ತುಮಕೂರು:
ರಸ್ತೆಯಲ್ಲಿ ಸೈಕಲ್‍ನಲ್ಲಿ ಹೋಗುವಾಗ ಚಿರತೆಯೊಂದು ಹಾಡಹಗಲೇ 11 ವರ್ಷದ ಬಾಲಕನ ಮೇಲೆ ಹಠಾತ್ ಎರಗಿ ಕಚ್ಚಿಕೊಂಡು ಹೋದ ಪ್ರಸಂಗ ಗುಬ್ಬಿ ತಾಲ್ಲೂಕು ನಾರನಹಳ್ಳಿ ಬಳಿ ನಡೆದಿದೆ.ನಾರನಹಳ್ಳಿಯ ಚಾನಲ್ ಬಳಿ ಶನಿವಾರ ಸಂಜೆ ಸುಮಾರು 4.30ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಬಾಲಕ ಹೋಗುತ್ತಿದ್ದ ದಾರಿಯಲ್ಲಿ ಹಿಂದಿನಿಂದ ಬರುತ್ತಿದ್ದವರು ಈ ಘಟನೆಯನ್ನು ನೋಡಿ ಹೌಹಾರಿದ್ದಾರೆ. ಒಡನೆಯೇ ಚಿರತೆಯನ್ನು ಹಿಂಬಾಲಿಸಿ ಹೋಗುವಷ್ಟರ ವೇಳೆಗೆ ಬಾಲಕನ ಕುತ್ತಿಗೆಗೆ ಬಾಯಿ ಹಾಕಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ.
ಜೀವ ಇದ್ದ ಬಾಲಕನನ್ನು ಹೆಬ್ಬೂರು ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಆತ ಅಸುನೀಗಿದನೆಂದು ತಿಳಿದು ಬಂದಿದೆ. ನಾರನಹಳ್ಳಿಯ ಶಂಕರೇಗೌಡ ಅವರ ಪುತ್ರ ಉದಯಕುಮಾರ್ ಎಂದು ತಿಳಿದು ಬಂದಿದೆ. ಇವರಿಗೆ ಇಬ್ಬರು ಮಕ್ಕಳಿದ್ದು, ಓರ್ವ ಚಿರತೆಗೆ ಬಲಿಯಾಗಿದ್ದಾನೆ.
ಹೆಬ್ಬೂರು ಸುತ್ತಮುತ್ತ ಹಾಗೂ ಗುಬ್ಬಿ ತಾಲ್ಲೂಕಿನ ಈ ಭಾಗದಲ್ಲಿ ಚಿರತೆಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇದ್ದು, ಸಾಕಷ್ಟು ಹಾನಿಯಾಗಿದೆ. ನಾರನಹಳ್ಳಿ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ ಇತ್ತೀಚೆಗೆ ಚಿರತೆಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.
ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿ ಮರಿಗಳನ್ನು ಬೋನಿಗೆ ಸಿಲುಕಿಸಿ ಅರಣ್ಯಕ್ಕೆ ರವಾನಿಸಿದ್ದರು. ಆದರೆ ಚಿರತೆ ಮಾತ್ರ ಬೋನಿಗೆ ಬೀಳಲಿಲ್ಲ. ಇತ್ತೀಚೆಗೆ ಇದೇ ಚಿರತೆ ಎರಡು ನಾಯಿಗಳನ್ನು ಬಲಿ ತೆಗೆದುಕೊಂಡಿತ್ತೆಂದು ಅಲ್ಲಿನ ಜನರು ಹೇಳುತ್ತಾರೆ.
ಚಿರತೆ ಕಾಟದಿಂದ ಇಲ್ಲಿನ ಜನ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ಇತ್ತ ಗಮನ ಹರಿಸಿ ಚಿರತೆಯನ್ನು ಹಿಡಿದು ಜೀವ ರಕ್ಷಿಸಬೇಕೆಂದು ಪಕ್ಕದ ಗ್ರಾಮದ ರಾಜು ಮತ್ತಿತರರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
