ್ಷರಾಗಬೇಕಿತ್ತು ಅಷ್ಟೊಂದು ಕೃತಿಗಳನ್ನು ಬರೆದಿದ್ದಾರೆ. ಅವರ ಬರಹಕ್ಕೆ ಅಂತಹ ತಾಕತ್ತಿದೆ. ಬರಹಗಾರನಿಗೆ ಸಮಾಜ ಎಷ್ಟು ಮುಖ್ಯವೋ ಬರಹವೂ ಕೂಡ ಅಷ್ಟೆ ಮುಖ್ಯ. ಅನೇಕ ಸಮಸ್ಯೆ, ಸವಾಲು, ಸಂಕಟಗಳನ್ನು ಎದುರಿಸಿ ಇತಿಹಾಸವನ್ನು ಸವಾಲಾಗಿ ಸ್ವೀಕರಿಸಿದ್ದರಿಂದ ಕೆಲವು ಕಾದಂಬರಿಗಳು ಸಿನಿಮಾ ಆಗಿದೆ. ಓದುಗರಿಗೆ ಅದ್ಬುತವಾದ ಕುತೂಹಲ ಮೂಡಿಸಿದ್ದಾರೆಂದು ವೇಣು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಯನ್ನು ಮೆಲುಕು ಹಾಕಿದರು.
ಬಿ.ಎಲ್.ವೇಣುರವರ ಮಾತು ವೈಚಾರಿಕ ವಿವೇಕ ಬಂಡಾಯ ಪ್ರಜ್ಞೆಯಿಂದ ಕೂಡಿದೆ. ಚಿತ್ರದುರ್ಗದ ವಲಯವನ್ನು ಮೀರಿ ಬರೆಯುತ್ತಿದ್ದಾರೆ. ನಿರಂತರ ಅಧ್ಯಯನವಿರುವುದರಿಂದ ಅದ್ಬುತ ಕಲಾವಿದ ಅಭಿಜಾತ ಬರಹಗಾರನಾಗಿ ಓದುಗರ ಮನದಲ್ಲಿ ಇಂದಿಗೂ ಉಳಿದಿದ್ದಾರೆ. ಅವರು ಬರೀ ಕಥೆ ಕಾದಂಬರಿಕಾರರಲ್ಲ. ಸಂಶೋಧಕರು ಹೌದು. ಪ್ರಯೋಗಶೀಲ, ಪ್ರಯತ್ನಶೀಲ ಬರಹಗಾರರಾಗಿ ರುವುದಿಂದ ಎಂದಿಗೂ ಯಾವುದಕ್ಕೂ ಯಾರನ್ನೂ ಓಲೈಸಿದವರಲ್ಲ. 50 ರಿಂದ 60 ಕೃತಿಗಳನ್ನು ಬರೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಗಬೇಕಿತ್ತು. ಅಪರೂಪದ ಬರಹ, ಅಭಿವ್ಯಕ್ತಿ ಅವರದು. ಇನ್ನು ನೂರು ಕಾಲ ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುವ ಶಕ್ತಿ ಭಗವಂತ ಕೊಡಲಿ ಎಂದು ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದರು.
74 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಸಾಹಿತಿ ಡಾ.ಬಿ.ಎಲ್.ವೇಣು ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಟೀಕೆ ಟಪ್ಪಣಿಗಳಿಂದ ಬೆಳದವನು ನಾನು. ಯಾರು ಬೆನ್ನುತಟ್ಟಿ ಪ್ರೋತ್ಸಾಹಿಸಲಿಲ್ಲ. ಕೆಲವರು ಕಡೆಗಣಿಸಿದರು ಅದನ್ನೇ ಸವಾಲಾಗಿ ಸ್ವೀಕರಿಸಿದೆ. ಐತಿಹಾಸಿಕ ಕಾದಂಬರಿ ಬರೆಯಲು ನನಗೆ ಪ್ರೊ.ಲಕ್ಷ್ಮಣ್‍ತೆಲಗಾವಿ ಹಾಗೂ ತ.ರಾ.ಸು. ಕಾರಣ ಎಂದು ಸ್ಮರಿಸಿಕೊಂಡರು.
