ಸಂಪಾದನೆಯ ಬೆನ್ನು ಬಿದ್ದು ಆರೋಗ್ಯ ಹಾಳು

ದಾವಣಗೆರೆ:

          ನಾಗಾಲೋಟದ ಇಂದಿನ ಯುಗದಲ್ಲಿ ಸಂಪಾದನೆಯ ಬೆನ್ನು ಬಿದ್ದಿರುವ ನಾವುಗಳು ಆರೋಗ್ಯ ಕಳೆದುಕೊಳ್ಳುತ್ತಿದ್ದೇವೆ. ಕಾರಣ ಕೇವಲ ಹಣಗಳಿಕೆಯತ್ತ ಗಮನ ಕೊಡದೇ ಆರೋಗ್ಯದತ್ತ ಗಮನ ಹರಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಕೆ.ಆರ್.ಜಯಶೀಲ ಕರೆ ನೀಡಿದರು.

        ಕರ್ನಾಟಕ ಸರ್ಕಾರ ಆಯುಷ್ ಇಲಾಖೆ, ಬೆಂಗಳೂರು, ಜಿಲ್ಲಾಡಳಿ ಮತ್ತು ಜಿಲ್ಲಾ ಪಂಚಾಯತಿ ದಾವಣಗೆರೆ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಆಯುಷ್ ಆರೋಗ್ಯ ಐಇಸಿ ತರಬೇತಿ ಕಾರ್ಯಕ್ರಮದಡಿ ಹೊನ್ನಾಳಿ ತಾಲೂಕು ಶಾಲಾ ಶಿಕ್ಷಕರಿಗೆ ದಾವಣಗೆರೆ ತಾಲೂಕಿನ ಕಾಡಜ್ಜಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಯೋಗ ಪ್ರಶಿಕ್ಷಣ ಕಾರ್ಯಾಗಾರದ ಉದ್ಘಾಟನೆಯನ್ನು ದೀಪ ಬೆಳಗುವ ಮೂಲಕ ನೆರವೇರಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

        ಸಂಪಾದನೆ ಮಾಡುವ ಭರದಲ್ಲಿ ನಾವುಗಳು ಆರೋಗ್ಯ ಕಳೆದುಕೊಂಡು ಅದಕ್ಕಾಗಿ ಹಣ ವ್ಯಯ ಮಾಡುತ್ತಿದ್ದೇವೆ. ಈ ರೀತಿ ಯೋಗ ತರಬೇತಿ ಪಡೆದರೆ ರೋಗ ಮುಕ್ತರಾಗಬಹುದು. ಕಾರಣ ಇಲ್ಲಿ ತರಬೇತಿ ಪಡೆಯಲು ಆಗಮಿಸಿರುವ ಶಿಕ್ಷಕರು ಉತ್ತಮ ತರಬೇತಿ ಪಡೆದು ಮಕ್ಕಳಿಗೆ ಉತ್ತಮ ಅಭ್ಯಾಸ ಮಾಡುವ ಜೊತೆಗೆ ಉತ್ತಮ ಶಿಕ್ಷಣ ನೀಡಿದರೆ ಅವರ ಭವಿಷ್ಯ ಉಜ್ವಲಗೊಂಡು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳೊಂದಿಗೆ ಪರಸ್ಪರ ಸಮಾಲೋಚಿಸಿ ಭೋಧನೆ ಮಾಡಬೇಕಾಗುತ್ತದೆ. ಅದಕ್ಕೆ ಯೋಗ ಪೂರಕವಾಗಲಿದೆ ಎಂದು ಹೇಳಿದರು.

          ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು.ಸಿದ್ದೇಶ್, ಶಾಲಾ ಶಿಕ್ಷಕರಿಗೆ ಯೋಗ ತರಬೇತಿ ನೀಡುವ ನಿಟ್ಟಿನಲ್ಲಿ ಕಳೆದ ಯೋಗ ಪ್ರಶಿಕ್ಷಣ ಕಾರ್ಯಾಗಾರ 2011 ಮತ್ತು 2012ನೇ ಸಾಲಿನಿಂದಲೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ 5 ತಾಲೂಕುಗಳಲ್ಲಿ ಇಂತಹ ತರಬೇತಿ ನೀಡಲಾಗಿತ್ತು. ಇದೀಗ 6ನೇ ತಾಲೂಕಾಗಿ ಹೊನ್ನಾಳಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಯೋಗದಿಂದ ಕೇವಲ ಶಿಕ್ಷಕರಿಗಷ್ಟೇ ಅಲ್ಲದೇ ಮಕ್ಕಳಿಗೆ ಉತ್ತಮ ಲಾಭವಿದ್ದು, ಕಲಿಕೆಯತ್ತ ಆಸಕ್ತಿ ಮೂಡುತ್ತದೆ. ಇಂತಹ ತರಬೇತಿ ಪಡೆದ ಶಿಕ್ಷಕರು ಮಕ್ಕಳಿಗೆ ಸರಳ ರೀತಿಯಲ್ಲಿ ಯೋಗ ತರಬೇತಿ ನೀಡ ಬಹುದು ಎಂದರು.

        ಭಾರತೀಯ ವೈದ್ಯ ಪದ್ದತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರತ್ಯೇಕ ಇಲಾಖೆ ತೆರೆದಿದೆ. ಈ ನಿಟ್ಟಿನಲ್ಲಿ ನಮ್ಮ ದೇಶಿ ಪದ್ದತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕಿದೆ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ.ಸಿದ್ದೇಶ್ ಈ. ಬಿಸನಳ್ಳಿ, ಡಾ.ಶಂಕರಗೌಡ್, ಡಾ.ಕೆ.ಎಂ.ಪ್ರಭುದೇವ್, ಡಾ.ಲಿಂಗರಾಜೇಂದ್ರ, ಡಾ.ಸಿ.ಕೆ.ಸಾಲಿಮಠ, ಡಾ.ದ್ಯಾವನಗೌಡ್ರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಆಶಾ, ಕೃಷಿ ಅಧಿಕಾರಿ ಸುಮಲತಾ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link