ಫ್ಯಾಸಿಸ್ಟ್ ಶಕ್ತಿಗಳು ವೈವಿಧ್ಯತೆಯನ್ನು ಸಹಿಸುವುದಿಲ್ಲ

ತುಮಕೂರು

     ದೇಶದಲ್ಲಿ ಇಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ. ಸತ್ಯವನ್ನು ಹೇಳಲು ಕಷ್ಟವಾಗುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಸವಾಲುಗಳು ಎದುರಾಗಿವೆ. ಫ್ಯಾಸಿಸ್ಟ್ ಶಕ್ತಿಗಳು ದೇಶವನ್ನು ಆಳ್ವಕೆ ಮಾಡುತ್ತಿದ್ದು, ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ. ಬಿಜೆಪಿ ಮತ್ತು ಸಂಘಪರಿವಾರ ತಮ್ಮ ಶತ್ರುಗಳು ಯಾರು ಎಂಬುದನ್ನು ಗುರುತಿಸಿಕೊಂಡಿದ್ದಾರೆ. ಪ್ರಗತಿಪರರ ಮೇಲೆ ಯುದ್ದವನ್ನು ಆರಂಭಿಸಿದ್ದಾರೆ. ಸರ್ಕಾರದ ನೀತಿಗಳನ್ನು ಪ್ರಶ್ನಿಸುವವರು ಮತ್ತು ಪ್ರತಿಭಟಿಸುವವರನ್ನು ದೇಶದ್ರೋಹಿಗಳೆಂದು ತೀರ್ಮಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

     ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ನಡೆದ ರಾಜ್ಯ ಮಟ್ಟದ ಯುವ ಬರಹಗಾರರ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಗತಿಪರ ಬರಹಗಾರರು ಪರಂಪರೆಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಲೇ ಬರುತ್ತಿದ್ದಾರೆ. ಅವರು ಪರಂಪರೆಯನ್ನು ತಿರಸ್ಕರಿಸಿಲ್ಲ. ಸತ್ಯವನ್ನು ಹೇಳಿದ್ದಾರೆ. ಚಾರ್ವಾಕನನ್ನು ಕೊಂದುಹಾಕಿದರು.

     ವಿಚಾರ ಭಿನ್ನತೆ ಕಾರಣಕ್ಕಾಗಿ ಗೋವಿಂದ ಪನ್ಸಾರೆ, ಎಂ.ಎಂ. ಕಲ್ಬುರ್ಗಿ, ಹಿರಿಯ ಪತ್ರಕರ್ತೆ ಗೌರಿಲಂಕೇಶ್ ಅವರನ್ನು ಹತ್ಯೆ ಮಾಡಿದರು. ಸಂಘಪರಿವಾರ ಮತ್ತು ಬಿಜೆಪಿ ತನಗೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವವರ ದನಿಯನ್ನು ಅಡಗಿಸುವ ಕೆಲಸ ಮಾಡುತ್ತಿದೆ. ಇದನ್ನು ಎದುರಿಸಲು ನಾವು ಒಗ್ಗೂಡಬೇಕಾಗಿದೆ ಎಂದರು.

    ಫ್ಯಾಸಿಸ್ಟ್ ಶಕ್ತಿಗಳು ವೈವಿಧ್ಯತೆಯನ್ನು ಸಹಿಸಲಾರವು. ಆ ಶಕ್ತಿಗಳು ನಮ್ಮ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಮನುಸ್ಮೃತಿ ಸಂವಿಧಾನ. ಅದಕ್ಕಾಗಿಯೇ ದೇಶದಲ್ಲಿ ಗುಂಪುಹತ್ಯೆ, ಹಲ್ಲೆ ಮೊದಲಾದವುಗಳು ನಡೆಯುತ್ತಿವೆ. ಹಿಂದಿ ಮಾತ್ರ ಶ್ರೇಷ್ಟವಲ್ಲ. ಕನ್ನಡ, ಮಲೆಯಾಳಂ, ತೆಲುಗು, ತಮಿಳು ಮೊದಲಾದ ಭಾಷೆಗಳು ಭಾರತದ ಸೌಂದರ್ಯವನ್ನು ಹೆಚ್ಚಿಸಿವೆ. ಆದರೆ ದೇಶದಲ್ಲಿ ಏನಾಗುತ್ತಿದೆ. ಇತ್ತೀಚಿನ ಸರ್ಕಾರದ ನೀತಿಗಳನ್ನು ಖಂಡಿಸಿ ಪ್ರತಿಭಟಿಸುತ್ತಿರುವ ಯುವ ಸಮುದಾಯವನ್ನು ದೇಶದ್ರೋಹಿಗಳೆಂದು ಕರೆಯುತ್ತಿದ್ದಾರೆ. ಆದರೂ ಯುವಜನತೆ ಎಚ್ಚೆತ್ತುಕೊಂಡು ಹೋರಾಟಕ್ಕೆ ಇಳಿದಿರುವುದು ಶ್ಲಾಘನೀಯ ಎಂದರು.

