ದಾವಣಗೆರೆ:
ಯಾವುದೇ ಕಾರಣಕ್ಕೂ ಅಂಗನವಾಡಿ ಕೇಂದ್ರಗಳ ಖಾಸಗೀಕರಣಕ್ಕೆ ಆಸ್ಪದ ನೀಡಬಾರದು ಎಂದು ಹಿರಿಯ ಸಾಹಿತಿ ರಂಜಾನ್ ದರ್ಗಾ ಕರೆ ನೀಡಿದರು.
ನಗರದ ಕೆ.ಆರ್.ರಸ್ತೆಯ ಗುಲ್‍ಷನ್ ಶಾದಿ ಮಹಲ್‍ನಲ್ಲಿ ಶುಕ್ರವಾರ ಕಕ್ಕರಗೊಳ್ಳದ ಹುಸೇನ್‍ಸಾಬ್ ಸ್ಮರಣಾರ್ಥ ಹುಸೇನಿಯಾ ಫೌಂಡೇಷನ್ ವತಿಯಿಂದ ಏರ್ಪಡಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಒಂದು ದಿನದ ಕಾರ್ಯಾಗಾರ, ತರಬೇತಿ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಉಚಿತ ಉಲ್ಲನ್ ಹೊದಿಕೆ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಗನವಾಡಿಗಳನ್ನು ಖಾಸಗಿಯವರಿಗೆ ಬಿಟ್ಟು ಕೊಡುವುದರಿಂದ ಶೋಷಣೆ ಹೆಚ್ಚಾಗುತ್ತದೆ. ಅಲ್ಲದೆ, ಖಾಸಗೀಕರಣದಿಂದ ದೇಶ ಗುಲಾಮಿಗಿರಿಗೆ ಸಿಲುಕಿ, ದೂರದಿಂದ ಸಾಮ್ರಾಜ್ಯಶಾಹಿ ಆಳುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಅಂಗನವಾಡಿ ಕೇಂದ್ರಗಳು ಖಾಸಗೀಕರಣಗೊಳ್ಳಲು ಬಿಡಬಾರದು ಎಂದು ಕಿವಿಮಾತು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರು ಈಗ ಪಡೆಯುತ್ತಿರುವ ವೇತನದ ಹಿಂದೆ 25 ವರ್ಷಗಳ ಹೋರಾಟದ ಶ್ರಮವಿದೆ. ಯಾವುದೇ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಈ ವೇತನ ಸುಮ್ಮನೆ ಕೊಟ್ಟಿಲ್ಲ. ಈ ವೇತನ ನಿಮ್ಮ ಸಂಘಟಿತ ಹೋರಾಟದ ಫಲವಾಗಿದೆ. ಆದರೂ, ಸಮಾಜ ನಾಚಿಕೆ ಪಡುವಷ್ಟು ನಿಮ್ಮ ಸಂಬಳ ಕಡಿಮೆ ಇದೆ ಎಂದು ವಿಷಾಧ ವ್ಯಕ್ತಪಡಿಸಿದರು.
ನೀವು ನಿಮ್ಮ ಕೆಲಸವನ್ನು ಪ್ರೀತಿಯಿಂದ ಮಾಡಿದಾಗ ಮತ್ತು ನಿಮ್ಮಲ್ಲಿ ಬರುವವರನ್ನು ಕರುಣೆಯಿಂದ ನೋಡಿದಾಗ ಮಾತ್ರ ಕಡಿಮೆ ಸಂಬಳದಲ್ಲೂ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಚಳಿ ಹೆಚ್ಚಾಗಿರುವ ಸಮಯದಲ್ಲಿ ರಗ್ ಕೊಡುತ್ತಿರುವ ಹುಸೇನಿಯಾ ಫೌಂಡೇಷನ್ ಕಾರ್ಯ ಶ್ಲಾಘನೀಯವಾಗಿದೆ. ಕಳೆದ ವರ್ಷವೂ ಫೌಂಡೇಷನ್ ವತಿಯಿಂದ ಪೌರ ಕಾರ್ಮಿಕರಿಗೆ, ರೋಗಿಗಳಿಗೆ ನೆರವು ನೀಡಲಾಗಿತ್ತು. ಶಾಲಾ ಪುಸ್ತಕ ಹಾಗೂ ಬ್ಯಾಗುಗಳನ್ನು ವಿತರಿಸಲಾಗಿತ್ತು. ಹೀಗೆ ದುಡಿದಿದ್ದರಲ್ಲಿ ಒಂದು ಭಾಗವನ್ನು ಧಾನ ಮಾಡುವ ಕೆಲಸ ಇನ್ನೂ ಹೆಚ್ಚೆಚ್ಚು ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಮಾತನಾಡಿ, ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಸ್ವಾತಂತ್ರ್ಯ ನೀಡಿದ್ದರು. ಆದರೆ, ಈಗಿನ ಸರ್ಕಾರ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡುವಲ್ಲಿ ವಿಫಲವಾಗಿದೆ. ಮಹಿಳೆಯರಿಗ ಸ್ವಾತಂತ್ರ್ಯ, ಶಿಕ್ಷಣ ಕೊಡುವುದರ ಜೊತೆಗೆ ಲಿಂಗ ಸಮಾನತೆಯನ್ನು ಕಾಪಾಡಬೇಕಾಗಿದೆ ಎಂದರು.
ಸಾಹಿತಿ ಡಾ.ದಾದಾಪೀರ್ ನವಿಲೇಹಾಳ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಬಡತನ, ಅಪಮಾನ, ಅಪೌಷ್ಠಿಕತೆ, ಶಿಕ್ಷಣದ ಕೊರತೆ ಇದೆ. ಇದನ್ನು ನೀಗಿಸಲು ಕೇಂದ್ರ ಸರ್ಕಾರ 1975ರಲ್ಲಿ ಅಂಗನವಾಡಿ ಕಾರ್ಯಕ್ರಮ ಆರಂಭಿಸಿತು. ಹೀಗಾಗಿ ಸಮಾಜದಲ್ಲಿ ಆರೋಗ್ಯ ಕಾಪಾಡುವುದು ಹಾಗೂ ಅನೌಪಚಾರಿಕ ಶಿಕ್ಷಣ ನೀಡುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತಯರ ಮೇಲಿದೆ ಎಂದು ಹೇಳಿದರು.
ಮಗು ಹುಟ್ಟುವಾಗ ವಿಶ್ವಮಾನವ ಆಗಿರುತ್ತದೆ. ಬೆಳೆಯುವಾಗ ಜಾತಿ, ಧರ್ಮ ಕಲಿತು ಸಂಕುಚಿತವಾಗುತ್ತದೆ. ನಿಮ್ಮ ಬಳಿ ಹತ್ತಾರು ಮಕ್ಕಳು ಬರುತ್ತವೆ. ಅವರನ್ನು ವಿಶ್ವಮಾನವರಾಗಿಯೇ ಉಳಿಸಿ. ತಾಯಿಯ ಅಂತಃಕರಣ, ಕರುಣೆಯ ಮೂಲಕ ಜೀವಂತ ಬೊಂಬೆಯಾಗಿರುವರನ್ನು ಮಕ್ಕಳಾಗಿ ರೂಪಿಸಬೇಕೆಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಮಾತನಾಡಿ, ಮುಸ್ಲಿಂ ಸಮುದಾಯದ ಮಕ್ಕಳು ಮಂಡಕ್ಕಿ ಭಟ್ಟಿ, ಅವಲಕ್ಕಿ ಭಟ್ಟಿ, ವರ್ಕ್‍ಶಾಪ್‍ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹ ಮಕ್ಕಳು ಶಾಲೆಗೆ ಬರಲು ಸಮಾಜದವರು ನೆರವಾಗಬೇಕು. ಜಿಲ್ಲೆಯಲ್ಲಿ ಶೇ.35ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇಂತಹವರಿಗೆ ಜನಿಸುವ ಮಕ್ಕಳೂ ರಕ್ತಹೀನತೆಗೆ ಒಳಗಾಗುತ್ತಾರೆ. ಈ ರಕ್ತಹೀನತೆ ನಿವಾರಣೆಗಾಗಿ ಮಾತೃಪೂರ್ಣ ಯೋಜನೆ ನೆರವಾಗಲಿದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ಸಂಕೋಚವಿಲ್ಲದೇ ಅಂಗನವಾಡಿಗಳಿಗೆ ಬಂದು ಆಹಾರ ಸೇವಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತೋಳಹುಣಸೆ ಎಸ್‍ಪಿಎಸ್‍ಎಸ್ ವಸತಿಯುತ ಶಾಲೆ ನಿರ್ದೇಶಕ ಕೆ.ಇಮಾಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಹೆಚ್.ಐ.ಅಬು ಸುಫಿಯಾನ್, ಪಾಲಿಕೆ ಉಪ ಮೇಯರ್ ಕೆ.ಚಮನ್‍ಸಾಬ್, ಮಿಲ್ಲತ್ ಸಮೂಹ ಸಂಸ್ಥೆಯ ಸೈಯದ್ ಸೈಫುಲ್ಲಾ, ಪಾಲಿಕೆ ಸದಸ್ಯ ಎ.ಬಿ.ರಹೀಂ, ಫೌಂಡೇಷನ್ ಅಧ್ಯಕ್ಷ ಕೆ.ಖಲಂದರ್, ಉಪಾಧ್ಯಕ್ಷ ಖಾದರ್ ಬಾಷಾ ರಜ್ವಿ, ಕಾರ್ಯದರ್ಶಿ ಕೆ.ಜಬೀವುಲ್ಲಾ, ಟ್ರಸ್ಟಿ ರಹಮತ್ ಉಲ್ಲಾ, ದಾದಾಪೀರ್, ಶಾಹೀದ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
