ಹಲವು ಅಡೆತಡೆಗಳ ನಡುವೆ ಒಂದು ವರ್ಷ ಪೂರೈಸಿದ ಮೈತ್ರಿ ಸರ್ಕಾರ..!!

ಬೆಂಗಳೂರು

      ಮೈತ್ರಿಕೂಟದ ಅಂಗಪಕ್ಷಗಳ ಸತತ ಕಚ್ಚಾಟದ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಇಂದಿಗೆ ಒಂದು ವರ್ಷ ಭರ್ತಿಯಾಗಲಿದೆ.

    ಅತಂತ್ರ ಫಲಿತಾಂಶದ ಹಿನ್ನೆಲೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಆರಿಸಿ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನು ರಾಜ್ಯಪಾಲರು ಅಧಿಕಾರದ ಗದ್ದುಗೆಯ ಮೇಲೆ ಕೂರಿಸಿದ್ದರಾದರೂ,ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಯಡಿಯೂರಪ್ಪ ತೀನ್ ದಿನ್ ಕಾ ಸುಲ್ತಾನ್ ಅನ್ನಿಸಿಕೊಂಡಿದ್ದರು.

    ಅವರು ಬಹುಮತ ಸಾಬೀತುಪಡಿಸಲು ವಿಫಲರಾದ ಬೆನ್ನಲ್ಲೇ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದ ಗದ್ದುಗೆಗೇರಿದ್ದಲ್ಲದೆ ಇಂದಿಗೆ ಒಂದು ವರ್ಷ ಪೂರೈಸುತ್ತಿದೆ.

     ಅಧಿಕಾರಕ್ಕೆ ಬಂದ ಶುರುವಿನಿಂದಲೇ ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾದಂತಹ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದರಾದರೂ ಕಳೆದೊಂದು ವರ್ಷದಲ್ಲಿ ಅವರ ಸರ್ಕಾರ ಕುಂಟುತ್ತಲೇ ಸಾಗಿದ್ದು ನಿಜ.

     ಹೇಗಾದರೂ ಮಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರನ್ನು ಸೆಳೆದು ಮರಳಿ ಅಧಿಕಾರದ ಗದ್ದುಗೆಯ ಮೇಲೆ ಕೂರಬೇಕು ಎಂಬ ಬಿಜೆಪಿ ರಾಜ್ಯಾಧ್ಯಕ್ಷ,ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರ ಆಕಾಂಕ್ಷೆ ನಿರಂತರವಾಗಿ ನಡೆದುಕೊಂಡು ಬಂದಿದ್ದು ಈಗಲೂ ಚಾಲ್ತಿಯಲ್ಲಿದೆ.

     ಹಾಗೆಯೇ ಕಾಂಗ್ರೆಸ್ ಪಕ್ಷದ ಶಾಸಕರೂ ಬಿಜೆಪಿ ಕಡೆ ಇನ್ನೇನು ಹೋಗಿಯೇ ಬಿಟ್ಟರು ಎನ್ನುವಂತಹ ಸನ್ನಿವೇಶಗಳು ಹಲವು ಬಾರಿ ನಿರ್ಮಾಣವಾಗಿದ್ದಲ್ಲದೆ ಕೆಲ ಕಾಲದ ಹಿಂದೆ ಯಡಿಯೂರಪ್ಪ ಅವರ ಆಪರೇಷನ್ ಕಮಲದ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ಬಹಿರಂಗಗೊಳಿಸಿ ಬಿಜೆಪಿಯನ್ನು ಧಿಗ್ಭ್ರಮೆಗೀಡು ಮಾಡಿದ್ದರು.

      ಇದಾದ ನಂತರ ಸರ್ಕಾರವನ್ನು ಬೀಳಿಸುವ ಬಿಜೆಪಿಯ ಓಘ ಕಡಿಮೆಯಾಯಿತಾದರೂ ಅದಿನ್ನೂ ನಿಂತಿಲ್ಲ.ಲೋಕಸಭಾ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಅದು ವೇಗವನ್ನೂ ಪಡೆಯಬಹುದು.ಅಥವಾ ಮಂದಗತಿಗೂ ಇಳಿಯಬಹುದು.

      ಈ ಮಧ್ಯೆ ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರ್ಕಾರವನ್ನು ಹೆಚ್ಚಾಗಿ ಕಾಡಿದ್ದು ಅಂಗಪಕ್ಷಗಳ ನಡುವಣ ಕದನ.ಸರ್ಕಾರದ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ಲಕ್ಷಿಸಲಾಗಿದೆ ಎಂದು ಕೈ ಪಾಳೆಯದ ಶಾಸಕರು ಮೇಲಿಂದ ಮೇಲೆ ಗುಡುಗುತ್ತಲೇ ಬಂದರು.

