ಪಾನಮತ್ತರಾಗದೆ ಕ್ರೈಂ ಬಗ್ಗೆ ಮಾಹಿತಿ ಕೊಡಿ : ಎಸ್ಪಿ

ನಗರದ 1000 ಆಟೋಗಳಿಗೆ ಡಿಸ್‍ಪ್ಲೇ ಕಾರ್ಡ್ ಅಳವಡಿಕೆಗೆ ಚಾಲನೆ
ತುಮಕೂರು
    ರಾತ್ರಿ ವೇಳೆ ಆಟೋ ಚಾಲನೆ ಮಾಡುವಾಗ ಆಟೋ ಚಾಲಕರು ಪಾನಮತ್ತರಾಗಿರಬಾರದು ಎಂದು ಖಡಕ್ ಸೂಚನೆ ನೀಡಿದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ಕೋನ ವಂಶಿಕೃಷ್ಣ,  ರಾತ್ರಿ ಹೊತ್ತಿನಲ್ಲಿ ಆಟೋ ಚಾಲನೆ ಮಾಡುವಾಗ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಅಥವಾ ಅಪರಾಧ ಪ್ರಕರಣಗಳನ್ನು ನೋಡಿದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ಕೊಡಿ ಎಂದು ಆಟೋ ಚಾಲಕರಿಗೆ ಸಲಹೆ ನೀಡಿದ್ದಾರೆ.
     ಸೋಮವಾರ ಬೆಳಗ್ಗೆ ತುಮಕೂರು ನಗರದ ಚಿಲುಮೆ ಸಮುದಾಯ ಭವನದಲ್ಲಿ ಟ್ರಾಫಿಕ್ ಪೊಲೀಸ್ ವಿಭಾಗದಿಂದ ನಡೆದ ಕಾರ್ಯಕ್ರಮದಲ್ಲಿ ಇದೀಗ ಮೊದಲನೇ ಹಂತದಲ್ಲಿ ನಗರದ 1000 ಆಟೋರಿಕ್ಷಾಗಳಿಗೆ ಸಮಗ್ರ ಮಾಹಿತಿಯ ಡಿಸ್‍ಪ್ಲೇ ಕಾರ್ಡ್ ಮತ್ತು ಆಟೋರಿಕ್ಷಾ ಕ್ರಮಸಂಖ್ಯೆ ಅಳವಡಿಸುವ ಮಹತ್ತರ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
    ತಾವು ರಾತ್ರಿ ವೇಳೆ ನಗರ ಸಂಚಾರ (ನೈಟ್ ರೌಂಡ್ಸ್) ಮಾಡುವಾಗ ಆಟೋರಿಕ್ಷಾ ಚಾಲಕರು ಪಾನಮತ್ತರಾಗಿದ್ದ ಪ್ರಕರಣಗಳು ಪತ್ತೆ ಆಗಿವೆಯೆಂಬುದನ್ನು ಉಲ್ಲೇಖಿಸುತ್ತ, ರಾತ್ರಿ ಹೊತ್ತಿನಲ್ಲಿ ಚಾಲನೆ ಮಾಡುವಾಗ ಯಾವುದೇ ಕಾರಣಕ್ಕೂ ಪಾನಮತ್ತರಾಗಿ ಚಾಲನೆ ಮಾಡಬೇಡಿ. ನಿಮ್ಮ ಹಿತ, ನಿಮ್ಮ ಕುಟುಂಬದ ಹಿತ ಮತ್ತು ಪ್ರಯಾಣಿಕರ ಹಿತಕ್ಕಾಗಿ ನೀವು ಪಾನಮತ್ತರಾಗಿ ಚಾಲನೆ ಮಾಡಬಾರದು.
 
    ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬೇಡಿ. ಅಪರಾಧ ಪ್ರಕರಣಗಳನ್ನು ನೋಡಿದರೆ, ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡರೆ ಒಡನೆಯೇ ಪೊಲೀಸರಿಗೆ ಮಾಹಿತಿ ಕೊಡುವ ಮೂಲಕ, ಪೊಲೀಸ್ ಸ್ನೇಹಿಯಾಗಿ ನಡೆದುಕೊಳ್ಳಿ. ಸಾರ್ವಜನಿಕರ/ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸಬೇಡಿ. ಜಂಕ್ಷನ್‍ಗಳಲ್ಲಿ ಆಟೋಗಳನ್ನು ನಿಲುಗಡೆ ಮಾಡದೆ, ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಕಿವಿಮಾತು ಹೇಳಿದರು. 
