ಭೂಸ್ವಾಧಿನ ಕಾಯ್ದೆ ವಿರೋಧಿಸಿ ರೈತರಿಂದ ರಸ್ತೆ ತಡೆ

ಬೆಂಗಳೂರು

   ರಾಜ್ಯ ಸರ್ಕಾರದ ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ರಾಜ್ಯಾದ್ಯಂತ ರೈತರು ರಸ್ತೆಗಿಳಿದು ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು, ಬೊಮ್ಮಸಂದ್ರದ ಸಮೀಪದ ರಾಷ್ಟ್ರೀಯ ಹೆದ್ದಾರಿ, ದೇವನಹಳ್ಳಿ ಟೋಲ್ ಬಳಿಯ ರಾಷ್ಟ್ರೀಯ ಹೆದ್ದಾರಿ, ಚಿಕ್ಕಬಳ್ಳಾಪುರ, ಕೋಲಾರ ಭಾಗದ ರಾಷ್ಟ್ರೀಯ ಹೆದ್ದಾರಿ, ಮೈಸೂರು, ಮಂಡ್ಯ, ರಾಮನಗರ ಭಾಗದ ರಾಷ್ಟ್ರೀಯ ಹೆದ್ದಾರಿ, ಬಳ್ಳಾರಿ, ಹಾವೇರಿ, ಬೆಳಗಾವಿ ಭಾಗದ ರಾಷ್ಟ್ರೀಯ ಹೆದ್ದಾರಿ, ದಾವಣಗೆರೆ, ಸುತ್ತಮುತ್ತ ಇರುವ ರಾಷ್ಟ್ರೀಯ ಹೆದ್ದಾರಿಗಳ ಬಳಿ ಸೇರಿ ರೈತರು ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ಭೂಸ್ವಾಧೀನ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿದರು.

   ಹೆದ್ದಾರಿ ಬಂದ್ ಮಾಡಲು ಮುಂದಾದ ರೈತರನ್ನು ಮನವೊಲಿಸಿ ರಸ್ತೆ ಪಕ್ಕದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಿದ್ದರಿಂದ ಬೆಂಗಳೂರು ಸೇರಿ ರಾಜ್ಯದ ಯಾವುದೇ ಭಾಗದಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಲಿಲ್ಲ ದೇವನಹಳ್ಳಿ ಬಳಿ ಸೇರಿ ನೂರಾರು ರೈತರು ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸಿ ಭೂಸ್ವಾಧೀನ ಕಾಯ್ದೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಭೂಸ್ವಾಧೀನ ಕಾಯಿದೆ ಜಾರಿಗೆ ರೈತರ ಒಪ್ಪಿಗೆ ಕಡ್ಡಾಯವಾಗಿ ಪಡೆಯಬೇಕು. ಭೂಸ್ವಾಧೀನವು ಸಾರ್ವಜನಿಕ ಉದ್ದೇಶಕ್ಕೆ ಮಾತ್ರ ಸೀಮಿತವಾಗಿರಬೇಕು. ಸ್ವಾಧೀನ ಪಡಿಸಿಕೊಂಡ ಭೂಮಿಗೆ ನಾಲ್ಕು ಪಟ್ಟು ಬೆಲೆ ನೀಡಬೇಕು ಎಂದು ರೈತರು ಆಗ್ರಹಿಸಿದರು.

      ನಗರ ಪ್ರದೇಶವಾಗಿದ್ದರೆ ಎರಡು ಪಟ್ಟು ಬೆಲೆ ನೀಡಬೇಕು. ಉದ್ದೇಶಿತ ಯೋಜನೆಗೆ 3 ವರ್ಷಗಳಲ್ಲಿ ಭೂಮಿ ಬಳಸಬೇಕು.ಇಲ್ಲದಿದ್ದರೆ 5 ವರ್ಷಗಳಲ್ಲಿ ರೈತನಿಗೆ ಭೂಮಿ ವಾಪಸ್ ಕೊಡಬೇಕು ಎಂದು ಒತ್ತಾಯಿಸಿದರು.
ರೈತರ ಸಾಲ ಮನ್ನಾದ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ, ಈ ಬಗ್ಗೆ ವಿವರ ನೀಡಬೇಕು. ಬರ ಪರಿಹಾರ, ನೀರಾವರಿ ಸಮಸ್ಯೆ ಬಗ್ಗೆ ಸರ್ಕಾರ ಶೀಘ್ರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

     ತುಮಕೂರು ನಗರದ ಹೊರವಲಯದ ಮಂಚಕಲ್ ಕುಪ್ಪೆಯ ಟೋಲ್‍ಗೇಟ್ ಬಳಿ ಜಮಾಯಿಸಿದ ನೂರಾರು ಮಂದಿ ರೈತರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಬಂದ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

     2013 ರಲ್ಲಿ ಕೇಂದ್ರ ಸರ್ಕಾರ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೊಳಿಸಿತ್ತು. ಈ ಕಾಯ್ದೆಯನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವಂತೆ ತಿದ್ದುಪಡಿ ಮಾಡಲಾಗಿದೆ. ಇದು ರೈತ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

   ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಅಭಿವೃದ್ಧಿಪಡಿಸಲು ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಈ ಸಮಸ್ಯೆಯನ್ನು ಇತ್ಯರ್ಥಪಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ರೈತ ಮುಖಂಡರು, ಸರ್ಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡರು.ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.

    2013ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಭೂಸ್ವಾಧೀನ ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆಯ ಪ್ರಕಾರ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಾಗ ರೈತರಿಗೆ ತೃಪ್ತಿದಾಯಕ ಬೆಲೆ ನೀಡಬೇಕು. ಇಂತಿಷ್ಟು ದಿನದೊಳಗೆ ಪಾವತಿಸಬೇಕು. ಹಾಗೂ ರೈತರಿಗೆ ತೃಪ್ತಿದಾಯಕವಲ್ಲದಿದ್ದರೆ ಕೋರ್ಟ್‍ಗೆ ಹೋಗಬಹುದಾಗಿತ್ತು. ಆದ್ರೆ ಈ ಕಾಯ್ದೆಗೆ ತಿದ್ದುಪಡಿ ಮಾಡಿರುವ ಕುಮಾರಸ್ವಾಮಿ ಸರ್ಕಾರ, ರೈತರಿಗೆ ದ್ರೋಹ ಬಗೆದು ಉದ್ಯಮಿಗಳ ಪರ ನಿಂತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.ಕಾಂಗ್ರೆಸ್‍ನ ಅವಧಿಯ ಈ ಯೋಜನೆ ಕೈಬಿಡಲು ಕಾಂಗ್ರೆಸ್‍ನವರು ಹೇಗೆ ಒಪ್ಪಿದ್ದಾರೆ ಎನ್ನುವುದು ರೈತರ ಮೊದಲ ಪ್ರಶ್ನೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link