ಕೋವಿಡ್ ಸಾವು ಹಿನ್ನೆಲೆ ಬಳ್ಳಾರಿಗೊಂದು ವಿದ್ಯುತ್ ಚಿತಾಗಾರ: ಸಚಿವ

ಬಳ್ಳಾರಿ

     ಕೋವಿಡ್‍ನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆ ನೆರವೇರಿಸಲು ಬೆಂಗಳೂರಿನಲ್ಲಿ ನಾಲ್ಕು ಕಡೆ ವಿದ್ಯುತ್ ಚಿತಾಗಾರ ಒದಗಿಸಲಾಗುತ್ತಿದ್ದು, ಅದೇ ರೀತಿ ಬಳ್ಳಾರಿಯಲ್ಲಿಯೂ ಹೆಚ್ಚಿನ ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿಗೊಂದು ವಿದ್ಯುತ್ ಚಿತಾಗಾರ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದರು.

     ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಬಳ್ಳಾರಿಯ ಗುಗ್ಗರಹಟ್ಟಿ ಅಥವಾ ಅವಶ್ಯವಿರುವೆಡೆ ಈ ವಿದ್ಯುತ್ ಚಿತಾಗಾರದ ವ್ಯವಸ್ಥೆ ಮಾಡಿ;ಆ ಮೂಲಕ ಕೋವಿಡ್‍ನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆ ನೆರವೇರಿಸಿ ಎಂದರು.

ಇನ್ಮುಂದೆ ಹಾಗಾಗದಂತೆ ನೋಡಿಕೊಳ್ಳಿ:

      ಅಮಾನವೀಯ ರೀತಿಯಲ್ಲಿ ಶವಸಂಸ್ಕಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಶವಸಂಸ್ಕಾರಕ್ಕೆ ಸಂಬಂಧಿಸಿದಂತೆ ಇನ್ಮುಂದೆ ಆಗಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು. ಶವಸಂಸ್ಕಾರದ ಸಮಯದಲ್ಲಿ ಸಿಬ್ಬಂದಿಗಳು ಯಾವುದೇ ರೀತಿಯ ಮೊಬೈಲ್ ಹಾಗೂ ವಿಡಿಯೋ ಸಂಗ್ರಹರೂಪದ ಡಿವೈಸ್‍ಗಳು ತೆಗೆದುಕೊಂಡು ಹೋಗದಂತೆ ಸೂಚನೆ ನೀಡಿದರು.

      30 ನಿಮಿಷಗಳಲ್ಲಿ ತಕ್ಷಣ ವರದಿ ನೀಡುವ 10 ಸಾವಿರ ಆಂಟಿಜೇನ್ ಕಿಟ್‍ಗಳನ್ನು ಬಳ್ಳಾರಿ ಜಿಲ್ಲಾಡಳಿತ ಖರೀದಿಸಿ ಈಗಾಗಲೇ ತಪಾಸಣೆ ಶುರು ಮಾಡಿದ್ದು, ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸಚಿವ ಶ್ರೀರಾಮುಲು ಅವರ ಗಮನಕ್ಕೆ ತಂದರು. ಇಡೀ ರಾಜ್ಯದಲ್ಲಿ ಬಳ್ಳಾರಿಯೇ ಈ ರೀತಿಯ ಆಂಟಿಜೇನ್ ಕಿಟ್‍ಗಳನ್ನು ಖರೀದಿಸಿ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷಿಸಲು ಮುಂದಾಗಿರುವುದು ಸಂತೋಷದ ವಿಷಯ; ಈ ರೀತಿಯ ತತ್‍ಕ್ಷಣ ವರದಿ ನೀಡುವ ಕಿಟ್‍ನಿಂದ ಶೀಘ್ರದಲ್ಲಿ ರೋಗಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದರು.