ಸಿನಿಮಾಕ್ಕೆ ಹೋಗಬೇಕೆಂದು ಅಂದುಕೊಂಡವನಲ್ಲ. ದಿವಂಗತರುಗಳಾದ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್ ಸೇರಿದಂತೆ ಅನೇಕ ದಿಗ್ಗಜರು ನನ್ನನ್ನು ಬೆಂಗಳೂರಿಗೆ ಕರೆಸಿಕೊಂಡು ಸಂಭಾಷಣೆಗಳನ್ನು ಬರೆಸುತ್ತಿದ್ದರು. ಕೆಲವೊಮ್ಮೆ ವಿಮಾನದಲ್ಲಿ ಮದ್ರಾಸ್‍ಗೆ ಹೋಗಿ ಅಲ್ಲಿಂದ ಬಸ್ಸಿನಲ್ಲಿ ಬಂದಿದ್ದೇನೆ. ತ.ರಾ.ಸು.ಪಾಳೆಯಗಾರರ ಬಗ್ಗೆ ಮೊದಲೇ ಬರೆಯದಿದ್ದ ಕಾರಣ ನಾನು ಐತಿಹಾಸಿಕ ಕಾದಂಬರಿಗಳನ್ನು ಬರೆಯಲು ಕಾರಣವಾಯಿತು. ನನಗೂ, ತ.ರಾ.ಸು.ವರವರಿಗೂ ಬರವಣಿಗೆ ವಿಚಾರದಲ್ಲಿ ಅನೇಕ ತಾಕಲಾಟಗಳು ಇದ್ದವು ಎಂದು ನೆನಪು ಮಾಡಿಕೊಂಡರು.
ದುರ್ಗದವರ ಪ್ರೀತಿ ಗಳಿಸುವುದು ಅಷ್ಟು ಸುಲಭವಲ್ಲ. ಈ ನೆಲದ ತಾಕತ್ತೆ ಅಂತಹುವುದು. ದುರ್ಗದ ಒಂದೊಂದು ಕಲ್ಲುಬಂಡೆಗಳು ಕಥೆ ಹೇಳುತ್ತವೆ. ಇಲ್ಲಿನ ಗಾಳಿಯಲ್ಲಿ ಧರ್ಮ ಸಾಮರಸ್ಯವಿದೆ. ಸಂಶೋಧಕರುಗಳನ್ನು ಬೆಂಗಾವಲಾಗಿಟ್ಟುಕೊಂಡು ಕಾದಂಬರಿಗಳನ್ನು ಬರೆದಿದ್ದೇನೆ. ಎಲ್ಲಿಯವರೆಗೂ ಬರೆಯುತ್ತೇನೆಯೋ ಅಲ್ಲಿಯವರೆಗೂ ಬದುಕಿರುತ್ತೇನೆ. ಬರವಣಿಗೆಯೂ ಒಂದು ತಪಸ್ಸು. ಸಾಹಿತ್ಯಕ್ಕೆ ಶಕ್ತಿಯಿದೆ.
ಪಾಳೆಯಗಾರರೆಂದರೆ ಶಕ್ತಿ ಭಕ್ತಿಗಳ ಸಂಗಮ. ಅವರಲ್ಲಿ ಶೌರ್ಯ, ಪರಾಕ್ರಮ, ಶಕ್ತಿ ಇತ್ತು. ಬಾಗಿದವರು ಬೆಳೆಯುತ್ತಾರೆ. ನಾನು ಜಾತಿಯೊಳಗಿದ್ದು, ಧರ್ಮದೊಳಗಿದ್ದುಕೊಂಡು ಅದನ್ನು ಮೀರಿ ಬರವಣಿಗೆಯಲ್ಲಿ ತೊಡಗಿದ್ದೇನೆ. ಸಿನಿಮಾ ಬರೆದೆ ಆದರೆ ಸಾಹಿತ್ಯ ಬಿಡಲಿಲ್ಲ. ಕಾದಂಬರಿ ಬರೆದ ಮೇಲೆ ಸಿನಿಮಾ ಆಯಿತು ಎಂದು ಬರವಣಿಗೆ ಮೇಲೆ ತಮಗಿರುವ ಅಭಿಮಾನವನ್ನು ವ್ಯಕ್ತಪಡಿಸಿದರು.
ಜನರ ಮತ್ತು ಓದುಗರ ಪ್ರೀತಿ ಗಳಿಸಿದ್ದೇನೆ.
ಪ್ರಶಸ್ತಿಗಳಿಗೆ ಎಂದೂ ಆಸೆಪಟ್ಟವನಲ್ಲ. ಆದರೂ ಅನೇಕ ಪ್ರಶಸ್ತಿಗಳು ಬಂದಿದೆ. ಕರುವಿನಕಟ್ಟೆಯಲ್ಲಿ ಹುಟ್ಟಿ ಬೆಳೆದಿದಕ್ಕೆ ಸಾಹಿತಿಯಾದೆ. ಓದಿಗಿಂತ ಜೀವನಾನುಭವ ಜಾಸ್ತಿಯಾಗಿದೆ. ಬಹುಪಾಲು ನನ್ನ ಬಂಡಾಯ ಸಾಹಿತ್ಯದ ಬರವಣಿಗೆ ನನ್ನ ಜೀವನದಲ್ಲಾದ ಅನುಭವ. ಜಾತಿಯಿಂದಾಗುವ ಶೋಷಣೆ, ದೌರ್ಜನ್ಯದ ವಿರುದ್ದ ಬರವಣಿಗೆಯನ್ನು ಝಳಪಿಸಿದ್ದೇನೆ. ಬರೆಯುತ್ತಾ ಹೋದೆನೆ ವಿನಃ ಯಾರಿಗೂ ಹೆದರಿಕೊಂಡು ಬರವಣಿಗೆ ನಿಲ್ಲಿಸಲಿಲ್ಲ ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ ಸಾಹಿತಿ ಡಾ.ಬಿ.ಎಲ್.ವೇಣು ಎಂದರೆ ಚಿತ್ರದುರ್ಗದಲ್ಲಿ ಮನೆ ಮಾತಾಗಿದ್ದಾರೆ. ಅವರದು ಒಳ್ಳೆಯ ಬರವಣಿಗೆ. ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅಪಾರ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಲಿ ಎಂದು ಹಾರೈಸಿದರು.
ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡುತ್ತ ಚಿತ್ರದುರ್ಗದ ಇತಿಹಾಸವನ್ನು ಬರವಣಿಗೆ ಮೂಲಕ ನಾಡಿಗೆ ಪರಿಚಯಿಸಿದ ಕೀರ್ತಿ ಸಾಹಿತಿ ಡಾ.ಬಿ.ಎಲ್.ವೇಣುಗೆ ಸಲ್ಲಬೇಕು. ಅವರ ಕಾದಂಬರಿಗಳು ನನ್ನ ಮನಸ್ಸಿಗೆ ತುಂಬಾ ಹಿಡಿಸಿದೆ. ಶತಾಯುಷಿಗಳಾಗಿ ಸಾಹಿತ್ಯ ಲೋಕಕ್ಕೆ ಇನ್ನು ಸೇವೆ ಸಲ್ಲಿಸಲಿ ಎಂದು ಶುಭಕೋರಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ ಯಾವುದೇ ಒಂದು ಸಮಾಜ ಸ್ವಸ್ಥವಾಗಿರಬೇಕಾದರೆ ಶಾಸನ ಮುಖ್ಯ. ಅದಕ್ಕೆ ಸಾಹಿತಿಗಳ ಪಾತ್ರ ದೊಡ್ಡದು. ಸಾಹಿತಿಗಳನ್ನು ಜನರು ಪ್ರೀತಿಸಿ ಗೌರವಿಸುತ್ತಾರೆ. ಅಂತಹ ಪ್ರೀತಿಗೆ ಪಾತ್ರರಾಗಿರುವವರಲ್ಲಿ ಡಾ.ಬಿ.ಎಲ್.ವೇಣು ಪ್ರಮುಖರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೇಖಕ ಆನಂದಕುಮಾರ್, ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಡಾ.ಎನ್.ಎಸ್.ಮಹಂತೇಶ್ ಡಾ.ಬಿ.ಎಲ್.ವೇಣುರವರ ಬರವಣಿಗೆ ಕುರಿತು ಮಾತನಾಡಿ ಅವರಿಂದ ಇನ್ನು ಹೆಚ್ಚು ಹೆಚ್ಚು ಐತಿಹಾಸಿಕ ಕಾದಂಬರಿಗಳು ಹೊರ ಬರಲಿ ಎಂದು ಹಾರೈಸಿದರು.
ಮದಕರಿನಾಯಕ ಸಾಂಸ್ಕತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಸೃಷ್ಟಿಸಾಗರ ಪ್ರಕಾಶನದ ಮುಖ್ಯಸ್ಥ ಹಾಗೂ ಪ್ರಜಾ ಪ್ರಗತಿ ಹಿರಿಯ ಪ್ರಧಾನ ವರದಿಗಾರ ಮೇಘ ಗಂಗಾಧರನಾಯ್ಕ, ಉಪನ್ಯಾಸಕ ಚನ್ನಬಸಪ್ಪ, ಮಂಜುನಾಥಗುಪ್ತ, ಭದ್ರಣ್ಣ, ಉಡುಸಾಲಪ್ಪ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.