ಹಬ್ಬಿದ ಆಶ್ರಯ ಮನೆ ವದಂತಿ : ಜಮಾಯಿಸಿದ ಸಾವಿರಾರು ಮಹಿಳೆಯರು

ದಾವಣಗೆರೆ

    ಆಶ್ರಯ ಮನೆಗೆ ಶಾಸಕರ ಮನೆ ಬಳಿ ಅರ್ಜಿ ವಿತರಿಸಲಾಗುತ್ತಿದೆಯೆಂಬ ವದಂತಿ ಹರಡುತ್ತಿದ್ದಂತೆ ಸಾವಿರಾರು ಮಹಿಳೆಯರು, ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ನಿವಾಸದ ಎದುರು ಜಮಾಯಿಸಿ ಘಟನೆ ಶುಕ್ರವಾರ ನಡೆಯಿತು.

    ಸಾಮಾಜಿಕ ಜಾಲತಾಣಗಳು ಸೇರಿದಂತೆ, ಬಾಯಿಂದ ಬಾಯಿಗೆ ಹರಡಿದ ವದಂತಿಗೆ ಶಾಮನೂರು ಶಿವಶಂಕರಪ್ಪನವರ ಮನೆ ಎದುರು ಜಮಾಯಿಸಿದ ಸಾವಿರಾರು ಜನರು, ತಮಗೆ ಆಶ್ರಯ ಮನೆ ಸಿಗಬಹುದು, ಅದಕ್ಕೆ ಅರ್ಜಿ ಕೊಟ್ಟೆ ಬಿಡುತ್ತಾರೆಂಬ ಆಸೆಗಣ್ಣಿನಿಂದ ಮುಗಿಬಿದ್ದಿದ್ದರಿಂದ ಶಾಮನೂರು ನಿವಾಸ, ಅದರ ಎದುರಿನ ಉದ್ಯಾನವನವನ್ನು ಬಳಿಸಿಕೊಂಡು ಲಕ್ಷ್ಮೀಫ್ಲೋರ್ ಮಿಲ್ ವರೆಗೂ ಸರದಿ ಸಾಲು ಹನುಮಂತನ ಬಾಲದಂತೆ ಬೆಳೆದಿತ್ತು.

   ಅರ್ಜಿ ಪಡೆಯುವ ಆಸೆಯಿಂದ ಸಾವಿರಾರು ಜನ ಜಮಾಯಿಸಿದ್ದರಿಂದ ನೂಕಾಟ, ತಳ್ಳಾಟ, ಪರಸ್ಪರ ಜಗಳ, ಕಿತ್ತಾಡಿಕೊಂಡ ಘಟನೆಯೂ ನಡೆಯಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಗೊಂದಲ, ಗದ್ದಲದ ವಾತಾವರಣವನ್ನು ತಿಳಿಗೊಳಿಸಲು ಹರ ಸಾಹಸ ಪಟ್ಟರು.

   ಕಳೆದ ಶನಿವಾರದಿಂದಲೇ ಶಾಸಕರ ಕಚೇರಿಯಲ್ಲಿ ಆಶ್ರಯ ಮನೆಗಳ ಅರ್ಜಿ ವಿತರಿಸಲಾಗುತ್ತಿದೆಯೆಂಬುದಾಗಿ ಕಿಡಿಗೇಡಿಗಳು ಪಾಲಿಕೆಯ ಹೆಸರಿನಲ್ಲಿ ರಾಜೀವ್ ಗಾಂಧಿ ರೂರಲ್ ಹೌಸಿಂಗ್ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ಪಾಲಿಕೆ ಚಿಹ್ನೆ ಬಳಸಿಕೊಂಡಿದ್ದ ಕ್ರಮ ಸಂಖ್ಯೆ ಸಮೇತವಿದ್ದ ಅರ್ಜಿಗಳು ವಾಟ್ಸಪ್‍ನಲ್ಲಿ ಹರಿ ಬಿಟ್ಟಿದ್ದರಿಂದ ಒಬ್ಬರಿಂದ ಒಬ್ಬರಿಗೆ ಹರಡಿದಾಡಿ ಸಾವಿರಾರು ಸಂಖ್ಯೆಯಲ್ಲಿ ಶಾಸಕರ ಮನೆ ಎದುರು ಕಳೆದ ರಾತ್ರಿಯಿಂದಲೇ ಶಾಸಕರ ನಿವಾಸದ ಎದುರು ಭಾರತ ಕಾಲನಿ, ಎಸ್.ಎಂ.ಕೃಷ್ಣ ನಗರ, ಹೊಂಡದ ಸರ್ಕಲ್, ಆಜಾದ್ ನಗರ, ಶೇಖರಪ್ಪ ನಗರ, ಕೆಟಿಜೆ ನಗರ, ನಿಟುವಳ್ಳಿ, ಜಾಲಿ ನಗರ, ಬಾಷಾ ನಗರ, ಅಹಮ್ಮದ್ ನಗರ, ಬೂದಾಳ್ ರಸ್ತೆ ಸೇರಿದಂತೆ ವಿವಿಧೆಡೆಯಿಂದ ಬಂದು ಜಮಾಯಿಸಿದ್ದರು.

   ಅರ್ಜಿ ಕೊಡುತ್ತಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಕೆಲವರು, ಅರ್ಜಿ ಕೊಡುವುದಾಗಿ ತಮ್ಮನ್ನು ಇಲ್ಲಿ ಕರೆಸಿಕೊಂಡು ಸತಾಯಿಸಲಾಗುತ್ತಿದೆ. ಈಗ ಯಾರೂ ಸಹ ಯಾವುದೇ ಮಾಹಿತಿ ನೀಡುತ್ತಿಲ್ಲ. ಅರ್ಜಿ ಕೇಳಲು ಹೋದವರಿಗೆ ಹೊರಗೆ ಕಳಿಸುತ್ತಿದ್ದಾರೆ. ಕಳೆದ ರಾತ್ರಿಯಿಂದಲೇ ಇಲ್ಲಿ ಅರ್ಜಿಗಾಗಿ ಕಾಯುತ್ತಿದ್ದೇವೆ. ರಾತ್ರಿಯಿಂದ ನಾವು ಇಲ್ಲಿದ್ದರೂ ಈಗ ಬಂದವರೇ ಮುಂದೆ ನುಗ್ಗುತ್ತಿದ್ದಾರೆಂದು ಕಿಡಿಕಾರಿದರು.

   ಆಶ್ರಯ ಅರ್ಜಿಗಾಗಿ ಕಾದು ನಿಂತವರ ಜೊತೆಗೆ ಮತ್ತೆ ಮತ್ತೆ ಜನರ ಜಾತ್ರೆ ನೆರೆಯುತ್ತಿದ್ದುದನ್ನು ಕಂಡ ಪೊಲೀಸರೂ ಸ್ಥಳಕ್ಕೆ ಧಾವಿಸಿ, ಮಹಿಳೆಯರನ್ನು ಸಮಾಧಾನಿಸಲು ಪ್ರಯತ್ನಿಸಿದರು. ಅದರಲ್ಲೂ ಬಡಾವಣೆ ಠಾಣೆ ಸಬ್ ಇನ್ಸಪೆಕ್ಟರ್ ವೀರಬಸಪ್ಪ ಕುಸಲಾಪುರ ಮುಂದಿನ ದಿನಗಳಲ್ಲಿ ಆಶ್ರಯ ಅರ್ಜಿಗಳನ್ನು ವಿತರಿಸಲಾಗುತ್ತದೆ. ಸದ್ಯಕ್ಕೆ ಯಾವುದೇ ಅರ್ಜಿ ವಿತರಿಸುತ್ತಿಲ್ಲವೆಂದು ಎಷ್ಟೇ ಹೇಳಿದರೂ ನಮ್ಮನ್ನು ಇಲ್ಲಿಗೆ ಬರುವಂತೆ ಹೇಳಿ ಈಗ ಅರ್ಜಿ ಕೊಡುವುದಿಲ್ಲವೆಂದರೆ ಹೇಗೆ? ಪದೇಪದೇ ಕೆಲಸ ಬಿಟ್ಟು ಬರಲು ಸಾಧ್ಯವೂ ಇಲ್ಲ. ಏನೇ ಆದರೂ ಅರ್ಜಿ ಪಡದೇ ಹೋಗುತ್ತೇವೆಂದು ಪಟ್ಟು ಹಿಡಿದರು.

  ಅಂತಿಮವಾಗಿ ಸದ್ಯಕ್ಕೆ ಶಾಸಕರ ಕಚೇರಿಯಿಂದಾಗಲೀ, ಮನೆಯಲ್ಲಾಗಲೀ ಆಶ್ರಯ ಅರ್ಜಿಗಳನ್ನು ವಿತರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಪಾಲಿಕೆಯಿಂದಲೇ ಅರ್ಜಿಗಳನ್ನು ವಿತರಣೆ ಮಾಡಲಾಗುತ್ತದೆ ಎಂಬುದಾಗಿ ಅಧಿಕಾರಿಗಳು, ಮುಖಂಡರು ಹೇಳುತ್ತಿದ್ದಂತೆಯೇ ಆಕ್ರೋಶಗೊಂಡ ಮಹಿಳೆಯರು, ಬಡವರು, ಗರ್ಭಿಣಿ, ಬಾಣಂತಿಯರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಆಶ್ರಯ ಅರ್ಜಿ ಕೊಡುತ್ತಾರೆಂಬು ಹೇಳಿ ಕಳಿಸಿದ್ದವರಿಗೆ ಹಿಡಿ ಶಾಪ ಹಾಕುತ್ತ ಮನೆ ಕಡೆ ತೆರಳಿದರು.

   ಆಶ್ರಯ ಅರ್ಜಿಗೆ ಕಾದಿದ್ದ ಮಹಿಳೆಯರು ಅದರಲ್ಲೂ ಗರ್ಭಿಣಿಯರು ಕಿರುಚಾಡಿದ್ದರಿಂದ ಗೊಂದಲ ಉಂಟಾಗಿತ್ತು. ಅರ್ಜಿ ವಿಚಾರಕ್ಕೆ ಇಬ್ಬರು ಮಹಿಳೆಯರ ಮಧ್ಯೆ ಆರಂಭವಾದ ಜಗಳವು ಪರಸ್ಪರರ ಕೈ-ಕೈ ಮಿಲಾಯಿಸುವ ಹಂತವನ್ನು ತಲುಪಿತ್ತು. ಇಷ್ಟೆಲ್ಲಾ ಜಗಳ, ಗಲಾಟೆಯಾಗು ತ್ತಿದ್ದರೂ ಅರ್ಜಿಗಾಗಿ ಬಂದಿದ್ದ ಮಹಿಳೆಯರಂತೂ ಜಗಳ ಬಿಡಿಸುವ ಪ್ರಯತ್ನ ಮಾಡಲಿಲ್ಲ. ಇನ್ನು ಮಕ್ಕಳು, ಹಸುಗೂಸುಗಳು ತುಂತುರು ಮಳೆ, ಚಳಿಯಲ್ಲೇ ನಡುಗುತ್ತಾ ಅಳುತ್ತಾ ನಿಂತಿದ್ದವು.

   ಅರ್ಜಿಗಾಗಿ ನೆರೆದಿದ್ದ ಜನರಿಗೆ ಪಾಲಿಕೆಯಿಂದಲೇ ಅರ್ಜಿ ವಿತರಿಸಲಾಗುತ್ತದೆಂಉದು ಹೇಳಿ ಕಳಿಸುವಷ್ಟರಲ್ಲಿ ಎಸ್‍ಐ ವೀರಬಸಪ್ಪ ಕುಸಲಾಪುರ ಹಾಗೂ ಸಿಬ್ಬಂದಿ ಸಾಕು ಸಾಕಾಗಿ ಹೋದದ್ದಂತು ಸುಳ್ಳಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link