ಮತ್ತೆ ಕಲ್ಯಾಣ : ಮನೆ-ಮಠಗಳು ಅನುಭವ ಮಂಟಪವಾಗಲಿ: ಸಾಣೆಹಳ್ಳಿ ಶ್ರೀ

ತುಮಕೂರು
     `ನಮ್ಮ ಮನೆಗಳು- ಮಠಗಳು ಶರಣರ ಕಾಲದ ಅನುಭವ ಮಂಟಪದಂತಾಗಬೇಕು, ಮಹಾಮನೆಯಾಗಬೇಕು’ ಎಂಬ ಆಶಯವನ್ನು ಸಾಣೆಹಳ್ಳಿ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ವ್ಯಕ್ತಪಡಿಸಿದರು.
      ಅವರು ಬುಧವಾರ ಬೆಳಗ್ಗೆ ತುಮಕೂರು ನಗರದ ವಿನಾಯಕ ನಗರದಲ್ಲಿರುವ ಸಿದ್ಧಿವಿನಾಯಕ ಕಲ್ಯಾಣ ಮಂಟಪದಲ್ಲಿ ಜಿಲ್ಲಾ `ಸಹಮತ ವೇದಿಕೆ’ ವತಿಯಿಂದ ಏರ್ಪಟ್ಟಿದ್ದ “ಮತ್ತೆ ಕಲ್ಯಾಣ” ಕಾರ್ಯಕ್ರಮದಲ್ಲಿ “ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆದ ಮುಕ್ತ ಸಂವಾದ”ದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
     `ಬಹುದೊಡ್ಡ ಬಂಗಲೆ ಕಟ್ಟುವುದರಿಂದ, ದೊಡ್ಡ ಕಾರು ಇರುವುದರಿಂದ, ರಸ್ತೆಗಳನ್ನು ನಿರ್ಮಿಸುವುದರಿಂದ ಮನುಷ್ಯನ ವ್ಯಕ್ತಿತ್ವ ಬೆಳೆಯುವುದಿಲ್ಲ. ಸತ್ಯ, ನ್ಯಾಯ, ಅಹಿಂಸೆ, ಪ್ರೀತಿ ನಮ್ಮ ಹೃದಯದಲ್ಲಿ ವಿಕಸನಗೊಂಡರೆ ವ್ಯಕ್ತಿತ್ವ ಬೆಳೆಯುತ್ತದೆ. ದೊಡ್ಡ ಮನೆಯನ್ನು ಹೊಂದಿರುವವ ಶ್ರೀಮಂತನೆನಿಸಿಕೊಂಡರೂ, ಮನಸ್ಸಿನಿಂದ ಆತ ಬಡವ ನಾಗಿರುತ್ತಾನೆ . ಆದರೆ ಬಡವನ ಮನೆ ಚಿಕ್ಕದಿದ್ದರೂ, ಹೃದಯ ವೈಶಾಲ್ಯತೆಯಿಂದ ಆತ ಶ್ರೀಮಂತನೆನಿಸುತ್ತಾನೆ.
 
      ಶ್ರೀಮಂತರ ಮನೆಯ ಮುಂದೆ `ನಾಯಿಗಳಿವೆ ಎಚ್ಚರಿಕೆ’ ಎಂಬ Àಲಕವಿರುತ್ತದೆ. ಆದರೆ ಆ ಎಚ್ಚರಿಕೆಯು ನಾಲ್ಕು ಕಾಲಿನ ನಾಯಿಯ ಕಾರಣದಿಂದಲ್ಲ, ಆ ಮನೆಯಲ್ಲಿರುವ ಎರಡು ಕಾಲಿನ ನಾಯಿಯ ಬಗ್ಗೆ ಎಂಬ ಭವನೆಯೇ ಬರುತ್ತದೆ’ ಎಂದು ಅವರು ಹೇಳಿದಾಗ ಸಭಾಂಗಣದಲ್ಲಿದ್ದ ವಿದ್ಯಾರ್ಥಿ ಸಮುದಾಯದಿಂದ ಭಾರಿ ಕರತಾಡನ ವ್ಯಕ್ತವಾಯಿತು. 
       ಮತ್ತೆ ಮಾತು ಮುಂದುವರೆಸುತ್ತ ಶ್ರೀಗಳು `ನಮ್ಮ ಮನೆಗಳು- ಮಠಗಳು ಶರಣರ ಕಾಲದ ಅನುಭವ ಮಂಟಪದಂತಾಗಬೇಕು, ಮಹಾಮನೆಯಾಗಬೇಕು. ನಾವೇ ದೇವರಾಗುವ ಬಗೆಯನ್ನು ಅರಿಯಬೇಕು. ಕೆಲವೆಡೆ ದೇವರಗಳ ಮ್ಯೂಸಿಯಂ ಇದ್ದು, ಅದರ ಫಲ ಶೂನ್ಯವಾಗಿರುತ್ತದೆ. ಅದೇ ಕಾರಣದಿಂದ ಶರಣರು ನಮ್ಮ ಅರಿವನ್ನು ವಿಸ್ತರಿಸುವ, ಅಜ್ಞಾನವನ್ನು ಕಳೆಯುವ ಕೆಲಸ ಮಾಡಿದರು. ಕಾಯಕ, ದಾಸೋಹ, ಇಷ್ಟಲಿಂಗಪೂಜೆ, ಸಮಾನತೆ, ಕರುಣೆ, ಪ್ರೀತಿಯನ್ನು ಸಾರಿದರು.
 
      ಇಂದಿನ ವಿದ್ಯಾರ್ಥಿಗಳು ಇದನ್ನು ಅರಿಯಬೇಕು. ಇಂದಿನ ವಿದ್ಯಾರ್ಥಿಗಳಲ್ಲಿ ಶರಣ ತತ್ವವನ್ನು ಬೆಳೆಸಬೇಕು. `Áವಿ ಪೀಳಿಗೆಯಾದ ವಿದ್ಯಾರ್ಥಿ ಸಮುದಾಯ ಇದನ್ನು ಅರಿತರೆ ಸಮಾಜಕ್ಕೆ ಅದರ ಸತ್ಫಲ ದೊರಕುತ್ತದೆ. ಆದ ಕಾರಣವೇ ವಿದ್ಯಾರ್ಥಿ ಸಮುದಾಯವನ್ನೂ ಈ ಕಾರ್ಯಕ್ರಮದಲ್ಲಿ ಗುರಿಯನ್ನಾಗಿ ಇರಿಸಿಕೊಳ್ಳಲಾಗಿದೆ’ ಎಂದು  ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
      `ದೇವರು ಹೊರಗಡೆ ಎಲ್ಲೋ ಇಲ್ಲ. ದೇವರು ಎಂಬುದು ನಮ್ಮೊಳಗಿರುವ ಒಂದು ಚೈತನ್ಯ. ಆದರೆ ನಾವು ಇದನ್ನು ಅರಿಯದೆ ನಮ್ಮ ಅಂತರಂಗವನ್ನು ಕತ್ತಲು ಮಾಡಿಕೊಂಡಿದ್ದೇವೆ’ ಎಂದು ವಿಷಾದಿಸಿದರು.
ನರಿಬುದ್ಧಿಯುಳ್ಳವರು 
   `ಮಾನವನ ಪರಮಶತ್ರು ಅಜ್ಞಾನ. ಮಾನವನ ಬಹುದೊಡ್ಡ ಸ್ವತ್ತು ಎಂದರೆ ಜ್ಞಾನ. ಇದರಿಂದ ಎಲ್ಲವನ್ನೂ ಸಾಧಿಸಲು ಆಗುತ್ತದೆ. ದುರ್ದೈವವೆಂದರೆ ಇಂತಹ ಸುಜ್ಞಾನಿಗಳಾಗಲು ನಾವು ಯತ್ನಿಸುತ್ತಿಲ್ಲ’ ಎಂದು ಹೇಳಿದ ಶ್ರೀಗಳು, `ದೊಡ್ಡ ದೊಡ್ಡ ಪದವೀಧರರು ಜ್ಞಾನಿಗಳಲ್ಲವೇ ಎಂದು ಈಗಿನ ವಿದ್ಯಾರ್ಥಿಗಳು ಪ್ರಶ್ನಿಸಬಹುದು. ಆದರೆ ಇಂಥವರು ಕೇವಲ ಬುದ್ಧಿವಂತರೇ ವಿನಃ, ಜ್ಞಾನಿಗಳಲ್ಲ. ಇಂಥವರಲ್ಲಿ ನರಿಬುದ್ಧಿ ಇರುತ್ತದೆ. ಇಂಥವರಿಂದಲೇ ವಂಚನೆ ಆಗುತ್ತದೆ. ಆದರೆ ಮನುಷ್ಯ ವಿವೇಕವಂತನಾದರೆ ಆತ ಎಂದೂ ವಂಚಕನಾಗಲಾರ’ ಎಂದರು.