     ಹಾಗೆಯೇ ಇವತ್ತಿಗೂ ತಮಗೆ ಸಿದ್ಧರಾಮಯ್ಯ ಅವರೇ ಸಿಎಂ ಎಂದು ಅವರ ಬೆಂಬಲಿಗರು ಪದೇ ಪದೇ ಪುನರುಚ್ಚರಿಸುತ್ತಲೇ ಬಂದರು.ಇದು ತೀವ್ರವಾದಾಗ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ದೂರು ನೀಡಿದ್ದೂ ಆಯಿತು.

     ಹೀಗೆ ತಮಗೆ ದೂರು ಬಂದಾಗಲೆಲ್ಲ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡ ಕೆ.ಸಿ.ವೇಣುಗೋಪಾಲ್ ಅವರಿಂದ ಹಿಡಿದು ಮಾಜಿ ಸಿಎಂ ಸಿದ್ಧರಾಮಯ್ಯ ಅವರ ತನಕ ಎಲ್ಲರ ಬಳಿಯೂ ಮಾತನಾಡುತ್ತಿದ್ದ ರಾಹುಲ್‍ಗಾಂಧಿ, ಯಾವ ಕಾರಣಕ್ಕೂ ಮೈತ್ರಿಕೂಟ ಸರ್ಕಾರಕ್ಕೆ ತೊಂದರೆಯಾಗಕೂಡದು ಎಂದು ಹೇಳುತ್ತಲೇ ಬಂದರು.ಒಂದು ಹಂತದಲ್ಲಿ,ಲೋಕಸಭಾ ಚುನಾವಣೆ ನಮಗೆ ನಿರ್ಣಾಯಕವಾಗಿದ್ದು ಆ ಚುನಾವಣೆ ಪಕ್ಷದ ಭವಿಷ್ಯವನ್ನು ನಿರ್ಧರಿಸಲಿದೆ.ಹೀಗಾಗಿ ನಿಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮರೆತು ಒಗ್ಗೂಡಿ ದುಡಿಯಿರಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೇ ಹೇಳಿದ್ದರು.

     ಹೀಗಾಗಿ ತಮ್ಮ ಬೆಂಬಲಿಗ ಶಾಸಕರು ಪದೇ ಪದೇ ಪಕ್ಷ ಬಿಟ್ಟು ಹೊರಡುವ ಪ್ರಯತ್ನ ಮಾಡಿದರೂ ಬಿಡದ ಮಾಜಿ ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಪಕ್ಷಕ್ಕೆ ವ್ಯತಿರಿಕ್ತವಾದರೆ ಏನು ಮಾಡುತ್ತಾರೆ?ಎನ್ನುವ ಪ್ರಶ್ನೆ ಕಾಡತೊಡಗಿದೆ .ಹಾಗೆಯೇ ಮತದಾನಕ್ಕೆ ಬಳಸಲಾದ ಇವಿಎಂ ಯಂತ್ರಗಳ ವಿರುದ್ಧ ಮಂಗಳವಾರ ದೆಹಲಿಯಲ್ಲಿ ನಡೆದ ಪ್ರತಿಪಕ್ಷಗಳ ಪ್ರತಿಭಟನೆಗೆ ಗೈರು ಹಾಜರಾಗುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೊಸ ಆಟಕ್ಕೆ ಇಳಿಯಬಹುದೇ?ಎಂಬ ಸಂದೇಹ ರಾಜಕೀಯ ವಲಯಗಳನ್ನು ಕಾಡತೊಡಗಿದೆ.

    ಹೀಗೆ ಅಂಗಪಕ್ಷಗಳಲ್ಲಿನ ನಿರಂತರ ಕಚ್ಚಾಟ ಹಾಗೂ ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷ ಬಿಜೆಪಿ ತೋರಿಸುತ್ತಲೇ ಬಂದಿರುವ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಮೇ ಇಪ್ಪತ್ಮೂರರಂದು ಒಂದು ವರ್ಷ ಭರ್ತಿಯಾಗುತ್ತಿದೆ.ಸಹಜವಾಗಿ ಸರ್ಕಾರಕ್ಕೆ ಒಂದು ವರ್ಷ ಭರ್ತಿಯಾದ ಸಂದರ್ಭದಲ್ಲಿ ತನ್ನ ಸಾಧನೆಗಳ ಬಗ್ಗೆ ಅದು ಬಣ್ಣಿಸುವುದು,ಸಮರ್ಥನೆ ಮಾಡಿಕೊಳ್ಳುವುದು ಒಂದು ಸಂಪ್ರದಾಯವೇ ಆಗಿ ಹೋಗಿದ್ದರೂ ಈ ಬಾರಿ ಅಂತಹ ಯಾವ ಸಮರ್ಥನೆ,ಬಣ್ಣನೆಗಳೂ ವ್ಯಕ್ತವಾಗದಿರುವುದು ನಾನಾ ಬಗೆಯ ಸಂಶಯ ಕಾಡುವಂತೆ ಮಾಡಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap