ದಾವಣಗೆರೆ
ತಂಬಾಕು ಉತ್ಪನ್ನಗಳ ಬಳಕೆ ನಿಯಂತ್ರಣದಲ್ಲಿ ದಂತ ವೈದ್ಯರ ಪಾತ್ರವೂ ಮಹತ್ತರವಾಗಿದ್ದು, ವೈದ್ಯರು ನೀಡುವ ನಿರಂತರ ಸಲಹೆ ಎಷ್ಟೋ ತಂಬಾಕು ವ್ಯಸನಿಗಳ ಮನ ಬದಲಾಯಿಸುವಲ್ಲಿ ಸಹಾಯಕವಾಗುತ್ತದೆ ಎಂದು ಕಾಲೇಜ್ ಆಫ್ ಡೆಂಟಲ್ ಸೈನ್ಸ್‍ನ ಓರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ. ರಾಜೇಶ್ವರಿ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ತಾಲ್ಲೂಕು ವೈದ್ಯಾಧಿಕಾರಿಗಳ ಸಭಾಂಗಣದಲ್ಲಿ ಕೋಟ್ಪಾ-2003 ರ ಕಾಯ್ದೆ ಅನುಷ್ಟಾನದ ಕುರಿತು ಜಿಲ್ಲಾ, ತಾಲ್ಲೂಕು ಮಟ್ಟದ ಅನುಷ್ಟಾನಾಧಿಕಾರಿಗಳಿಗೆ ಇಂದು ಏರ್ಪಡಿಸಲಾಗಿದ್ದ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಂತವೈದ್ಯಳಾಗಿ ಸಾವಿರಾರು ಜನರ ಬಾಯಿಗಳನ್ನು ಪರೀಕ್ಷಿಸಿದ್ದೇನೆ. ಹಲ್ಲುಗಳು ಕೂಡ ಮಾತನಾಡುತ್ತವೆ. ರೋಗಿ ತನಗೆ ದುರಭ್ಯಾಸಗಳಿವೆ ಎಂದು ಹೇಳದಿದ್ದರೂ ದಂತವೈದ್ಯರಿಗೆ ಹಲ್ಲಿನ ಆರೋಗ್ಯದಿಂದ ಅದು ತಿಳಿಯುತ್ತದೆ. ತಂಬಾಕು ಉತ್ಪನ್ನಗಳಿಂದ ಬಾಯಿಯಲ್ಲಿ ಆಗುವ ದುಷ್ಪರಿಣಾಮವನ್ನು ಸರಿಪಡಿಸಲು ಆಗದೇ ಇದ್ದರೂ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹದು. ತಂಬಾಕಿನಿಂದ ಯುವಜನತೆ ಅನುಭವಿಸುತ್ತಿರುವ ದುಷ್ಪರಿಣಾಮದಿಂದ ನಾನೇ ಹತಾಶಳಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇನೆ. ಇದರಿಂದ ಉತ್ತಮ ಪ್ರತಿಕ್ರಿಯೆ ಬಾರದೇ ನಿರಾಶಳಾದರೂ ಈ ಕಾರ್ಯದಿಂದ ಹಿಂದೆ ಸರಿದಿಲ್ಲ ಎಂದರು.
ಯುವಜನತೆಯೇ ಹೆಚ್ಚಾಗಿ ಈ ವ್ಯಸನಕ್ಕೆ ತುತ್ತಾಗಿರುವುದನ್ನು ಕಾಣುತ್ತಿದ್ದೇವೆ. ಬಹುತೇಕ ಯುವಕರು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ, ಗೆಳೆಯರಿಂದ ತಂಬಾಕು ವ್ಯಸನಕ್ಕೆ ಬಿದ್ದಿದ್ದಾಗಿ ತಿಳಿಸುತ್ತಾರೆ. ಅಥವಾ ಒತ್ತಡ, ಕುತೂಹಲಕ್ಕಾಗಿ ಬಳಸಲು ಆರಂಭಿಸಿದ್ದಾಗಿ, ಹೀಗೆ ಅನೇಕ ಕಾರಣಗಳಿಗಳಿಗಾಗಿ ಬಳಕೆ ಆರಂಭಿಸಿರುತ್ತಾರೆ. ನಿಕೋಟಿನ್ ಪ್ರಭಾವದಿಂದ ಹಾಗೂ ಅತಿ ಸುಲಭವಾಗಿ ದೊರೆಯುವುದರಿಂದ ಇದು ಚಟವಾಗಿ ಪರಿವರ್ತನೆ ಹೊಂದಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲು ಆರಂಭಿಸುತ್ತದೆ.