ಶೀಘ್ರವೇ ಆಟೋ ಸ್ನೇಹಿತ ಆಪ್
   ಪ್ರಸ್ತುತ ಅಳವಡಿಸುತ್ತಿರುವ ಡಿಸ್‍ಪ್ಲೇ ಕಾರ್ಡ್ ವಿಶೇಷತೆ ಹೊಂದಿದೆ. ಇದರಲ್ಲಿ ಕ್ಯೂಆರ್ ಕೋಡ್ ಇದೆ. ಮೊಬೈಲ್ ಫೋನ್ ಮೂಲಕ ಈ ಕ್ಯೂಆರ್ ಕೋಡ್ ತೆರೆದರೆ, ಸದರಿ ಆಟೋರಿಕ್ಷಾದ ಪೂರ್ಣ ಮಾಹಿತಿ ಅಂದರೆ, ವಾಹನದ ದಾಖಲೆಗಳು, ಫೋಟೋ ಸಹಿತ ಚಾಲಕನ ಹೆಸರು, ಮಾಲೀಕರ ಹೆಸರು ಇತ್ಯಾದಿಗಳೆಲ್ಲ ಕ್ಷಣಾರ್ಧದಲ್ಲಿ ಮೊಬೈಲ್‍ನಲ್ಲಿ ಕಾಣಿಸಿಕೊಳ್ಳುತ್ತದೆ. ಇವೆಲ್ಲ ಮಾಹಿತಿ (ಡಾಟಾ)ಗಳು ಆನ್ ಲೈನ್‍ನಲ್ಲಿ ದಾಖಲಾಗಿರುತ್ತವೆ. ಆದಕಾರಣ ಇದನ್ನು ನಕಲಿ ಮಾಡಲು ಸಾಧ್ಯವಾಗದು ಎಂದು ಹೇಳಿದ ಡಾ.ವಂಶಿಕೃಷ್ಣ, ಮುಂದಿನ ಸುಮಾರು 20 ದಿನಗಳ ಅವಧಿಯಲ್ಲಿ ಆಟೋ ಸ್ನೇಹಿತ ಎಂಬ ಹೆಸರಿನ ಮೊಬೈಲ್ ಆಪ್ ಒಂದು ಸಿದ್ಧವಾಗಲಿದ್ದು ಇವೆಲ್ಲ ಮಾಹಿತಿಗಳೂ ಅದರಲ್ಲಿ ಲಭ್ಯವಾಗಲಿದೆ ಎಂದರು. 
    ತುಮಕೂರು ನಗರದಲ್ಲಿ ಪ್ರಸ್ತುತ ಸ್ಮಾರ್ಟ್‍ಸಿಟಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಟ್ರಾಫಿಕ್ ನಿಯಮಾವಳಿಗಳ ಸಂಪೂರ್ಣ ಜಾರಿಗೆ ಅಚಡಣೆ ಆಗುತ್ತಿದೆ. ನಿಧಾನ ಪ್ರಕ್ರಿಯೆಯಲ್ಲಾದರೂ ನಿಯಮಗಳನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿದ್ದು, ಈ ಹೊಸವರ್ಷದಲ್ಲಿ ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುವುದು. ಇವೆಲ್ಲಕ್ಕೂ ಆಟೋರಿಕ್ಷಾ ಚಾಲಕರು ಸಹಕರಿಸಬೇಕು ಎಂದು ಎಸ್ಪಿ ಡಾ.ವಂಶಿಕೃಷ್ಣ  ಕೋರಿದರು. 
ಪರವಾನಗಿ ರದ್ದಾದೀತು
    ಇದಕ್ಕೂ ಮೊದಲು ಮಾತನಾಡಿದ ಅಡಿಷನಲ್ ಎಸ್ಪಿ ಟಿ.ಜೆ.ಉದೇಶ್, ರಾತ್ರಿ ವೇಳೆಯಲ್ಲಿ ಆಟೋರಿಕ್ಷಾ ಚಾಲಕರು ಪಾನಮತ್ತರಾಗಿ ಚಾಲನೆ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು. ಮೊಕದ್ದಮೆ ದಾಖಲಾದರೆ ವಾಹನ ಪರವಾನಗಿ, ಚಾಲನಾ ಪರವಾನಗಿ ರದ್ದು ಆಗಬಹುದು ಎಂದು ಸ್ಪಷ್ಟ ಶಬ್ದಗಳಲ್ಲಿ ಎಚ್ಚರಿಸಿದರು. 
