ದಾವಣಗೆರೆ
ಮಹಾನಗರ ಪಾಲಿಕೆಗೆ ಗುರುವಾರ ಧಿಡೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಸಮಯಕ್ಕೆ ಸರಿಯಾಗಿ ಹಾಜರಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟೀಸು ಜಾರಿ ಮಾಡಿರುವುದಲ್ಲದ್ದೇ, ಇನ್ನೂ ಮುಂದೆ ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸದ ಅಧಿಕಾರಿ, ಸಿಬ್ಬಂದಿಗಳ ಒಂದು ದಿನ ವೇತನ ಕಡಿತಗೊಳಿಸಬೇಕೆಂದು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆಯ ಚುನಾವಣಾ ಶಾಖೆಯಲ್ಲಿ ಇ.ವಿ.ಪಿ ಕಾರ್ಯಕ್ರಮದ ಪ್ರಗತಿ ಕಾರ್ಯದಲ್ಲಿ ಹಿನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಪರಿಶೀಲಿಸಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಚುನಾವಣಾ ಶಾಖೆಯ ಶಿರಸ್ತೇದಾರ್, ಚುನಾವಣೆ ಸಿಬ್ಬಂದಿ ವರ್ಗ ಹಾಗೂ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರು ಆಗದಿರುವುದನ್ನು ಗಮನಿಸಿ, ಸ್ಥಳದಲ್ಲಿಯೇ ಚುನಾವಣೆ ಶಿರಸ್ತೇದಾರ್ ಹಾಗೂ ಸಿಬ್ಬಂದಿ ವರ್ಗಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಯಿತು.
ಪಾಲಿಕೆಯಲ್ಲಿ ಇದೇ ರೀತಿ ಕಾರ್ಯನಿರ್ವಹಿಸುತ್ತಿರುವ ಇತರೆ ಸಿಬ್ಬಂದಿವರ್ಗದವರು ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗದೇ ಇರುವವರ ಒಂದು ದಿನದ ವೇತನವನ್ನು ಕಡಿತಗೊಳಿಸುವಂತೆ ಮಹಾನಗರಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಅವರಿಗೆ ಸೂಚಿಸಿದರು.
ಪಾಲಿಕೆಗೆ ಬರುವ ಸಾರ್ವಜನಿಕರ ಮನವಿಗಳ ಕುರಿತು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸ್ಪಂದಿಸಬೇಕೆಂದು ಇದೇ ವೇಳೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಕಂದಾಯ ಅಧಿಕಾರಿ ಗದಿಗೇಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
