ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಅತಂತ್ರ ಸ್ಥಿತಿ : ಪಕ್ಷೇತರರಿಗೆ ಹೆಚ್ಚಿದ ಬೇಡಿಕೆ

ತುಮಕೂರು

ವಿಶೇಷ ವರದಿ:ಸಾ.ಚಿ.ರಾಜಕುಮಾರ

        ಜಿಲ್ಲೆಯ ಎರಡು ಪುರಸಭೆ, ಒಂದು ಪಟ್ಟಣ ಪಂಚಾಯತಿ ಮತ್ತು ಒಂದು ನಗರಸಭೆಗೆ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿದ್ದು, ಜೆಡಿಎಸ್ ಈ ಬಾರಿ ಕೆಲವು ಸ್ಥಾನಗಳನ್ನು ಕಳೆದುಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಕಂಡುಬಂದ ಮೋದಿ ಅಲೆಯಾಗಲಿ, ಬಿಜೆಪಿ ಅಲೆಯಾಗಲಿ ಸ್ಥಳೀಯ ಸಂಸ್ಥೆಗಳಲ್ಲಿ ಕಂಡುಬಂದಿಲ್ಲ.

       ಕುಣಿಗಲ್ ಹಾಗೂ ಪಾವಗಡ ಪುರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟರ ಮಟ್ಟಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅಲ್ಲಿ ಜಯಭೇರಿ ಬಾರಿಸಿದ್ದಾರೆ. ಈಗ ಸಮಸ್ಯೆ ಎದುರಾಗಿರುವುದು ತುರುವೇಕೆರೆ ಪಟ್ಟಣ ಪಂಚಾಯತಿ ಮತ್ತು ತಿಪಟೂರು ನಗರಸಭೆಯಲ್ಲಿ.

ತಿಪಟೂರು

     ತಿಪಟೂರು ನಗರಸಭೆ ಅತಂತ್ರ ಸ್ಥಿತಿಗೆ ಸಿಲುಕಿದೆ. 31 ಸದಸ್ಯ ಬಲದ ನಗರಸಭೆಗೆ 11 ಮಂದಿ ಬಿಜೆಪಿ ಸದಸ್ಯರು ಆರಿಸಿ ಬಂದಿದ್ದಾರೆ. ಈ ಲೆಕ್ಕಾಚಾರಗಳನ್ನು ಪರಿಗಣಿಸಿದರೆ ಮ್ಯಾಜಿಕ್ ನಂಬರ್ 16 ಆಗುತ್ತದೆ. ಶಾಸಕರು ಹಾಗೂ ಸಂಸದರ ಎರಡು ಅಧಿಕಾರ ಪರಿಗಣಿಸಿದರೆ ಸದಸ್ಯ ಬಲ 33 ಆಗುತ್ತದೆ. ಸಹಜವಾಗಿಯೇ ಈ ಬಾರಿ ಇಲ್ಲಿ ಬಿಜೆಪಿ ಶಾಸಕರು ಹಾಗೂ ಸಂಸದರು ಇರುವುದರಿಂದ ಅವರ ಬೆಂಬಲ ಸಿಗುವುದು ನಿಶ್ಚಿತ. ಆದರೂ ಅಧಿಕಾರ ರಚನೆ ಸಾಧ್ಯವಾಗದ ಮಾತು. ಈ ಹಿನ್ನೆಲೆಯಲ್ಲಿ ಪಕ್ಷೇತರರೆ ಇಲ್ಲಿ ಪ್ರಧಾನ ಪಾತ್ರ ವಹಿಸಲಿದ್ದಾರೆ. ಅವರೆ ಕಿಂಗ್ ಮೇಕರ್ ಆಗಲಿದ್ದಾರೆ.

     ಕಳೆದ ಬಾರಿ ಅಂದರೆ 2014ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ, ಕೆಜೆಪಿ ಪಕ್ಷಗಳಿದ್ದವು. ಆಗ ಬಿಜೆಪಿ 11 ಸ್ಥಾನಗಳನ್ನು, ಕೆಜೆಪಿ 7 ಸ್ಥಾನಗಳನ್ನು, ಕಾಂಗ್ರೆಸ್ 7, ಜೆಡಿಎಸ್ 3 ಸ್ಥಾನಗಳನ್ನು ಪಕ್ಷೇತರರು 3 ಸ್ಥಾನಗಳನ್ನು ಪಡೆದಿದ್ದರು. ಕೆಜೆಪಿ ಮತ್ತು ಬಿಜೆಪಿ ಸೇರಿ 18 ಸ್ಥಾನಗಳನ್ನು ಆಗ ಪಡೆದಿದ್ದವು. ಕಾಂಗ್ರೆಸ್ ಈ ಬಾರಿ ಎರಡು ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. ಜೆಡಿಎಸ್ ಕೂಡ 2 ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ.

      ಈ ಬಾರಿ ಗೆಲುವು ಸಾಧಿಸಿರುವ ಪಕ್ಷೇತರರ ಪೈಕಿ ಇಬ್ಬರು ಬಿಜೆಪಿ ಮತ್ತಿಬ್ಬರು ಜೆಡಿಎಸ್ ಬೆಂಬಲಿತರು ಎನ್ನಲಾಗುತ್ತಿದೆ. ಈ ಲೆಕ್ಕಾಚಾರದ ಪ್ರಕಾರ ಎಣಿಕೆ ಮಾಡಿದರೂ ಬಿಜೆಪಿ ಸುಲಭವಾಗಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಹೀಗಾಗಿ ತಿಪಟೂರು ನಗರಸಭೆಯ ಚುಕ್ಕಾಣಿ ಅತ್ಯಂತ ಅತಂತ್ರ ಸ್ಥಿತಿಗೆ ತಲುಪಿದ್ದು, ಪಕ್ಷೇತರರು ಯಾರ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುದರ ಮೇಲೆ ಅಲ್ಲಿನ ಆಡಳಿತ ನಿಂತಿದೆ.

ತುರುವೇಕೆರೆ

ತುರುವೇಕೆರೆ ಪಟ್ಟಣ ಪಂಚಾಯತಿಯಲ್ಲಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಒಟ್ಟು 14 ವಾರ್ಡ್‍ಗಳಿದ್ದು, ಬಿಜೆಪಿ 6 ರಲ್ಲಿ, ಜೆಡಿಎಸ್ 5 ರಲ್ಲಿ, ಕಾಂಗ್ರೆಸ್ 2 ರಲ್ಲಿ ಗೆಲುವು ಸಾಧಿಸಿದ್ದು, ಓರ್ವ ಪಕ್ಷೇತರ ಗೆದ್ದಿದ್ದಾರೆ. ಇದೇ ಮೊದಲ ಬಾರಿಗೆ ಇಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಪಡೆದಿದ್ದು, ಈ ಬಾರಿ ಪಟ್ಟಣ ಪಂಚಾಯತಿಯ ಅಧಿಕಾರ ಹಿಡಿಯುವ ತವಕದಲ್ಲಿದೆ.

    ಆದರೆ ಬಿಜೆಪಿಯ ಕನಸು ಅಷ್ಟು ಸುಲಭವಲ್ಲ. ಇಲ್ಲಿ ಜೆಡಿಎಸ್‍ನ 5 ಮಂದಿ, ಕಾಂಗ್ರೆಸ್‍ನ ಇಬ್ಬರಿದ್ದು, ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವ ಸಾಧ್ಯತೆಗಳೂ ಇವೆ. ಇದೇ ನಿಟ್ಟಿನಲ್ಲಿ ಕಸರತ್ತುಗಳು ನಡೆದಿವೆ. ಕಳೆದ ಬಾರಿ ಇಲ್ಲಿ ಬಿಜೆಪಿ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಕೆಜೆಪಿ ಪಕ್ಷದಿಂದ ಮೂವರು ಜಯ ಗಳಿಸಿದ್ದರು. ನಾಲ್ಕು ಮಂದಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಏಳು ಅಭ್ಯರ್ಥಿಗಳು ಜಯ ಸಾಧಿಸಿದ್ದರು.

      ಈ ಬಾರಿ ಜೆಡಿಎಸ್ ಸ್ಥಾನಗಳು ಇಲ್ಲಿ ಕುಸಿತ ಕಂಡಿವೆ. ಕಾಂಗ್ರೆಸ್ ಸಹ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಅಸ್ತಿತ್ವವೇ ಇಲ್ಲದ ಬಿಜೆಪಿ ಈ ಬಾರಿ ಅಧಿಕ ಸಂಖ್ಯೆಯ ಸ್ಥಾನಗಳನ್ನು ಪಡೆದಿದ್ದರೂ ಸಹ ಆಡಳಿತ ನಿರ್ವಹಣೆ ಮಾಡುವ ಹಂತಕ್ಕೆ ತಲುಪಿಲ್ಲ. ಒಂದು ರೀತಿಯ ಅತಂತ್ರ ಸ್ಥಿತಿ ಇಲ್ಲಿದೆ.

ಕುಣಿಗಲ್

  ಕುಣಿಗಲ್‍ನಲ್ಲಿ ಈ ಬಾರಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಈ ಭಾಗದಲ್ಲಿದ್ದ ಜೆಡಿಎಸ್ ಆಡಳಿತಕ್ಕೆ ಬ್ರೇಕ್ ಹಾಕಿದೆ. ಕಳೆದ ಬಾರಿ ಇಲ್ಲಿ ಡಿ.ನಾಗರಾಜಯ್ಯ ಹಾಗೂ ಎಸ್.ಪಿ.ಮುದ್ದಹನುಮೇಗೌಡ ಅವರ ಬಣಗಳಿದ್ದವು. ಡಿ.ನಾಗರಾಜಯ್ಯ ಬೆಂಬಲಿತ ಅಧಿಕೃತ 7 ಮಂದಿ ಜೆಡಿಎಸ್ ಅಭ್ಯರ್ಥಿಗಳು ಇಲ್ಲಿ ಗೆಲುವು ಸಾಧಿಸಿದ್ದರು. ಅದೇ ರೀತಿ ಜೆಡಿಎಸ್ ಬಂಡಾಯಗಾರರಾಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದ 7 ಮಂದಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನಷ್ಟೇ ಪಡೆದುಕೊಂಡಿತ್ತು. ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರಾದರೂ ಮತ್ತೆ ಆ ಅಭ್ಯರ್ಥಿ ಜೆಡಿಎಸ್‍ಗೆ ಬೆಂಬಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಅವಧಿಯ ಅಧಿಕಾರವನ್ನು ಜೆಡಿಎಸ್ ಹಿಡಿದಿತ್ತು.

     ಬದಲಾದ ರಾಜಕೀಯದಂತೆ ಜೆಡಿಎಸ್‍ನಲ್ಲಿ ಮುದ್ದಹನುಮೇಗೌಡರಿಗೆ ಲೋಕಸಭಾ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಾದ ನಂತರ ಮುದ್ದಹನುಮೇಗೌಡ ಅವರ ಬಣದ ಗುಂಪು ಬಲವರ್ಧನೆಗೆ ಬಂದು ಎರಡನೇ ಅವಧಿಗೆ ಕಾಂಗ್ರೆಸ್ ಅಧಿಕಾರ ನಡೆಸಿತ್ತು. ಈ ಬಾರಿ ಇಲ್ಲಿನ ಶಾಸಕರು ಮತ್ತು ಲೋಕಸಭಾ ಸದಸ್ಯರು ಕಾಂಗ್ರೆಸ್‍ನವರೆ ಆಗಿದ್ದಾರೆ. ಅತ್ಯಧಿಕ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಹೀಗಾಗಿ ಬಹಳ ವರ್ಷಗಳಿಂದ ಜೆಡಿಎಸ್ ತೆಕ್ಕೆಗೆ ಒಳಪಡುತ್ತಿದ್ದ ಅಧಿಕಾರವನ್ನು ಈ ಬಾರಿ ಕಾಂಗ್ರೆಸ್ ಪಡೆದುಕೊಂಡಿದೆ.

     ಮತ್ತೊಂದು ಮಹತ್ವದ ಬೆಳವಣಿಗೆಯೆಂದರೆ ಕುಣಿಗಲ್‍ನಲ್ಲಿ ಗೆದ್ದಿರುವ ಇಬ್ಬರು ಪಕ್ಷೇತರರು ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ಕುಣಿಗಲ್ ಪುರಸಭೆಯಲ್ಲಿ ಅವರ ಅಧಿಕಾರದ ಬಲ 14 ರಿಂದ 16ಕ್ಕೆ ಏರಲಿದೆ.

ಪಾವಗಡ 

    ಇಲ್ಲಿಯೂ ಕಾಂಗ್ರೆಸ್ ಸಾಧನೆ ಗಣನೀಯವಾಗಿದೆ. ಕಳೆದ ಬಾರಿ ಕೇವಲ 10 ಸ್ಥಾನಗಳನ್ನಷ್ಟೇ ಪಡೆದಿದ್ದ ಕಾಂಗ್ರೆಸ್ ಈ ಬಾರಿ ಇಪ್ಪತ್ತು ಸ್ಥಾನಗಳನ್ನು ಪಡೆದುಕೊಂಡು ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾಗಿದೆ. ಆದರೆ ಜೆಡಿಎಸ್ ಇಲ್ಲಿ ಕಳಪೆ ಸಾಧನೆ ಮಾಡಿದೆ. ಕಳೆದ ಬಾರಿ 11 ಸ್ಥಾನಗಳನ್ನು ಪಡೆದುಕೊಂಡಿದ್ದ ಜೆಡಿಎಸ್ ಈ ಬಾರಿ ಕೇವಲ ಎರಡು ಸ್ಥಾನಗಳಿಗಷ್ಟೆ ತೃಪ್ತಿ ಪಟ್ಟುಕೊಂಡಿದೆ.

     ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿಯನ್ನು ಪರಾಜಯಗೊಳಿಸಿ ಬಿಜೆಪಿ ಗೆಲುವು ಸಾಧಿಸಿದೆ. ಮೋದಿಯ ಅಲೆ ಚುನಾವಣೆಯಲ್ಲಿ ಕೆಲಸ ಮಾಡಿತ್ತು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಮನಿಸಿದಾಗ ಮೋದಿ ಅಲೆಯಾಗಲಿ, ಬಿಜೆಪಿ ವರ್ಚಸ್ಸಾಗಲಿ ಕಂಡು ಬರುತ್ತಿಲ್ಲ. ಸ್ಥಳೀಯ ಚುನಾವಣೆಗಳೇ ಬೇರೆ, ಲೋಕಸಭಾ ಚುನಾವಣೆಯೇ ಬೇರೆ ಎಂಬುದನ್ನು ಸ್ಥಳೀಯ ಸಂಸ್ಥೆಗಳು ತೋರಿಸಿಕೊಡುತ್ತಲೆ ಬಂದಿವೆ.     

     ಕುಣಿಗಲ್ ಪುರಸಭೆ ಹಾಗೂ ಪಾವಗಡ ಪುರಸಭೆಯಲ್ಲಿ ಅಧಿಕ ಸಂಖ್ಯೆಯ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ ಆಡಳಿತ ಚುಕ್ಕಾಣಿಯನ್ನು ಹಿಡಿಯಲು ದಾರಿ ಸುಗಮವಾಗಿದೆ. ಆದರೆ ತುರುವೇಕೆರೆ ಪಟ್ಟಣ ಪಂಚಾಯತಿ ಮತ್ತು ತಿಪಟೂರು ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರಿಂದ ಪಕ್ಷೇತರರತ್ತ ಎಲ್ಲರ ಗಮನ ಹರಿದಿದೆ.

ಒಂದು ಮತದಿಂದ ಗೆಲುವು

      “ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಓಟು ಹಾಕಿ ಬರಲು ಕೆಲವರು ಹಿಂದೇಟು ಹಾಕುತ್ತಾರೆ. ಅಯ್ಯೋ ನನ್ನ ಒಂದು ಮತದಿಂದ ಅವರೇನು ಗೆದ್ದು ಬಿಡುತ್ತಾರೆಯೇ ಎಂದು ಹೇಳುವವರಿಗೇನೂ ಕಮ್ಮಿ ಇಲ್ಲ. ಆದರೆ ಒಂದು ಮತದಿಂದಲೇ ಗೆದ್ದು ಶಾಸಕರಾಗಿರುವ ಅನೇಕ ಉದಾಹರಣೆಗಳು ನಮ್ಮಲ್ಲಿವೆ”.

       ಇಂತಹದ್ದೇ ಒಂದು ಪ್ರಸಂಗ ಪಾವಗಡದಲ್ಲಿ ನಡೆದಿದೆ. ಪಾವಗಡದ 9ನೇ ವಾರ್ಡ್‍ನ ಕಾಂಗ್ರೆಸ್ ಅಭ್ಯರ್ಥಿ ಗಂಗಮ್ಮ ಅವರು ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಲ್ಲಿ ಇವರನ್ನು ಬೆಂಬಲಿಸಿದ್ದ ಮತ್ತು ಸಹಕರಿಸಿದ್ದ ಅನೇಕ ಮತದಾರರು ಜೈಕಾರ ಹಾಕುತ್ತಿದ್ದರೆ, ಇವರ ವಿರುದ್ಧ ಒಂದೇ ಮತದಿಂದ ಸೋತ ಡಿ.ಸತ್ಯಭಾಮ ಅವರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

        ಇನ್ನೊಂದು ಮತವನ್ನು ಪಡೆದಿದ್ದರೆ ನಾನೇ ಗೆಲ್ಲಬಹುದಿತ್ತಲ್ಲ ಎಂಬ ಹೇಳಿಕೆಗಳು ಅವರ ಆಪ್ತರ ವಲಯದಲ್ಲಿ ಹರಿದಾಡುತ್ತಿದೆ. ಒಂದೇ ಮತ ಎಂದು ತಾತ್ಸಾರ ಮಾಡುವವರಿಗೆ ಇದು ಎಚ್ಚರಿಕೆಯ ಗಂಟೆಯೂ ಹೌದು. ಮತದಾರರಾದವರು ನನ್ನ ಒಂದು ಓಟು ಯಾವ ಲೆಕ್ಕ ಎನ್ನದೆ ಮತದಾನ ಮಾಡಲೇಬೇಕೆಂಬ ಕರ್ತವ್ಯ ಪ್ರಜ್ಞೆ ಮೂಡಿಸಿಕೊಳ್ಳಲು ಇಂತಹ ಉದಾಹರಣೆಗಳೇ ಸಾಕ್ಷಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link