ತುರುವೇಕೆರೆ
ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪರ್ಧಿಸಬೇಕು ಎಂದು ತಾಲ್ಲೂಕು ಜೆಡಿಎಸ್ ಮುಖಂಡರು ಒತ್ತಾಯಿಸಿದ್ದಾರೆ.ಪಟ್ಟಣದ ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಕಚೆರಿಯ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎ.ಬಿ.ಜಗದೀಶ್ ಮಾತನಾಡಿ, ಕಾಂಗ್ರೆಸ್ –ಜೆಡಿಎಸ್ ಮೈತ್ರಿಯಂತೆ ಈಗಾಗಲೇ ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ನೀಡಲಾಗಿದೆ. ಎರಡು ಪಕ್ಷದ ಮುಖಂಡರು, ಕಾರ್ಯಕರ್ತರು ಮೈತ್ರಿ ಧರ್ಮ ಪಾಲಿಸಬೇಕು. ಮಾಜಿ ಪ್ರಧಾನಿಗಳು ತುಮಕೂರಿನಿಂದ ಸ್ಪರ್ಧಿಸುವಂತೆ ಜಿಲ್ಲೆಯ ಮುಖಂಡರು ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಒತ್ತಾಯಿಸಿದ್ದಾರೆ. ದೇವೆಗೌಡರು ಕೂಡಲೆ ತೀರ್ಮಾನಿಸಿ ಸ್ಪರ್ಧೆ ಮಾಡಬೇಕು ಎಂದರು.
ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಗೋಣಿ ತುಮಕೂರು ಲಕ್ಷ್ಮೀಕಾಂತ್ ಮಾತನಾಡಿ, ಜಿಲ್ಲೆಗೆ ಹೆಚ್.ಡಿ.ದೇವೆಗೌಡರ ಕೊಡುಗೆ ಅಪಾರವಾಗಿದೆ. ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದರೆ ಜಿಲ್ಲೆಗೆ ಶೋಭೆ ಬರಲಿದೆ. ತುಮಕೂರು ಜಿಲ್ಲೆ ಹೆಚ್ಚು ಅಭಿವೃದ್ದಿ ಹೊಂದಲಿದೆ. ಹೆಚ್.ಡಿ.ದೇವೆಗೌಡರು ಹಲವು ದೀನ, ದಲಿತರ, ಜನಪರ ಹೋರಾಟ ಮಾಡಿದ್ದಾರೆ.
ತುಮಕೂರು ಜಿಲ್ಲೆಯು ಜೆಡಿಎಸ್‍ನ ಭದ್ರಕೋಟೆಯಾಗಿದೆ. ಅಪಾರ ಕಾರ್ಯಕರ್ತರ ಪಡೆ ಇಲ್ಲಿದೆ. ಮಾಜಿ ಪ್ರಧಾನಿ ಸ್ಪರ್ಧಿಸಿದರೆ ಅವರಿಗೆ ಮತದಾನ ಮಾಡುವಂತಹ ಅದೃಷ್ಟ ನಮಗೆ ಸಿಗಲಿದ್ದು, ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ತುಮಕೂರು ಕೇತ್ರವು ಜೆಡಿಎಸ್ ಪಕ್ಷಕ್ಕೆ ನಿಗದಿಯಾಗಿದೆ. ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಗೊಂದಲ ಮಾಡಬಾರದು ಎಂದು ಮನವಿ ಮಾಡಿದರು .ಗೋಷ್ಠಿಯಲ್ಲಿ ಮುಖಂಡರಾದ ಶರತ್‍ಕುಮಾರ್, ತಾವರೆಕೆರೆ ಮಂಜಣ್ಣ, ಅಬುಕನಹಳ್ಳಿಕುಮಾರ್, ಕುಣೆಕೇನಹಳ್ಳಿ ಕೃಷ್ಣಸ್ವಾಮಿ ಸೇರಿದಂತೆ ಇತರರು ಇದ್ದರು.
