ಬಸವ ತತ್ವ ಮೈಗೂಡಿಸಿಕೊಳ್ಳಿ : ಕಲ್ಗುಡಿ

ದಾವಣಗೆರೆ :

        ಜಗಜ್ಯೋತಿ ಬಸವಣ್ಣನವರನ್ನು ಪ್ರತಿಮೆಯನ್ನಾಗಿ ಕಾಣುವ ಬದಲು, ಅವರ ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ವಿಮರ್ಶಕ ಡಾ.ಬಸವರಾಜ ಕಲ್ಗುಡಿ ಕರೆ ನೀಡಿದರು.

         ಸಮೀಪದ ತೊಳಹುಣಸೆ ಬಳಿಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ಶ್ರೀಜಗಜ್ಯೋತಿ ಬಸವೇಶ್ವರರ 886ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ದೂರ ದೃಷ್ಟಿಯ ವಿಶ್ವ ವೈಶಾಲ್ಯದ ವಿಚಾರಗಳನ್ನು ಓದಿ ತಿಳಿದುಕೊಳ್ಳುವುದಲ್ಲದೆÉ, ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ 12ನೇ ಶತಮಾನದಲ್ಲಿ ಬಸವಣ್ಣನವರು ಕಂಡಂತಹ ಕನಸು ನನಸು ಆಗಲು ಸಾಧ್ಯ ಎಂದರು.

       ಶ್ರೇಣಿಕೃತ ಸಮಾಜದ ವ್ಯವಸ್ಥೆಯನ್ನು ಖಂಡಿಸಿ ಅದನ್ನು ದೂರಗೊಳಿಸುವ ಪ್ರಯತ್ನಗಳು ವಚನ ಸಾಹಿತ್ಯದ ಕಾಲಘಟ್ಟದಲ್ಲಿ ನಡೆದಿತ್ತು. ಆದರೆ, ಇಂದು ಸಮಾಜದಲ್ಲಿ ಅವರ ವಿಚಾರ, ತತ್ವಗಳನ್ನು ಹಾಗೂ ಭಾವಚಿತ್ರವನ್ನು ಎತ್ತಿ ಹಿಡಿಯುವ ಕೆಲಸವಾಗುತ್ತಿದೆಯೇ ಹೊರತು ಅವುಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

        ಮಹಾಮನೆ, ಅನುಭವ ಮಂಟಪ ಇವುಗಳೆಲ್ಲವೂ ಹನ್ನೆರಡನೇ ಶತಮಾನದಲ್ಲಿದ್ದ ಸ್ಥಳಗಳಷ್ಟೇ ಅಲ್ಲ. ಅವು ನಮ್ಮ ಬದುಕನ್ನು ಪರಿವರ್ತಿಸುವ ಜ್ಞಾನ ಪೀಠಗಳಾಗಿದ್ದವು. ಬುದ್ಧ, ಬಸವ, ಅಂಬೇಡ್ಕರ್‍ರಂತಹ ಅನುಭಾವಿಕ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಪರಿವರ್ತನೆಯಗಲು ಸಾಧ್ಯ. ವಚನಕಾರರು ದೇಹವೇ ದೇಗುಲ ಎಂಬ ಪರಮಾರ್ಥವನ್ನು ಬಹು ಮುಖ್ಯವೆಂದು ತಿಳಿದುಕೊಂಡರು.

        ಅವರ ಅರಿವಿನ ಅಂತಃಸತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು. ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್.ವಿ.ಹಲಸೆ ಮಾತನಾಡಿ, ಬಸವಣ್ಣನವರ ಫೋಟೋಗಳನ್ನು ಎತ್ತಿ ಹಿಡಿಯುವುದಕ್ಕಿಂತಲೂ ಅವರ ತತ್ವಗಳನ್ನು ಅಪ್ಪಿಕೊಳ್ಳಬೇಕು. ಬಸವಣ್ಣನವರು ಸಂದರ್ಭಕ್ಕನುಗುಣವಾಗಿ ವಚನಗಳನ್ನು ರಚಿಸಿದ್ದಾರೆ.

        ಇಂದಿನ ಪ್ರಜಾಪ್ರಭುತ್ವದ ಕಲ್ಪನೆಯೂ 12ನೇ ಶತಮಾನದ ಬಸವಣ್ಣನವರ ಕಲ್ಯಾಣ ಮಂಟಪದ ಆಶಯವಾಗಿತ್ತು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು.
ವಿವಿಯ ಕುಲಸಚಿವ ಪ್ರೊ.ಪಿ.ಕಣ್ಣನ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ಶೋಷಣೆಗಳು ಆಗುತ್ತಿವೆ.

        ಈ ಏರು ಪೇರುಗಳನ್ನು ಸಮಾನವಾಗಿ ಕಾಣಲು ಬಹು ಮುಖ್ಯವಾಗಿ ಹೋರಾಟ ಮಾಡಿದವರಲ್ಲಿ ಬಸವಣ್ಣ ಪ್ರಮುಖರು. ರಾಜಕೀಯ, ಸಾಮಾಜಿಕ ಹಾಗೂ ಧರ್ಮದಲ್ಲಿ ಸಮಾನತೆಗಾಗಿ ಹೋರಾಟ ಅವರು ಮಾಡಿದ್ದಾರೆ. ಇಂದು ವಿದ್ಯಾರ್ಥಿಗಳು ಪದವಿಗಾಗಿ ಮಾತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ವಿನಃ ಅದರಾಚೆಗೆ ಜ್ಞಾನವನ್ನು ಪಡೆದುಕೊಂಡು ತಮ್ಮ ಅನಿಸಿಕೆಗಳನ್ನು ಬರಹದ ಮೂಲಕ ವ್ಯಕ್ತಪಡಿಸುವ ಕಾರ್ಯವಾಗುತ್ತಿಲ್ಲ. ನುಡಿದಂತೆ ನಡೆಯುವ ಬಸವಣ್ಣನವರ ಕಾಯಕ ಪ್ರವೃತ್ತಿಯನ್ನು ಇಂದು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

       ಈ ಸಂದರ್ಭದಲ್ಲಿ ದಾವಣಗೆರೆ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ಬಸವರಾಜ್ ಬಣಕಾರ್ ಮತ್ತು ಹಣಕಾಸು ಅಧಿಕಾರಿ ಪ್ರೊ.ಜೆ.ಕೆ. ರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