ಫಲಕ ಮತ್ತು ಕ್ರಮಸಂಖ್ಯೆ
    ಡಿಸ್‍ಪ್ಲೇ ಕಾರ್ಡ್ (ಫಲಕ) ವ್ಯವಸ್ಥೆ ಬೆಂಗಳೂರು, ಶಿವಮೊಗ್ಗ, ದಾವಣಗೆರೆ ಮೊದಲಾದ ನಗರಗಳಲ್ಲಿ ಈಗಾಗಲೇ ಜಾರಿಯಲ್ಲಿದ್ದು, ಅಂತಹ ವ್ಯವಸ್ಥೆಯನ್ನು ಪ್ರಸ್ತುತ ತುಮಕೂರಿನಲ್ಲೂ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದರ ಜೊತೆಗೆ ಪ್ರತಿಯೊಂದು ಆಟೋರಿಕ್ಷಾಗೂ ಟಿಎಂಕೆ ಎಂಬ ಪದದೊಂದಿಗೆ ಕ್ರಮ ಸಂಖ್ಯೆಯನ್ನೂ ನೀಡಲಾಗುತ್ತಿದೆ. ಇದು ಒಂದನೇ ಸಂಖ್ಯೆಯಿಂದ ಆರಂಭವಾಗಿದ್ದು, ಇದೀಗ 1000 ದವರೆಗೂ ಆಗಿದೆ. ಈ ಫಲಕ ಮತ್ತು ಕ್ರಮಸಂಖ್ಯೆ ಇದೆಯೆಂದರೆ ಆ ಆಟೋರಿಕ್ಷಾ ಸಕ್ರಮವಾಗಿದೆ ಹಾಗೂ ಎಲ್ಲ ದಾಖಲಾತಿಗಳನ್ನೂ ಹೊಂದಿದೆ ಎಂಬುದು ಖಚಿತವಾಗುತ್ತದೆ. ಈ ನಿಟ್ಟಿನಲ್ಲಿ ತುಮಕೂರು ನಗರದ ಮಿಕ್ಕುಳಿದ ಆಟೋರಿಕ್ಷಾದವರೂ ಶೀಘ್ರವಾಗಿ ಅಗತ್ಯ ದಾಖಲಾತಿಗಳನ್ನು ಒದಗಿಸಿ, ಡಿಸ್‍ಪ್ಲೇ ಕಾರ್ಡ್ ಮತ್ತು ಕ್ರಮಸಂಖ್ಯೆ ವ್ಯಾಪ್ತಿಗೆ ಒಳಪಡಬೇಕು ಎಂದು ಉದೇಶ್ ಹೇಳಿದರು. 
     ಈ ಡಿಸ್‍ಪ್ಲೇ ಬೋರ್ಡ್ ಮತ್ತು ಆಟೋ ಸ್ನೇಹಿತ ಆಪ್ ಸಿದ್ಧಪಡಿಸಿರುವ ಶಿವಮೊಗ್ಗದ ವೆಬ್‍ಸ್ಕೆಡಿಯೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ವಿನಾಯಕ್ ಮಾತನಾಡಿ, ಡಿಸ್‍ಪ್ಲೇಕಾರ್ಡ್ ಆಟೋರಿಕ್ಷಾದ ಒಳಭಾಗ ಪ್ರಯಾಣಿಕರಿಗೆ ಅಭಿಮುಖವಾಗಿ ಇರುತ್ತದೆ. ಆಟೋರಿಕ್ಷಾದ ಮುಂಭಾಗ ಮತ್ತು ಹಿಂಭಾಗ ಕ್ರಮಸಂಖ್ಯೆಯ ರೇಡಿಯಂ ಸ್ಟಿಕ್ಕರ್ ಅಳವಡಿಸಲಾಗುವುದು ಎಂದರು. 1000 ಡಿಸ್‍ಪ್ಲೇ ಬೋರ್ಡ್‍ಗೆ ಪೂರಕವಾಗಿ ಫೈಬರ್ ಫಲಕಗಳನ್ನು ಮತ್ತು ಪೊಲೀಸ್ ಇಲಾಖೆಗೆ ಬ್ಯಾರಿಕೇಡ್‍ಗಳನ್ನು ಕೊಡುಗೆಯಾಗಿ ನೀಡಿರುವ ತುಮಕೂರಿನ ಪೂರ್ವಿಕಾ ಮೊಬೈಲ್ ಶಾಖೆಯ ತಂಡದವರು ವೇದಿಕೆಯಲ್ಲಿದ್ದರು. ಟ್ರಾಫಿಕ್ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಜ್ಞಾನಮೂರ್ತಿ ಸ್ವಾಗತಿಸಿದರು. ತುಮಕೂರು ನಗರ ಡಿ.ವೈ.ಎಸ್ಪಿ. ತಿಪ್ಪೇಸ್ವಾಮಿ ವಂದಿಸಿದರು. ಮತ್ತೋರ್ವ ಟ್ರಾಫಿಕ್ ಸಬ್‍ಇನ್ಸ್‍ಪೆಕ್ಟರ್ ಮಂಗಳಮ್ಮ ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಅರ್ಧ ಹೆಲ್ಮೆಟ್ ವಿರುದ್ಧ ಕ್ರಮ
     ತುಮಕೂರು ನಗರದಲ್ಲಿ ಕಾನೂನುಬಾಹಿರವಾದ ಅರ್ಧಹೆಲ್ಮೆಟ್ ವಿರುದ್ಧ ಮೊದಲ ಹಂತದ ಕಾರ್ಯಾಚರಣೆ ನಡೆಸಿ, ಕ್ರಮ ಕೈಗೊಳ್ಳಲಾಗಿದೆ. ಸದ್ಯದಲ್ಲೇ ಎರಡನೇ ಹಂತದ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಕಾನೂನಿನಲ್ಲಿ ಸೂಚಿಸಿರುವ ಪ್ರಕಾರವೇ ಎಲ್ಲರೂ ಹೆಲ್ಮೆಟ್ ಧರಿಸಬೇಕಾಗುತ್ತದೆ ಎಂದು  ಸಮಾರಂಭದ ಬಳಿಕ ಪತ್ರಕರ್ತರೊಡನೆ ಮಾತನಾಡುತ್ತ ಎಸ್ಪಿ ಡಾ. ಕೋನ ವಂಶಿಕೃಷ್ಣ ಹೇಳಿದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap