ಮಧ್ಯ ಕರ್ನಾಟಕ ಮಾವು ಬೆಳೆಗೆ ಪೂರಕ

0
6

ದಾವಣಗೆರೆ

   ಇತರೆ ಜಿಲ್ಲೆಗಳಿಗೆ ಹೋಲಿಸಿದರೆ, ಮಾವು ಬೆಳೆಗೆ ಮಧ್ಯ ಕರ್ನಾಟಕವಾಗಿರುವ ದಾವಣಗೆರೆ ಜಿಲ್ಲೆ ಸೂಕ್ತ ಪ್ರದೇಶವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದರು.

   ನಗರದ ಗಾಜಿನ ಮನೆಯಲ್ಲಿ ಶುಕ್ರವಾರದಿಂದ ತೋಟಗಾರಿಕೆ ಇಲಾಖೆ ಮತ್ತು ಬೆಂಗಳೂರಿನ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ(ನಿ) ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ‘ಮಾವು ಮಾರಾಟ ಮತ್ತು ಪ್ರದರ್ಶನ ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ತೋಟಗಾರಿಕೆ ಇಲಾಖೆಯ ಸಮೀಕ್ಷೆಯ ಪ್ರಕಾರ ಜಿಲ್ಲೆಯ ಬಹುತೇಕ ಭೂಮಿ ಮಾವು ಬೆಳೆಯಲು ಯೋಗ್ಯವಾಗಿದೆ ಎಂಬುದು ತಿಳಿದು ಬಂದಿದೆ. ಆದ್ದರಿಂದ ರೈತರು ಹೆಚ್ಚೆಚ್ಚು ಮಾವು ಬೆಳೆಯುವ ಮೂಲಕ ಲಾಭ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಕಿವಿಮಾತು ಹೇಳಿದರು.

    ಈ ಬಾರಿ ಮಳೆ ಅಭಾವದಿಂದಾಗಿ ಜಿಲ್ಲೆಯಲ್ಲಿ ಮಾವು ಇಳುವರಿ ತುಸು ಕುಂಠಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಹೆಚ್ಚಿನ ಮಾವು ಫಸಲು ಬೆಳೆಯಬಹುದಾಗಿದೆ ಎಂದರು.ಇತ್ತೀಚಿನ ದಿನಗಳಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಬಹುತೇಕ ಆಹಾರ ಪದಾರ್ಥಗಳು ವಿಷಯುಕ್ತವಾಗಿ ಮಾರ್ಪಟ್ಟಿವೆ. ಆದ್ದರಿಂದ ಗ್ರಾಹಕರಿಗೆ ನೈಸರ್ಗಿಕವಾಗಿ ಮಾಗಿಸಿದ ಗುಣಮಟ್ಟದ ಮಾವಿನ ಹಣ್ಣುಗಳನ್ನು, ಯೋಗ್ಯ ಬೆಲೆಗೆ ಗ್ರಾಹಕರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

   ರೈತರು ಹಾಗೂ ಗ್ರಾಹಕರಿಗೆ ಅನುಕೂಲವಾಗಲೆಂದು ಮಾವು ಮೇಳ ಆಯೋಜಿಸಲಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾವಿನ ಮೇಳಕ್ಕೆ ಭೇಟಿ ನೀಡಿ ನೈಸರ್ಗಿಕವಾಗಿ ಮಾಗಿಸಿದ ಹಣ್ಣು ಖರೀದಿಸಿ ಸವಿಯುವ ಮೂಲಕ ಮಾವಿನ ಮೇಳದ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

   ಹಣ್ಣುಗಳ ರಾಜ ಮಾವಿನ ಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ದೊರೆಯಲಿವೆ. ಮಾರುಕಟ್ಟೆಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನದಾಗಿ ಮದ್ಯವರ್ತಿಗಳು ಮಾರಾಟ ಮಾಡುವ ಮೂಲಕ ಗ್ರಾಹಕರಿಗೆ ಹಾಗೂ ರೈತರಿಗೆ ವಂಚಿಸುತ್ತಾರೆ. ಆದರೆ, ಮೇಳದಲ್ಲಿ ನಿಗದಿತ ದರವನ್ನು ಪಟ್ಟಿಮಾಡಿ ಎಲ್ಲಾ ಮಳಿಗೆಗಳಲ್ಲಿಯೂ ಹಣ್ಣಿನ ತಳಿಗನುಗುಣವಾಗಿ ಸಾರ್ವತ್ರಿಕ ಬೆಲೆಗೆ ನೀಡುವಂತೆ ಸೂಚಿಸಲಾಗಿದೆ ಎಂದರು.

   ರಾಮನಗರ, ಬಳ್ಳಾರಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಮಾರಾಟಗಾರರು, ಗ್ರಾಹಕರು ಮೇಳಕ್ಕೆ ಆಗಮಿಸಿದ್ದು, ತೋಟಗಾರಿಕಾ ಇಲಾಖೆಯಿಂದ ಮಾವು ಬೆಳೆಯುವ ಕುರಿತ ಹಾಗೂ ನೈಸರ್ಗಿಕ, ರಾಸಾಯನಿಕ ರಹಿತ ಮಾವು ಬೆಳೆಯುವ ಕುರಿತಂತೆ ಅರಿವು, ಸರ್ಕಾರದ ಸೌಲಭ್ಯಗಳ ಮಾಹಿತಿ, ತರಬೇತಿ, ವರ್ಕ್‍ಶಾಪ್‍ಗಳನ್ನು ಮಾಡಿಸುವ ಕಾರ್ಯ ಸಹ ನಡೆಯಲಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಜಿಪಂ ಸಿಇಓ ಎಚ್.ಬಸವರಾಜೇಂದ್ರ, ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿ.ಪಂ ಉಪ ಕಾರ್ಯದರ್ಶಿ ಭೀಮಾನಾಯ್ಕ, ತೋಟಗಾರಿಕೆ ಉಪ ನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನವರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಷ್ಮಾ ಪರ್ವೀನ್, ಯತಿರಾಜ್, ಶಾಮನೂರು ಲಿಂಗರಾಜ್ ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here