ಬಳ್ಳಾರಿ:
ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅವರ 150ನ ಜನ್ಮವರ್ಷಾಚರಣೆಯನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈ ಬಾರಿ ಕರ್ನಾಟಕದಲ್ಲಿ ಗಾಂಧೀಜಿ ಹೆಜ್ಜೆಗಳು ಕುರಿತ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಹಾಗೂ ರೇಖಾಚಿತ್ರಗಳ ಪ್ರದರ್ಶನ, ಎಲ್‍ಇಡಿ ಬೆಳಕಿನಲ್ಲಿ ಗಾಂಧೀಜಿ ಸಂದೇಶಗಳ ಬಿತ್ತರ, ಗಾಂಧೀಜಿ ವಿಚಾರಧಾರೆಗಳುಳ್ಳ ಸ್ತಬ್ಧಚಿತ್ರಗಳ ಪ್ರದರ್ಶನ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮಹಾತ್ಮಾ ಗಾಂಧೀಜಿ ಜನ್ಮವರ್ಷಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಅ.2ರಂದು ಬೆಳಗ್ಗೆ 9.30ಕ್ಕೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಕೆ.ಶಿವಕುಮಾರ ಅವರು ಚಾಲನೆ ನೀಡಲಿದ್ದಾರೆ. ಕರ್ನಾಟಕದಲ್ಲಿ ಗಾಂಧೀಜಿ ಹೆಜ್ಜೆಗಳು ಅಪರೂಪದ ಛಾಯಾಚಿತ್ರ ಪ್ರದರ್ಶನಕ್ಕೆ ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರು ಚಾಲನೆ ನೀಡಲಿದ್ದಾರೆ. ಶಾಸಕ ಸೋಮಶೇಖರರೆಡ್ಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಶಾಸಕರು,ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಕಲಾವಿದ ಮಂಜುನಾಥ ಗೋವಿಂದವಾಡ ಅವರ ರೇಖಾಚಿತ್ರಗಳಲ್ಲಿ ಅರಳಿದ ಗಾಂಧೀಜಿ ಚಿತ್ರಗಳ ಪ್ರದರ್ಶನ, ಮಹಾತ್ಮಾ ಗಾಂಧೀಜಿ ಅವರ ಇಡೀ ಜೀವನ-ಸಾಧನೆ ಸಂಗ್ರಹದ ಎರಡು ಕಿರುಹೊತ್ತಿಗೆಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಗಾಂಧೀಜಿ ಅವರಿಗೆ ಪ್ರಿಯವಾದ ಭಜನ ಗಾಯನ ಹಾಗೂ ಸಂಪನ್ಮೂಲ ವ್ಯಕ್ತಿಯೊಬ್ಬರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ಹೇಲಿದರು.
ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮವರ್ಷಾಚರಣೆ ಅಂಗವಾಗಿ ಮಹಾತ್ಮಾಗಾಂಧೀಜಿ ಅವರ ವಿಚಾರಧಾರೆ ಕುರಿತು ಎರಡು ಸ್ತಬ್ಧಚಿತ್ರಗಳನ್ನು ಸಿದ್ದಪಡಿಸಿ ರಾಜ್ಯಾದ್ಯಂತ ಎಲ್ಲ 30 ಜಿಲ್ಲೆಗಳ ಆಯ್ದ ತಾಲೂಕೂಗಳಲ್ಲಿ “ಗಾಂಧಿ-150 ಅಭಿಯಾನ” ಕಾರ್ಯಕ್ರಮ ಏರ್ಪಡಿಸಲಾಗುತ್ತಿದ್ದು, ಆ ಎರಡು ಸ್ತಬ್ಧಚಿತ್ರಗಳಲ್ಲಿ ಒಂದು ಸ್ತಬ್ಧಚಿತ್ರ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಗೆ ಅ.12ರಂದು ಮಧ್ಯಾಹ್ನ 12ಕ್ಕೆ ಮತ್ತು ಹಗರಿಬೊಮ್ಮನಳ್ಳಿಗೆ ಸಂಜೆ 4ಕ್ಕೆ ಬರಲಿದೆ. ಅ.13ರಂದು ಮಧ್ಯಾಹ್ನ 12ಕ್ಕೆ ಬಳ್ಳಾರಿಗೆ ಆಗಮಿಸಲಿದೆ ಎಂದು ವಿವರಿಸಿದ ಎಡಿಸಿ ಸೋಮಶೇಖರ ಅವರು, ಈ ಸಂದರ್ಭದಲ್ಲಿ ಆಯಾ ತಾಲೂಕುಗಳ ತಹಸೀಲ್ದಾರರು ಸ್ತಬ್ಧಚಿತ್ರವನ್ನು ಗಡಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಬೇಕು ಮತ್ತು ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಆಹ್ವಾನಿಸಬೇಕು ಎಂದು ಅವರು ಸೂಚನೆ ನೀಡಿದರು.
ನಗರದ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಎಡಿಸಿ ಸೋಮಶೇಖರ ಅವರು, ಮಹಾತ್ಮಾ ಗಾಂಧೀಜಿ ಅವರ ಸಂದೇಶಗಳನ್ನು ಮಕ್ಕಳಲ್ಲಿ ಬಿತ್ತುವ ಕೆಲಸ ಮಾಡಿ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಮಹಾತ್ಮಾಗಾಂಧೀಜಿ: ವಿಶೇಷ ಕಾರ್ಯಕ್ರಮಗಳ ಕುರಿತು ಸಭೆಗೆ ವಿವರಿಸಿದರು. ಈ ಸಂದರ್ಭದಲ್ಲಿ ಗಾಂಧಿಭವನದ ಕಾರ್ಯದರ್ಶಿ ಟಿ.ಜಿ.ವಿಠ್ಠಲ್ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