ಇಡೀ ಜಿಲ್ಲೆಗೆ ಮನೆ-ಮನೆ ಭೇಟಿ ಸಮೀಕ್ಷೆ ವಿಸ್ತರಿಸಿ:

     ಪಲ್ಸ್ ಅಕ್ಸಿಮೀಟರ್ ಮೂಲಕ ತಪಾಸಣೆ ಮಾಡಿ: ಸಂಡೂರು ತಾಲೂಕಿನಲ್ಲಿ ಆರೋಗ್ಯ ಸುರಕ್ಷಾ ಅಭಿಯಾನದಡಿ ಆಶಾ ಕಾರ್ಯಕರ್ತೆಯರ ಮೂಲಕ ಮನೆ-ಮನೆ ಭೇಟಿ ನಡೆಸಿ 60 ವರ್ಷ ಮೇಲ್ಪಟ್ಟವರಿಗೆ, 15 ವರ್ಷದೊಳಗಿನ ಮಕ್ಕಳಿಗೆ ಹಾಗೂ ದೀರ್ಘಕಾಯಿಲೆಗಳಿಂದ ಬಳಲುತ್ತಿರುವವರನ್ನು ಪಲ್ಸ್ ಆಕ್ಸಿಮಿಟರ್ ಮೂಲಕ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆ ಸಂದರ್ಭದಲ್ಲಿ ಆಕ್ಸಿಜನ್ ಪ್ರಮಾಣ 94ಕ್ಕಿಂತಲೂ ಕಡಿಮೆಯಿದ್ದಲ್ಲಿ ಅಂಥವರ ಸ್ವ್ಯಾಬ್ ತೆಗೆದು ಅವರನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಕುಲ್ ಅವರು ಸಚಿವರಿಗೆ ವಿವರಿಸಿದರು.

       ಈಗಾಗಲೇ ಸಂಡೂರು ತಾಲೂಕಿನಲ್ಲಿ 225 ಪಲ್ಸ್ ಆಕ್ಸಿಮಿಟರ್‍ಗಳನ್ನು ವಿತರಿಸಿ ಮನೆ-ಮನೆ ಭೇಟಿ ಶುರು ಮಾಡಲಾಗಿದೆ ಎಂದರು.
ಸಚಿವರು ಇದನ್ನು ಆಲಿಸಿ ಇಡೀ ಜಿಲ್ಲೆಯಾದ್ಯಂತ ಈ ಮನೆ-ಮನೆ ಭೇಟಿ ವಿಸ್ತರಿಸಿ ಪಲ್ಸ್ ಅಕ್ಸಿಮೀಟರ್ ಮೂಲಕ ತಪಾಸಣೆ ಮಾಡಿ,ಆಕ್ಸಿಜನ್ ಪ್ರಮಾಣ ಕಡಿಮೆಯಿದ್ದಲ್ಲಿ ತಕ್ಷಣ ಕೋವಿಡ್ ಟೆಸ್ಟ್ ಮಾಡಿಸಬೇಕು ಎಂದು ಅವರು ಸೂಚಿಸಿದರು.

ಲಕ್ಷಣವಿಲ್ಲದ ರೋಗಿಗಳಿಗೆ ಹೋಮ್ ಕ್ವಾರಂಟೈನ್:

