ಬರಗೂರು ಸೀಲ್‍ಡೌನ್ : ನಾಡೋಜ ಬರಗೂರು ಪ್ರಶಂಸೆ

ಶಿರಾ
        ದೇಶದಲ್ಲಿ ಕೊರೋನಾ ಸೋಂಕಿನಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಈ ನಡುವೆ ಇಂತಹ ಮಹಾಮಾರಿಯನ್ನು ದೂರಗೊಳಿಸಲು ನನ್ನ ಹುಟ್ಟೂರಿನ ಗ್ರಾಮಸ್ಥರು ಸರ್ಕಾರದ ಆದೇಶಕ್ಕೂ ಕಾಯದೆ ಇಡೀ ಗ್ರಾಮವನ್ನು ಮೂರು ದಿನಗಳವರೆಗೆ ಸೀಲ್‍ಡೌನ್ ಮಾಡಿಕೊಳ್ಳುವ ಮೂಲಕ ಕೊರೋನಾ  ಎದುರಿಸಲು ಸಜ್ಜುಗೊಂಡಿದ್ದು ನಿಜಕ್ಕೂ ನನಗೆ ಹೆಮ್ಮೆ ಅನ್ನಿಸಿದೆ ಎಂದು ಸಾಹಿತಿ ಹಾಗೂ ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
   
      ಏಪ್ರಿಲ್.18 ರಿಂದ ಮೂರು ದಿನಗಳವರೆಗೆ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‍ಡೌನ್ ಇದ್ದರೂ, ಬರಗೂರಿನ ಇಡೀ ಗ್ರಾಮಸ್ಥರು ಒಟ್ಟಾಗಿ ತಾವೇ ಕೂಡಿಕೊಂಡು ಮೂರು ದಿನಗಳವರೆಗೆ ಗ್ರಾಮವನ್ನು ಸೀಲ್‍ಡೌನ್ ಮಾಡಿಕೊಂಡ ಬಗ್ಗೆ ಪ್ರಗತಿಯು ಸುದ್ದಿಯನ್ನು ಪ್ರಕಟಿಸಿತ್ತು. ಈ ಸಂಬಂಧ ಸಾಹಿತಿ ಬರಗೂರು ರಾಮಚಂದ್ರಪ್ಪ ತಮ್ಮ ಹುಟ್ಟೂರಿನ ಗ್ರಾಮಸ್ಥರು ದಿಟ್ಟತನದಿಂದ ಕೈಗೊಂಡ ನಿರ್ಧಾರವನ್ನು ಪತ್ರಿಕೆಗೆ ಬರೆದಿರುವ ಪತ್ರದ ಮೂಲಕ ಪ್ರಶಂಸಿಸಿದ್ದಾರೆ.
   
     ರಾಜ್ಯದಲ್ಲಿ ಸರ್ಕಾರವು ಬೆಂಗಳೂರಿನ ಕೆಲ ಭಾಗಗಳನ್ನು ಸೀಲ್‍ಡೌನ್ ಮಾಡಿದೆ ನಿಜ. ಆದರೆ ಮಹಾಮಾರಿ ಕೊರೋನಾ ಸೋಂಕನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದೆಂಬ ದೃಷ್ಟಿಯಿಂದ ಬರಗೂರಿನ ಗ್ರಾಮಸ್ಥರು ಸೀಲ್‍ಡೌನ್ ಮಾಡಿಕೊಂಡಿದ್ದಾರೆ. ನೆರೆಯ ಆಂಧ್ರಪ್ರದೇಶದ ಗಡಿಯಲ್ಲಿನ ಗ್ರಾಮದಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖರು ಮೂರು ದಿನಗಳ ಸ್ವಯಂ ಘೋಷಿತ ಬಂದ್‍ಗೆ ಮುಂದಾಗಿದ್ದರು. ಒಳ ಬರುವ ಹಾಗೂ ಹೊರ ಹೋಗುವ ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದರು.
   
      ಗ್ರಾಮಸ್ಥರು ಕೈಗೊಂಡ ಇಂತಹ ದಿಟ್ಟ ನಿರ್ಧಾರ ನನಗೆ ತುಂಬಾ ಮೆಚ್ಚುಗೆಯಾಯಿತು. ಪ್ರಜಾಪ್ರಗತಿ ಪತ್ರಿಕೆಯಲ್ಲಿ ಸೀಲ್‍ಡೌನ್ ಆಗಿರುವ ಸುದ್ದಿ ಓದಿದಾಕ್ಷಣ ನನ್ನೂರಿನನಲ್ಲಿ ನಾನು ಈ ಹಿಂದೆ ಓಡಾಡಿದ ಸಂದಿಗೊಂದಿಗಳೆÉಲ್ಲವೂ ನನಗೆ ನೆನಪಾದವು. ಈಗ ನನ್ನೂರು ಬೆಳೆದಿದೆ. ಬಸ್ ಸ್ಟ್ಯಾಂಡ್ ಸುತ್ತ-ಮುತ್ತ ಸಾಕಷ್ಟು ಜನಜಂಗುಳಿ ಇರುತ್ತದೆ. ಕೊರೋನಾ ಸಮಸ್ಯೆಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಅನಿವಾರ್ಯ. ಆದರೆ ಬರಗೂರಿನ ಜನರು ಲಾಕ್‍ಡೌನ್ ಬದಲು ಸೀಲ್‍ಡೌನ್ ಮಾಡಿರುವುದು ಇನ್ನೂ ವಿಶೇಷ. ಯಾವ ಮೇಲಧಿಕಾರಿಗಳ ಆದೇಶವೂ ಇಲ್ಲದೆ ತಮಗೆ ತಾವೇ ಸೀಲ್‍ಡೌನ್ ಮಾಡಿಕೊಂಡ ಜನರ ವಿವೇಕ ದೊಡ್ಡದು. 
   
     ಇಂತಹುದೊಂದು ವಿವೇಕವನ್ನು ಅಭಿವ್ಯಕ್ತಿಸಿ ಅನುಷ್ಠಾನಕ್ಕೆ ತಂದ ನನ್ನೂರಿನ ಬಗ್ಗೆ ನನಗೆ ಹೆಮ್ಮೆ ಅನ್ನಿಸುತ್ತದೆ. ಬರಗೂರಿನ ಸಮಸ್ತರನ್ನೂ ನಾನು ಅಭಿನಂದಿಸುತ್ತೇನೆ.  ತಮ್ಮ ಪ್ರಾಣ ಪ್ರೀತಿಯ ಹುಟ್ಟೂರು ಸದಾ ಆದರ್ಶದಾಯಕವೂ, ಆರೋಗ್ಯಕರವೂ ಆಗಿರಲೆಂದು ಬರಗೂರು ರಾಮಚಂದ್ರಪ್ಪ ಹಾರೈಸಿದ್ದಾರೆ.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link