ಒಂದು ಚೂರು ತಂಬಾಕಿನಿಂದ ಶುರುವಾದದ್ದು ಕಡೆಗೆ ದಿನಕ್ಕೆ 60 ರಿಂದ 70 ಪ್ಯಾಕ್ ಗುಟ್ಕಾ ಸೇವಿಸುವವರನ್ನು ನೋಡಿದ್ದೇವೆ. ಬೀಡಿ, ಸಿಗರೇಟ್ ಧೂಮಪಾನಿಗಳಿಗಿಂತ ಅವರ ಸುತ್ತಮುತ್ತಲಿನವರು ಆ ಹೊಗೆ ಕುಡಿಯುವುದರಿಂದ ಶೇ.67 ದುಷ್ಪರಿಣಾಮಕ್ಕೆ ಒಳಗಾಗುತ್ತಾರೆ.
ಧೂಮಪಾನ ಮತ್ತು ಗುಟ್ಕಾ ಸೇವನೆಯಿಂದ ಅನೇಕ ದುಷ್ಪರಿಣಾಮಗಳಿವೆ. ಅವರ ಬಾಯಿ ಸಾಮಾನ್ಯ ಬಾಯಿಯಂತೆ ಇರುವುದಿಲ್ಲ. ಈ ವ್ಯಸನಿಗಳು ಚಿಕ್ಕ ವಯಸ್ಸಿನಲ್ಲೇ ವಯಸ್ಸಾದವರಂತೆ ಕಾಣುತ್ತಾರೆ. ಇವರಲ್ಲಿ ಗ್ಯಾಸ್ ಸಮಸ್ಯೆ, ಮಾನಸಿಕ ಒತ್ತಡ, ಹೃದಯ ಸಂಬಂಧಿಸಿ ಸಮಸ್ಯೆ, ಪ್ಯಾರಲಿಸಿಸ್‍ನಂತರ ರೋಗಗಳು ಕಾಣಬಹುದು. ಹಾಗೂ ಬಾಯಿಯ ಕ್ಯಾನ್ಸರ್‍ಗೆ ಬಹುಬೇಗ ತುತ್ತಾಗುತ್ತಾರೆ. ಈ ವ್ಯಸನ ಚಕ್ರವ್ಯೂಹವಿದ್ದಂತೆ ಒಳ ಹೋಗುವುದು ಸುಲಭ. ಹೊರ ಬರುವುದು ಬಹುಕಷ್ಟ. ಶೇ.5 ರಷ್ಟು ಮಾತ್ರ ವ್ಯಸನಮುಕ್ತರಾಗುತ್ತಿದ್ದಾರೆ .
ತಂಬಾಕು ಬಳಕೆ ನಿಯಂತ್ರಣದ ಕುರಿತು ಸರ್ಕಾರ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ, ತಂಬಾಕು ನಿಷೇಧ ಅನೇಕ ಕಾರಣಗಳಿಂದ ಸಾಧ್ಯವಾಗುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ತಡೆಗಟ್ಟದಿದ್ದರೆ ಮುಂದಿನ ಪೀಳಿಗೆಗೆ ಉತ್ತಮ ಜೀವನ ಸಾಧ್ಯವಿಲ್ಲವೆಂದು ಎಚ್ಚರಿಸಿದೆ. ಈ ನಿಟ್ಟಿನಲ್ಲಿ ಜನರೂ ಎಚ್ಚೆತ್ತುಕೊಳ್ಳಬೇಕು. ವೈದ್ಯರೂ ತಮ್ಮಲ್ಲಿ ಬರುವ ರೋಗಿಗಳಿಗೆ ನಿರಂತರವಾಗಿ ದುಷ್ಪರಿಣಾಮಗಳ ಕುರಿತು ತಿಳಿಸುವ ಮೂಲಕ ಮನವೊಲಿಸುವ ಕಾರ್ಯ ಮಾಡಬೇಕಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಂಗಾಧರ್ ಮಾತನಾಡಿ, ಪರೋಕ್ಷವಾಗಿ ತಂಬಾಕು ನಿಷೇಧದ ಕುರಿತು ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನ ಕಾಯ್ದೆ(ಕೋಟ್ಪಾ)ಯಡಿ ಹೋರಾಟ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 2013 ರಿಂದ ಸಕ್ರಿಯವಾಗಿ ಕೊಟ್ಪಾ ಕಾಯ್ದೆಯಡಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯನ್ನು ಧೂಮಪಾನ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ.