     ಲಕ್ಷಣವಿಲ್ಲದ ರೋಗಿಗಳಿಗೆ ಹೋಂ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ಹೋಂ ಕ್ವಾರಂಟೈನ್ ಮಾಡುವುದಕ್ಕಿಂತ ಮುಂಚೆ ನಮ್ಮ ತಂಡವು ಆ ಲಕ್ಷಣವಿಲ್ಲದ ರೋಗಿಯ ಮನೆಗೆ ತೆರಳಿ ಪರಿಶೀಲನೆ ನಡೆಸಲಿದೆ; ಅವರು ಇರುವುದಕ್ಕೆ ಸಮರ್ಪಕ ಸೌಕರ್ಯವಿದ್ದಲ್ಲಿ ಮಾತ್ರ ಅಲ್ಲಿರುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲದಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರಿಸಲಾಗುವುದು ಎಂದು ಸಚಿವ ಬಿ.ಶ್ರೀರಾಮುಲು ಅವರು ವಿವರಿಸಿದರು. ಬಳ್ಳಾರಿಯಲ್ಲಿ ಈ ಪ್ರಮಾಣದಲ್ಲಿ ಸಾವುಗಳು ಹೆಚ್ಚಾಗುತ್ತಿರುವುದೇತಕ್ಕೆ ಎಂದು ಸಚಿವ ಶ್ರೀರಾಮುಲು ಪ್ರಶ್ನಿಸಿದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ನಕುಲ್ ಅವರು ಬಳ್ಳಾರಿಯಲ್ಲಿ ಇದುವರೆಗೆ 1118 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‍ನಿಂದ ಸಾವನ್ನಪ್ಪಿದ 33 ಪ್ರಕರಣಗಳು ಕುರಿತು ಪ್ರತಿರೋಗಿಗಳ ಬಗ್ಗೆಯೂ ಮಾಹಿತಿ ನೀಡಿದರು. ಅವುಗಳಲ್ಲಿ 8 ಡಯಾಲಿಸಿಸ್, 3 ಹೃದಯ ಸಂಬಂಧಿತ ಹಾಗೂ ಇನ್ನೂಳಿದವುಗಳು ವಿವಿಧ ದೀರ್ಘಕಾಯಿಲೆಗಳಿಂದ ಬಳಲುತ್ತಿದ್ದರು ಎಂದರು.

     ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬಂದ ಕಾರಣ ಈ ಪ್ರಮಾಣದಲ್ಲಿ ಸಾವನ್ನಪ್ಪಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಆಗಮಿಸಿದ ನುರಿತ ವೈದ್ಯರ ತಂಡ ಕೂಡ ಪರಿಶೀಲಿಸಿ ಇದೇ ರೀತಿ ತಿಳಿಸಿದೆ ಎಂದರು.

12 ಕೋಟಿ ರೂ.ವೆಚ್ಚದಲ್ಲಿ ವಿಮ್ಸ್ ಅಪರೇಶನ್ ಥೀಯಟೇರ್ ಕಾಮಗಾರಿ:

    ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ವಿಮ್ಸ್‍ನ ಅಪರೇಶನ್ ಥಿಯಟೇರ್ ಕೆಲಸವನ್ನು ಜಿಲ್ಲಾ ಖನಿಜ ನಿಧಿ ಅಡಿ 12 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು. ವೈದ್ಯರು ಹಾಗೂ ಅಧಿಕಾರಿಗಳ ಅಹವಾಲುಗಳನ್ನು ಆಲಿಸಿ ಕೋವಿಡ್‍ನಂತ ಸಂದರ್ಭದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸಲ್ಲಿಸುತ್ತಿರುವ ಸೇವೆ ಅಮೋಘವಾಗಿದೆ. ಸರಕಾರ ತಮ್ಮೊಂದಿಗಿದ್ದು, ಅತ್ಯಂತ ಆತ್ಮಸ್ಥೈರ್ಯದಿಂದ ಕೆಲಸ ನಿರ್ವಹಿಸಿ ಎಂದರು.

    ಜಿಂದಾಲ್ ತನ್ನ ಸಿಬ್ಬಂದಿಯ ಕೋವಿಡ್ ತಪಾಸಣೆಗೆ ಸಂಬಂಧಿಸಿದಂತೆ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡ ಟೆಸ್ಟ್ ಮಾಡಿಸುತ್ತಿದೆ. ವರದಿ ಪಾಸಿಟಿವ್ ಬಂದಲ್ಲಿ ಅಂತ ಸೊಂಕಿತರನ್ನು ಅವರೇ ತಮ್ಮಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ. ಗಂಭೀರ ಪ್ರಕರಣಗಳಿದ್ದಲ್ಲಿ ಮಾತ್ರ ಜಿಲ್ಲಾಡಳಿತಕ್ಕೆ ಗಮನಕ್ಕೆ ತಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ್, ವಿಮ್ಸ್ ನಿರ್ದೇಶಕ ಡಾ.ದೇವಾನಂದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link