     ನಾವು ಕಠಿಣ ಪರಿಸ್ಥಿಯಲ್ಲಿ ಜೀವಿಸುತ್ತಿದ್ದೇವೆ. ನಮ್ಮ ಮುಂದೆ ಹಲವು ಸವಾಲುಗಳು ನರ್ತನ ಮಾಡುತ್ತಿವೆ. ಫ್ಯಾಸಿಸ್ಟ್ ಶಕ್ತಿಗಳು ನಮ್ಮಿಂದ ನೆಮ್ಮದಿಯನ್ನು ಕಿತ್ತುಕೊಳ್ಳುತ್ತಿವೆ. ದೇಶವನ್ನು ಕಸಿದುಕೊಂಡಿವೆ. ಸ್ವಾತಂತ್ರ್ಯ ಹರಣವಾಗುತ್ತಿದೆ. ಮೌಲ್ಯಗಳಿಗೆ ಧಕ್ಕೆ ಒದಗಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಪ್ರಗತಿಪರ ಸಾಹಿತಿಗಳ ವೇದಿಕೆ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಕಾರ್ಮಿಕ ಸಂಘಟನೆಗಳು ಜನವರಿ 8ರಂದು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದೆ ಎಂದು ತಿಳಿಸಿದರು.

     ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲದರಲ್ಲೂ ರಾಜಕೀಯವಿದೆ. ರಾಜಕೀಯವಿಲ್ಲದ ಕ್ಷೇತ್ರವೇ ಇಲ್ಲ. ಬರಹಗಾರರು ಯಾವುದಾದರೂ ಒಂದು ಕಡೆ ಗುರುತಿಸಿಕೊಳ್ಳಲೇಬೇಕು. ಅದು ಬಲಪಂಥೀಯವಾಗಿರಬಹುದು ಇಲ್ಲವೇ ಎಡ ಪಂಥೀಯವಾಗಿರಬಹುದು. ಇದರಿಂದ ಯಾರೂ ಹೊರತಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಪ್ರಗತಿಪರ ಬರಹಗಾರರು ಭಾರತದ ಸಂವಿಧಾನ ಉಳಿಸಲು, ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತಷ್ಟು ಶ್ರಮಿಸಬೇಕು ಎಂದರು.

     ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿ, ಇಂದಿನ ವಾತಾವರಣದಲ್ಲಿ ಪ್ರಗತಿಪರವಾಗಿ ಮಾತನಾಡಿದರೂ ಪಕ್ಷಕ್ಕೆ ಹೋಲಿಸುವ, ಅನುಮಾನಿಸುವ ಗೊಂದಲ ಸ್ಥಿತಿಯಲ್ಲಿ ನಾವಿದ್ದೇವೆ. ಇಂದು ಪಕ್ಷ ಬದ್ಧ ಬೌದ್ಧಿಕ ವಲಯ ಸೃಷ್ಟಿಯಾಗಿದೆ. ನಮ್ಮೆಲ್ಲರಿಗೂ ವಿಶ್ವಾಸಾರ್ಹದ ಪ್ರಶ್ನೆ ಕಾಡುತ್ತಿದೆ. ಇಂದು ಇತಿಹಾಸಕಾರರು ಹಾಗೂ ಕಾನೂನು ತಜ್ಞರು ವಿಭಜಿತಗೊಂಡಿದ್ದಾರೆ. ಕಾನೂನು ತಜ್ಞರಲ್ಲಿ ಪಕ್ಷಬದ್ಧತೆಯನ್ನು ತೋರಿಸುವ ಕಾಲ ಬಂದಿದೆ. ಭಾರತದಲ್ಲಿ ನಿಜವಾದ ಇತಿಹಾಸ ತಜ್ಞರಿಗೆ ಖಡ್ಡಾಯ ರಜೆಯನ್ನು ಘೋಷಿಸಿ ಅವರನ್ನು ಮನೆ ಕಳುಹಿಸಿ ರಾಜಕಾರಣಿಗಳೇ ಇತಿಹಾಸ ತಜ್ಞರಾಗಿದ್ದಾರೆ ಎಂದರು.

     ಇತಿಹಾಸವನ್ನು ಓದಿಕೊಂಡ ರಾಜಕಾರಣಿಯೊಬ್ಬ ಹೇಳುವ ಇತಿಹಾಸವನ್ನು ಕೇಳಬಹುದು. ಹಾಗಾದರೆ ಅದು ಪ್ರಜಾಪ್ರಭುತ್ವದ ವಿಸ್ಮಯ. ಆದರೆ ಅಂತಹ ರಾಜಕಾರಣಿಗಳು ನಮ್ಮಲ್ಲಿಲ್ಲ. ಇತಿಹಾಸ, ಕಾನೂನು, ಸಾಹಿತ್ಯ, ಅಭಿಪ್ರಾಯಗಳನ್ನು ಪಕ್ಷ ಬದ್ಧತೆಯಿಂದ ನೋಡುವವರೆ ಹೆಚ್ಚಾಗಿದ್ದಾರೆ. ಪಕ್ಷಬದ್ದವಾಗಿರುವ ಬೌದ್ಧಿಕ ವಲಯ ನಮ್ಮಲ್ಲಿದೆ. ಒಂದು ಪಕ್ಷಕ್ಕೆ ಒಲವನ್ನು ತೋರಿಸುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತಪ್ಪಲ್ಲ. ಯಾವುದೇ ವ್ಯಕ್ತಿಯಾದರೂ ಪಕ್ಷದ ಬಗೆಗಿನ ಒಲವಿನಿಂದ ಪಕ್ಷಕ್ಕೆ ತನ್ನ ನಾಲಿಗೆಯನ್ನು ಮಾರಿಕೊಳ್ಳಬಾರದು. ಪಕ್ಷದೊಳಗಿದ್ದು ಪಕ್ಷವನ್ನು ಮೀರಿದ ನಾಯಕತ್ವ ಗುಣವನ್ನು ಹೊಂದಬೇಕು. ಅದು ನಿಜವಾದ ನಾಯಕತ್ವ ಎಂದರು.

    ಜಾತಿಯೊಳಗಿದ್ದು ಜಾತಿಯನ್ನು ಮೀರಿದ ಸಾಮಾಜಿಕ ನಾಯಕತ್ವ ನಮಗೆ ಬೇಕಾಗಿದೆ. ಪಕ್ಷದ ಒಲವಿಗೆ ಅದರ ವಕ್ತಾರಾಗಿ ಕೆಲಸ ಮಾಡುವುದು ತಪ್ಪು. ವ್ಯಕ್ತಿಗೆ ಸ್ವವಿಮರ್ಶೆ ಬಹಳ ಮುಖ್ಯವಾಗುತ್ತದೆ. ಪ್ರತಿನಾಯಕತ್ವದಿಂದ ಸಾಹಿತ್ಯ, ಸಾಂಸ್ಕøತಿಕತೆಯನ್ನು ಅರ್ಥೈಸಿಕೊಳ್ಳಬಹುದು. ಧಾರ್ಮಿಕ ಮೂಲಭೂತವಾದವೇ ರಾಷ್ಟ್ರೀಯವಾದ ಅಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯವಾದವನ್ನು ಅಪಮೌಲ್ಯ ಮಾಡಲಾಗುತ್ತಿದೆ. ಮಠಮಾನ್ಯಗಳು ಧರ್ಮವನ್ನು ಹೇಳದೆ ಜಾತಿಯನ್ನು ಕುರಿತು ಹೇಳುತ್ತವೆ. ಸಾಮಾಜಿಕ ವಲಯದ ಅಪ ವ್ಯಾಖ್ಯಾನ ಮಾಡುತ್ತಿವೆ. ಇವೆಲ್ಲವುಗಳಿಂದ ಮುಂದಿನ ಯುವಕರಿಗೆ ಗೊಂದಲ ಸೃಷ್ಟಿಯಾಗುತ್ತಿದೆ ಎಂದರು.

