ಬೆಂಗಳೂರು
ಕೇಂದ್ರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಜೂನ್ 30ರವರೆಗೆ ಲಾಕ್ ಡೌನ್ ನಿಯಮಗಳನ್ನು ಜಾರಿಗೊಳಿಸಿದ್ದು, ಸೋಮವಾರದಿಂದ ರಾತ್ರಿ 7 ರಿಂದ ಬೆಳಗ್ಗೆ 7 ರ ಬದಲಿಗೆ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂಜಾರಿಗೆ ಬರಲಿದೆ.ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆಯಾಗಲಿದ್ದು, ಈ ಕುರಿತು ಆದೇಶ ಹೊರಡಿಸಲಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುಖ್ಯಸ್ಥರು ಮತ್ತು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಆದೇಶ ಹೊರಡಿಸಿದ್ದು, ಕರ್ಫ್ಯೂ ಅವಧಿ ಸಡಲಿಕೆಯಾಗಲಿದೆ.ಮೊದಲ ಹಂತದಲ್ಲಿ ಜೂನ್ 8ರಿಂದ ಧಾರ್ಮಿಕ ಸ್ಥಳಗಳು, ಹೊಟೇಲ್, ರೆಸ್ಟೋರೆಂಟ್ ಹಾಗೂ ಆತಿಥ್ಯ ಕೇಂದ್ರಗಳು, ಶಾಪಿಂಗ್ ಮಾಲ್ ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಎರಡನೇ ಹಂತದಲ್ಲಿ ಪಾಲಕರು ಮತ್ತಿತರರ ಜತೆ ಸಮಾಲೋಚನೆ ನಡೆಸಿ, ಶಾಲಾ, ಕಾಲೇಜುಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳನ್ನು ತೆರೆಯುವ ಕುರಿತು ಜುಲೈನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆದೇಶ ತಿಳಿಸಿದೆ.
ಮೂರನೇ ಹಂತದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಅಂತಾರಾಷ್ಟ್ರೀಯ ವಿಮಾನ ಸಂಚಾರ, ಮೆಟ್ರೋ ರೈಲು, ಸಿನಿಮಾ ಮಂದಿರಗಳು, ವ್ಯಾಯಾಮ ಶಾಲೆ, ಈಜುಕೊಳ, ಮನರಂಜನಾ ಪಾರ್ಕ್ ಗಳು, ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ.
ಕಂಟೈನ್ಮೆಂಟ್ ವಲಯದಲ್ಲಿ ಜೂನ್ 30ರವರೆಗೆ ಕಠಿಣ ನಿರ್ಬಂಧಗಳು ಮುಂದುವರಿಯಲಿವೆ. ಅಂತರ್ ಜಿಲ್ಲೆ ಮತ್ತು ಅಂತಾರಾಜ್ಯ ಪ್ರಯಾಣಕ್ಕೆ ಯಾವುದೇ ಅನುಮತಿ ಅಥವಾ ಇ-ಪರವಾನಗಿ ಪಡೆಯುವ ಅವಶ್ಯಕತೆ ಇಲ್ಲ ಎಂದು ಆದೇಶ ಸ್ಪಷ್ಟಪಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