ಈಗ ಅರ್ಧದಷ್ಟು ಈ ಕಾಯ್ದೆ ಅನುಷ್ಟಾನವಾಗಿದೆ. ಪ್ರಸಕ್ತ ಸಾಲಿನಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನೂ ಆರಂಭಿಸಲಾಗಿದ್ದು ಶೇ. 100 ಗುರಿ ತಲುಪುವ ನಿರೀಕ್ಷೆ ಇದೆ. ನಾವು ತಂಬಾಕು ದಾಳಿಗೆ ತೆರಳಿದ ಸಮಯದಲ್ಲಿ ಸಾರ್ವಜನಿಕರು ತಂಬಾಕು ಬಳಕೆ ನಿಷೇಧಿಸುವ ಬದಲು ತಂಬಾಕು ಉತ್ಪನ್ನವನ್ನೇ ನಿಷೇಧಿಸಬಹುದಲ್ಲ ಎಂದು ಹೇಳುತ್ತಾರೆ. ಮಾರಾಟದ ದೃಷ್ಟಿಯಿಂದ ನಿಷೇಧಗೊಳಿಸದಿರುವುದಕ್ಕೆ ಅನೇಕ ಕಾರಣಗಳಿವೆ. ಆದರೆ ತಂಬಾಕು ಉತ್ಪನ್ನಗಳ ಬಳಕೆ ನಿಯಂತ್ರಣದ ಕುರಿತು ಈ ಕಾಯ್ದೆಯಡಿ ಜಾಗೃತಿ ಮತ್ತು ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜರುಗಿಸುವ ಬಗ್ಗೆ ಗಮನ ಹರಿಸಲಾಗುತ್ತಿದ್ದು, ಜಿಲ್ಲೆಯಸಲ್ಲಿ ಕೋಟ್ಪಾ ಅನುಷ್ಟಾನಕ್ಕೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ರಾಘವನ್ ಮಾತನಾಡಿ, ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ತಂಬಾಕು ಬಳಕೆ ಹೆಚ್ಚುತ್ತಿದೆ ಈ ಭಾಗದಲ್ಲೂ ತಂಬಾಕು ದಾಳಿ ಮತ್ತು ಜಾಗೃತಿ ಹೆಚ್ಚಾಗಬೇಕೆಂದರು.
ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜಕ ಮಹಾಂತೇಶ್ ಮಾತನಾಡಿ, ಈ ಕಾಯ್ದೆ ಅನುಷ್ಟಾನಕ್ಕೆ ಬಂದ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಗಮನೀಯವಾಗಿ ಕಡಿಮೆಯಾಗಿದೆ. ಕೋಟ್ಪಾ ಸೆಕ್ಷನ್ 4 ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಕಾಯಿದೆಯ ಸೆಕ್ಷನ್ 6ಎ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರುವುದು ಹಾಗೂ ಮಕ್ಕಳಿಂದ ತಂಬಾಕು ಉತ್ಪನ್ನಗಳ ಮಾರಾಟ ಮಾಡಿಸುವುದನ್ನು ನಿಷೇಧಿಸಲಾಗಿದೆ.
ಸೆಕ್ಷನ್ 6ಬಿ ಅಡಿಯಲ್ಲಿ ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳ 100 ಯಾರ್ಡ್ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ನಿಷೇಧಿಸಲಾಗಿದೆ. ಸೆಕ್ಷನ್ 7 ರಡಿ ತಂಬಾಕು ಉತ್ಪನ್ನಗಳ ಪ್ಯಾಕ್‍ಗಳ ಮೇಲೆ ಎಚ್ಚರಿಕೆ ಚಿನ್ಹೆ ಇಲ್ಲದೆ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದ ಅವರು ಈ ಕಾಯ್ದೆಯನ್ನು ಉಲ್ಲಂಘಿಸಿದರೆ ದಂಡ ಮತ್ತು ಶಿಕ್ಷೆ ಕುರಿತು ಹಾಗೂ ತಂಬಾಕು ಮಾರಾಟ ಸ್ಥಳಗಳಲ್ಲಿ ಮತ್ತು ಶಾಲಾ ಕಾಂಪೌಂಡ್ ಮೇಲೆ ತಂಬಾಕು ನಿಷೇಧದ ಕುರಿತು ಅಳವಡಿಸಬೇಕಾದ ಸೂಚನಾ ಫಲಕಗಳ ಕುರಿತು ವಿವರಿಸಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್ ಪಿಪಿಟಿ ಪ್ರದರ್ಶನ ಮೂಲಕ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಬಳಕೆ ನಿಯಂತ್ರಿಸಲು ಈ ಕಾರ್ಯಕ್ರಮದಡಿ ಹಾಕಿಕೊಳ್ಳಲಾಗಿರುವ ರೂಪುರೇಷೆಗಳ ಕುರಿತು ವಿವರಿಸಿದರು.
ಆರೋಗ್ಯ ನಿರೀಕ್ಷಕರಾದ ಆರ್.ವಿ.ಕುಪಸ್ತ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ವೈದ್ಯಾಧಿಕಾರಿ ಡಾ.ಕೆಂಚಪ್ಪ, ದಾವಣಗೆರೆ ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ ಪಾಟಿಲ್, ಚನ್ನಗಿರಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಭು, ಹರಿಹರ ತಾಲ್ಲೂಕು ವೈದ್ಯಾಧಿಕಾರಿ ಡಾ. ಚಂದ್ರಮೋಹನ್, ವೈದ್ಯಾಧಿಕಾರಿಗಳು, ಎನ್‍ಟಿಸಿಪಿ ಆಪ್ತಸಮಾಲೋಚಕ ದೇವರಾಜ್, ಲೋಕೇಶ್ ಆರೋಗ್ಯ ಇಲಾಖೆ ಮತ್ತು ಮಹಾನಗರಪಾಲಿಕೆಯ ಆರೋಗ್ಯ ನಿರೀಕ್ಷಕರು, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
