ಚಿಕ್ಕನಾಯಕನಹಳ್ಳಿ
ಹತ್ಯಾಳು ಬೆಟ್ಟದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರ ದರ್ಶನ ಪಡೆದು ಟ್ರ್ಯಾಕ್ಟರ್‍ನಲ್ಲಿ ವಾಪಸ್ ಹಿಂತಿರುಗುವಾಗ ಟ್ರ್ಯಾಕ್ಟರ್ ಮಗುಚಿ 5ಜನ ಮೃತಪಟ್ಟಿದ್ದು, ತಾಲ್ಲೂಕಿನ ಮಾದಾಪುರ, ರಾಮಘಟ್ಟದ ದುಃಖ ತಪ್ತ ಕುಟುಂಬದವರ ಮನೆಗೆ ರಾಜ್ಯ ಸಹಕಾರ ಮಾರಾಟ ಮಂಡಲದ ನಿರ್ದೇಶಕ ಆರ್.ರಾಜೇಂದ್ರ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿಂಗದಹಳ್ಳಿ ರಾಜ್‍ಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ಧನ ಸಹಾಯ ನೀಡಿ ಸಾಂತ್ವಾನ ಹೇಳಿದರು.
ಮೇ11ರಂದು ನರಸಿಂಹಸ್ವಾಮಿ ಬೆಟ್ಟದಲ್ಲಿ ನಡೆದ ಟ್ರ್ಯಾಕ್ಟರ್ ಪಲ್ಟಿಯಾದ್ದರಿಂದ 5 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದು, ಒಂಭತ್ತು ಜನರಿಗೆ ಗಾಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ, ಘಟನೆಯಲ್ಲಿ ಮೃತಪಟ್ಟಿದ್ದ ಮಾದಾಪುರ ಹಾಗೂ ರಾಮಘಟ್ಟದ ಗ್ರಾಮಗಳಿಗೆ ತೆರಳಿ, ಶಂಕರಮ್ಮ(55), ಶಿವಲಿಂಗಯ್ಯ(50), ಶಂಕರಪ್ಪ(60), ನಾಗರಾಜು(43) ಹಾಗೂ ಭುವನ(9) ಇವರುಗಳ ಮನೆಗೆ ಭೇಟಿ ನೀಡಿದ್ದರು.
ಹತ್ಯಾಳು ನರಸಿಂಹಸ್ವಾಮಿ ಬೆಟ್ಟಕ್ಕೆ ಹರಿಸೇವೆ ಸಲ್ಲಿಸಲು ಕುಟುಂಬದವರೊಂದಿಗೆ ತೆರಳಿದ್ದರು. ಹರಿಕೆ ಸೇವೆ ಸಲ್ಲಿಸಿ ವಾಪಸ್ ಹಿಂತಿರುಗುವಾಗ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಮಗುಚಿ ಈ ದುರ್ಘಟನೆ ಸಂಭವಿಸಿತ್ತು. ಈ ಘಟನೆಯಲ್ಲಿ ಗಾಯಗೊಂಡಿದ್ದ ಒಂಭತ್ತು ಜನರು ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ತಂಡ ಗಾಯಾಳುಗಳನ್ನು ತಿಪಟೂರಿನ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಅವರಿಗೆ ಶೀಘ್ರ ಗುಣಮುಖರಾಗುವಂತೆ ಉತ್ತಮ ಚಿಕಿತ್ಸೆ ನೀಡಲು ವೈದ್ಯರೊಂದಿಗೆ ಮಾತನಾಡಿದ ನಂತರ ತಾಲ್ಲೂಕಿನ ಮೃತರ ಕುಟುಂಬಗಳಿಗೆ ಆಗಮಿಸಿದ ಆರ್.ರಾಜೇಂದ್ರ, ಸಿಂಗದಹಳ್ಳಿರಾಜ್‍ಕುಮಾರ್ ದುಃಖತಪ್ತರ ಕುಟುಂಬಗಳಿಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‍ಕುಮಾರ್ ಮಾತನಾಡಿ, ಶಾಸಕ ಜೆ.ಸಿ.ಮಾಧುಸ್ವಾಮಿರವರ ಜೊತೆ ಚರ್ಚಿಸಿದ್ದೇನೆ. ಮೃತಪಟ್ಟ ಕುಟುಂಬದವರಿಗೆ ಆರ್ಥಿಕ ನೆರವು ನೀಡಲು ಸರ್ಕಾರದಲ್ಲಿನ ಲಭ್ಯ ಯೋಜನೆಗಳಲ್ಲಿ ಸೂಕ್ತ ಆರ್ಥಿಕ ನೆರವು ನೀಡುವ ಮೂಲಕ ದುಃಖತಪ್ತ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಲಕ್ಷ್ಮೀನಾರಾಯಣ್, ಹನುಮಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.