ಬಿಜೆಪಿ ಪಟ್ಟಿ ಪ್ರಕಟ

0
22

ಬೆಂಗಳೂರು

      ರಾಜ್ಯದಲ್ಲಿ ನಡೆಯುತ್ತಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ರಾಮನಗರ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.

      ಶಿಕಾರಿಪುರದಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ ಅವರು, ಕಗ್ಗಂಟಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಡಾ. ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಲಾಗುವುದು ಎಂದರು.

      ಶಿವಮೊಗ್ಗದಿಂದ ತಮ್ಮ ಬಿ.ವೈ.ರಾಘವೇಂದ್ರ, ಬಳ್ಳಾರಿಯಿಂದ ಜೆ.ಶಾಂತಾ ಹಾಗೂ ಜಮಖಂಡಿಯಿಂದ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಕಣಕ್ಕಿಳಿಯಲಿದ್ದಾರೆ ಎಂದರು.

      ರಾಮನಗರದಲ್ಲಿ ಬಹುತೇಕ ವಿಧಾನಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಅವರ ಪುತ್ರ ಎಲ್. ಚಂದ್ರಶೇಖರ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಚಂದ್ರಶೇಖರ್ ಈಗಾಗಲೇ ಬಿಜೆಪಿ ಸೇರಿದ್ದು, ಬಹುತೇಕ ಒಂದೆರಡು ದಿನಗಳಲ್ಲಿ ಅಭ್ಯರ್ಥಿ ಹೆಸರು ಪ್ರಕಟಿಸುವ ನಿರೀಕ್ಷೆಯಿದೆ.

      ಈ ಮಧ್ಯೆ ಮಂಡ್ಯದಲ್ಲಿ ಡಾ. ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಲು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಡಾ: ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆ ತರಲು ಸಫಲರಾಗಿದ್ದಾರೆ. ತಮ್ಮ ಸಮ್ಮುಖದಲ್ಲಿ ಡಾ. ಸಿದ್ದರಾಮಯ್ಯ ಅವರನ್ನು ಅಶೋಕ್ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರು.

     ಕಳೆದ 1991ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇರ್ಪಡೆಗೊಂಡ ಅವರು, 3 ದಶಕಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ, 2016ರಲ್ಲಿ ನಿವೃತ್ತಿ ಹೊಂದಿದರು. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿ ಸೇವೆ ಸಲ್ಲಿಸಿದ್ದಾರೆ.

     ಮಂಡ್ಯ ಮತ್ತು ಶ್ರೀಂಗಪಟ್ಟಣದಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ದೊಡ್ಡ ಬೋರೇಗೌಡರ ಪುತ್ರರಾಗಿರುವ ಡಾ. ಸಿದ್ದರಾಮಯ್ಯ ಅವರ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ರವಾನಿಸಲಾಗಿದೆ.

      ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಡಾ.ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರ ಕೆಲಸ ನೋಡಿ ಬಿಜೆಪಿಗೆ ಬರುತ್ತಿದ್ದೇನೆ. ನಾನು ಕೂಡ ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿಯಲ್ಲಿದ್ದವನು. ಸರ್ಕಾರಿ ಸೇವೆಯಲ್ಲಿದ್ದಾಗ ರಾಜಕೀಯದಿಂದ ದೂರ ಇದ್ದೆ. ಇದೀಗ ನಿವೃತ್ತಿಯಾಗಿದ್ದು ಸಮಾಜ ಸೇವೆ ಮುಂದುವರೆಸಲು ಬಿಜೆಪಿ ಸೇರಿದ್ದೇನೆ ಎಂದರು.

     ಇದಕ್ಕೂ ಮುನ್ನ ಬಿಜೆಪಿ ನಾಯಕರ ಗೈರು ಹಾಜರಿಯಲ್ಲೇ ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ಡಾ.ಸಿದ್ದರಾಮಯ್ಯ ಪಡೆದುಕೊಂಡರು. ರಾಹುಕಾಲ ಆರಂಭವಾಗುವ ಮೊದಲು ಶುಭ ಮುಹೂರ್ತದಲ್ಲೇ ಪ್ರಾಥಮಿಕ ಸದಸ್ಯತ್ವ ಪಡೆಯಬೇಕೆಂದು ನಿರ್ಧರಿಸಿದ್ದ ಡಾ.ಸಿದ್ದರಾಮಯ್ಯ ಅದರಂತೆ ಸದಸ್ಯತ್ವ ಪಡೆದುಕೊಂಡರು.

     ಈ ಮೊದಲು ಬೆಳಗ್ಗೆ 11:30ಕ್ಕೆ ಡಾ.ಸಿದ್ದರಾಮಯ್ಯ ಬಿಜೆಪಿ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿತ್ತು. ಆದರೆ ಆರ್.ಅಶೋಕ್ ಆಗಮನ ವಿಳಂಬವಾದ ಕಾರಣ, ಬಿಜೆಪಿ ವಕ್ತಾರ ವಾಮನ ಆಚಾರ್ಯ ಸಮ್ಮುಖದಲ್ಲಿ ಸೇರ್ಪಡೆಯಾದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here