    `ಮನುಷ್ಯನಿಗೆ ಔದ್ಯೋಗಿಕ, ವ್ಯಾವಹಾರಿಕ ಮತ್ತು ಆಧ್ಯಾತ್ಮಕ ಶಿಕ್ಷಣದ ಅವಶ್ಯಕತೆ ಇದೆ. ಆದರೆ ಇಂತಹ ಶಿಕ್ಷಣ ಶಾಲಾ ಕಾಲೇಜಿನಲ್ಲಿ ಲಭ್ಯವಾಗುತ್ತಿಲ್ಲ. ದೈಹಿಕ ಬೆಳವಣಿಗೆಯ ಜೊತೆಗೆ ಬೌದ್ಧಿಕ ವಿಕಾಸವೂ ಆಗಬೇಕು. ಆದರೆ ಅದರಿಂದಲೇ ಪ್ರಯೋಜನವಾಗದು. ಕೇವಲ ಬೌದ್ಧಿಕವಾಗಿ ಬೆಳೆದವರು ಭ್ರಷ್ಟರಾಗುತ್ತಿದ್ದಾರೆ. ಇಂಥವರಿಂದ ಅನೇಕ ಬಗೆಯ ಅವಾಂತರಗಳಾಗುತ್ತಿವೆ. ಇಂಥವರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ನೈತಿಕ ನೆಲೆಗಟ್ಟಿನ ಮೇಲೆ ಮನುಷ್ಯ ಬೆಳೆಯಬೇಕು. ಅದನ್ನೇ ಶರಣರ ತತ್ವಗಳಲ್ಲಿ ಸಾರಲಾಗಿದೆ. ಅದನ್ನಿಂದು ಎಲ್ಲ ಹಂತಗಳಲ್ಲಿ ಅಳವಡಿಸಿಕೊಳ್ಳಬೇಕು` ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
     ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ  ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಸಹಮತ ವೇದಿಕೆಯ ಅಧ್ಯಕ್ಷ ಟಿ.ಬಿ.ಶೇಖರ್, ವಿಶ್ರಾಂತ ಪ್ರಾಧ್ಯಾಪಕ ಎಚ್.ವಿ.ವೀರಭದ್ರಯ್ಯ, ತುಮಕೂರು ವಿ.ವಿ. ಪ್ರಾಧ್ಯಾಪಕ ನಾಗಭೂಷಣ ಬಗ್ಗನಡು, ಭೂಮಿ ಬಳಗದ ಅಧ್ಯಯಕ್ಷ ಜಿ.ಎಸ್.ಸೋಮಶೇಖರ್, ಸಹಮತ ವೇದಿಕೆಯ ಜಿಲ್ಲಾ ಸಂಯೋಜಕ ಎನ್.ಅನಂತ ನಾಯಕ್, ಚಿಕ್ಕತೊಟ್ಲು ಕೆರೆಯ ಶ್ರೀ ಅಟವಿ ಶಿವಲಿಂಗ ಸ್ವಾಮಿಗಳು ಮೊದಲಾದವರು ವೇದಿಕೆಯಲ್ಲಿ ಆಸೀನರಾಗಿದ್ದರು. ವೇದಿಕೆಯ ಮುಂಭಾಗ ಸಭಿಕರ ನಡುವೆ ತಿಪಟೂರು ಶಾಸಕ ಬಿ.ಸಿ.ನಾಗೇಶ್, ಖ್ಯಾತ ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap