ಮಾಧ್ಯಮಗಳ ಮೇಲೆ ತೀವ್ರ ನಿಗಾವಹಿಸಲು ಎಡಿಸಿ ಸೋಮಶೇಖರ್ ಸೂಚನೆ

0
27

ಬಳ್ಳಾರಿ

      ಬಳ್ಳಾರಿ ಲೋಕಸಭಾ ಉಪಚುನಾವಣೆಯನ್ನು ಅತ್ಯಂತ ಶಾಂತಿಯುತವಾಗಿ ಜರುಗುವ ನಿಟ್ಟಿನಲ್ಲಿ ಮಾಧ್ಯಮ ಕಣ್ಗಾವಲು ಮತ್ತು ಮಾಧ್ಯಮ ಪ್ರಮಾಣೀಕರಣ ಸಮಿತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ನೀತಿ ಸಂಹಿತೆ ಉಲ್ಲಂಘನೆ ಮತ್ತು ಪೇಡ್ ನ್ಯೂಸ್‍ಗಳ ಪ್ರಸಾರ ಕುರಿತಂತೆ ಸಮಿತಿ ಹದ್ದಿನ ಕಣ್ಣೀಡಿ. ಆ ರೀತಿ ಕಂಡುಬಂದ ತಕ್ಷಣ ವರದಿ ನೀಡಿ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಅವರು ಸೂಚನೆ ನೀಡಿದರು.

     ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕಣ್ಗಾವಲು ಮತ್ತು ಮಾಧ್ಯಮ ಪ್ರಮಾಣೀಕರಣ ಸಮಿತಿ(ಎಂಸಿಎಂಸಿ)ಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

      ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧೆಡೆ ಕಂಡುಬರುವ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದು ಕಂಡುಬಂದರೇ ತಕ್ಷಣ ಮಾದರಿ ನೀತಿ ಸಂಹಿತೆ ತಂಡಕ್ಕೆ ವರದಿ ಕೊಡಿ ಎಂದು ಹೇಳಿದರು. ಅಭ್ಯರ್ಥಿಗಳ ಖರ್ಚು-ವೆಚ್ಚಕ್ಕೆ 70 ಲಕ್ಷ ರೂ. ಮೀತಿ ಇರುವ ಹಿನ್ನೆಲೆ ಪೇಯ್ಡ್ ನ್ಯೂಸ್ ರೂಪದಲ್ಲಿ ಅಭ್ಯರ್ಥಿಗಳು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು,ಅದನ್ನು ಸಮಿತಿ ಸದಸ್ಯರು ಪ್ರತಿನಿತ್ಯ ಕುಲಂಕೂಷವಾಗಿ ಪರಿಶೀಲಿಸಿ ವರದಿ ಕೊಡಬೇಕು ಎಂದರು.

      ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವುದಕ್ಕೆ ಸಮಿತಿ ಅನುಮತಿ ಕಡ್ಡಾಯವಾಗಿದ್ದು, ಅಭ್ಯರ್ಥಿಗಳು ನೀಡಿದ ಜಾಹೀರಾತುಗಳಲ್ಲಿನ ಅಂಶಗಳನ್ನು ಪರಿಶೀಲಿಸಿ ಪ್ರಕಟಿಸುವುದಕ್ಕೆ ಯೋಗ್ಯವಾಗಿದೆ ಎಂದು ತೀರ್ಮಾನಿಸಿದರೇ ಮಾತ್ರ ಅನುಮತಿ ಕೊಡಿ;ಇಲ್ಲದಿದ್ದಲ್ಲಿ ಯೋಗ್ಯವಾಗಿಲ್ಲ ಎಂದು ಹಿಂಬರಹ ನೀಡಿ; ಪ್ರಮಾಣೀಕರಣ ಮಾತ್ರ ಶೀಘ್ರವಾಗಿ ನೀಡುವ ವ್ಯವಸ್ಥೆ ಮಾಡುವಂತೆ ಎಂಸಿಎಂಸಿ ನೋಡಲ್ ಅಧಿಕಾರಿ ಬಿ.ಕೆ.ರಾಮಲಿಂಗಪ್ಪ ಅವರಿಗೆ ಸೂಚನೆ ನೀಡಿದರು.

        ನಂತರ ಅವರು ದೂರು ನಿರ್ವಹಣಾ ಕೋಶಕ್ಕೂ ಭೇಟಿ ನೀಡಿ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಮೇಶ ಕೊನಪ್ಪರೆಡ್ಡಿ, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಜಪ್ಪ, ದೂರು ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ಜುಬೇರ್ ಸೇರಿದಂತೆ ಅನೇಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here