       ಇದರಿಂದ ಹೊರ ಬರಲು ಯುವ ಪೀಳಿಗೆ ಕನ್ನಡ ಸಾಹಿತ್ಯವನ್ನು ಹೆಚ್ಚು ಓದಬೇಕು. ಪಂಪನು ಕುಲಪದ್ಧತಿಯನ್ನು ಕುರಿತು ಮರುವ್ಯಾಖ್ಯಾನ ಮಾಡಿದವನು ರಾಜಕೀಯದೊಳಗೆ ಪ್ರತಿನಾಯಕತ್ವ ಸೃಷ್ಟಿಸಿದನು ಎಂದ ಅವರು, ವಚನ ಸಾಹಿತ್ಯದಲ್ಲಿ ಬರುವ ಸುಧಾರಕರನ್ನು ಓದಬೇಕು. ಕನ್ನಡ ಸಾಹಿತ್ಯವನ್ನು ಓದುವ ಮೂಲಕ ಮರು ಚಿಂತನೆ ಮಾಡುವ ಅಗತ್ಯವಿದೆ ಎಲ್ಲರೂ ಪ್ರಗತಿಪರ ಆಶಯಗಳನ್ನು ಹೊಂದಬೇಕು. ಬೌದ್ಧಿಕ ವಲಯ ಪಕ್ಷಬದ್ಧ ವಾಗಿರುವ ಬದಲಾಗಿ ಜನಬದ್ದ, ತತ್ವ ಬದ್ಧ ಬೌದ್ಧಿಕ ವಲಯವಾಗಬೇಕು ಎಂದರು.

      ಪ್ರೋ. ಜಿ.ಎಂ ಶ್ರೀನಿವಾಸಯ್ಯ ಮಾತನಾಡಿ, ಯುವ ಬರಹಗಾರರು ಮುಕ್ತ ಮನಸ್ಸಿನ ಆಲೋಚನೆ ಮುಕ್ತ ಬರಹಗಳನ್ನು ಬರೆದರೆ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳನ್ನು ಕಾಣಬಹುದಾಗಿದೆ. ದೇಶ ಆತಂಕ ಸ್ಥಿತಿಯಲ್ಲಿದೆ ಯುವ ಜನತೆ ಮುಕ್ತ ಚಿಂತನೆ ಮಾಡಿ, ನಿಮಗೆ ಹಾಗೂ ದೇಶಕ್ಕೆ ಮೋಸ ಆಗದಂತೆ ನಿಮ್ಮ ಮನಸ್ಥಿತಿಗಳನ್ನು ಬೆಳೆಸಿಕೊಳ್ಳಿ ಎಂದರು.

     ಕಾರ್ಯಕ್ರಮದಲ್ಲಿ ಹಲವು ವಿಚಾರಗೋಷ್ಠಿಗಳು ಹಾಗೂ ಸಂವಾದಗಳು ನಡೆದವು. ಕಾರ್ಯಗಾರದ ನಿರ್ದೇಶಕರಾದ ಭಕ್ತರಹಳ್ಳಿ ಕಾಮರಾಜ್, ಡಾ ರಂಗಾರೆಡ್ಡಿ ಕೋಡಿರಾಂಪುರ, ಜಿಲ್ಲಾ ಸಂಚಾಲಕರಾದ ಡಾ ನಾಗಭೂಷಣ ಬಗ್ಗನಡು, ಡಾ. ಓ ನಾಗರಾಜು, ಸೋಮಶೇಖರ್, ನ್ಯಾಯವಾದಿ ಎಸ್ ರಮೇಶ್, ಪ್ರೊ.ದೊರೈರಾಜು, ರಾಜಪ್ಪ ದಳವಾಯಿ, ಕೆ.ಜೆ ಸುರೇಶ್, ಉಪನ್ಯಾಕಿ ಡಾ.ಗೀತಾವಸಂತ, ಉಪನ್ಯಾಸಕ ಶಿವಣ್ಣ ಬೆಳವಾಡಿ, ವೆಂಕಟರೆಡ್ಡಿ ರಾಮರೆಡ್ಡಿ, ಕವಯಿತ್ರಿ ಶೈಲಾ ನಾಗರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap